ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮಾಡಿದವರನ್ನು ಇದುವರೆಗೆ ಪತ್ತೆ ಹಚ್ಚಿಲ್ಲ. ಈ ವಿಚಾರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೌನವಾಗಿ ಕಣ್ಣು ಮುಚ್ಚಿ ಕುಳಿತಿದ್ದಾರೆ. ಇಂತಹ ಸನ್ನಿವೇಶದಲ್ಲಿ ತಮಗೆ ಸರ್ಕಾರದಿಂದ ಸಿಕ್ಕಿದ 5 ರಾಷ್ಟ್ರೀಯ ಪ್ರಶಸ್ತಿಗಳನ್ನು ಇಟ್ಟುಕೊಳ್ಳುವ ಯಾವುದೇ ಆಸೆ, ಮನಸ್ಸು ಇಲ್ಲ ಎಂದು ಖ್ಯಾತ ನಟ ಪ್ರಕಾಶ್ ರೈ ಹೇಳಿದ್ದಾರೆ.
ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾದ 11ನೇ ರಾಜ್ಯ ಸಭೆಯಲ್ಲಿ ಮಾತನಾಡಿದ ಅವರು, ತಮಗೆ ಸಿಕ್ಕಿರುವ ಪ್ರಶಸ್ತಿಗಳನ್ನು ಹಿಂತಿರುಗಿಸುವುದಾಗಿ ತಿಳಿಸಿದ್ದಾರೆ.
ನನಗೆ ಈ ಪ್ರಶಸ್ತಿ ಬೇಡ, ನೀವಿಟ್ಟುಕೊಳ್ಳಿ. ಒಳ್ಳೆಯ ದಿನಗಳು ಬರುತ್ತವೆ ಎಂದು ನನಗೆ ಹೇಳಬೇಡಿ ಎಂದು ಪ್ರಧಾನಿಯವರನ್ನುದ್ದೇಶಿಸಿ ಅವರು ಹೇಳಿದ್ದಾರೆ.
ನಾನೊಬ್ಬ ಖ್ಯಾತ ನಟ, ನೀವು ನಟನೆ ಮಾಡುವುದನ್ನು ನನಗೆ ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ ಎಂದು ಭಾವಿಸಿದ್ದೀರ? ನನಗೆ ಸ್ವಲ್ಪ ಗೌರವ ತೋರಿಸಿ, ನಾನೊಬ್ಬ ನಟ ಎಂಬ ವಾಸ್ತವವನ್ನು ಪರಿಗಣಿಸಿ ನನಗೆ ಸತ್ಯವೇನು, ನಟನೆಯೇನು ಎಂಬುದನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ ಎಂದು ಪ್ರಕಾಶ್ ರೈ ಟೀಕಿಸಿದರು.
ಗೌರಿ ಲಂಕೇಶ್ ಹತ್ಯೆ ವಿಚಾರದಲ್ಲಿ ಪ್ರಧಾನಿ ಮೋದಿಯವರು ಮೌನವಾಗಿರುವುದಕ್ಕೆ ಮತ್ತು ಕೆಲ ಬಲ ಪಂಥೀಯರು ಗೌರಿ ಲಂಕೇಶ್ ಕೊಲೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಕಮೆಂಟ್ ಮಾಡಿ ಸಂಭ್ರಮಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಗೌರಿಯವರ ಹತ್ಯೆ ಮಾಡಿದವರನ್ನು ಇದುವರೆಗೆ ಬಂಧಿಸಿಲ್ಲ. ಅದಕ್ಕಿಂತಲೂ ಹೆಚ್ಚು ಸಂಕಷ್ಟಕ್ಕೀಡು ಮಾಡುವ ವಿಷಯವೆಂದರೆ ಅವರ ಹತ್ಯೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಸಂಭ್ರಮಿಸುತ್ತಿರುವುದು. ಗೌರಿಯವರನ್ನು ಹತ್ಯೆ ಮಾಡಿದವರು ಯಾರೆಂದು ನಮಗೆ ಗೊತ್ತಾಗದಿರಬಹುದು ಆದರೆ ಸಾಮಾಜಿಕ ಮಾಧ್ಯಮದ ಮೂಲಕ ಕಟುವಾಗಿ ಟೀಕಿಸುವವರನ್ನು ನೋಡಬಹುದು. ಅವರಲ್ಲಿ ನಮ್ಮ ಪ್ರಧಾನಿಯನ್ನು ಅನುಸರಿಸುವವರೂ ಇದ್ದಾರೆ. ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಕುಳಿತಿರುವ ಪ್ರಧಾನಿಯನ್ನು ನಾವಿಲ್ಲಿ ನೋಡುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.