ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಅರ್ಚಕ ವಾಸುದೇವ್ ಕುಟುಂಬಕ್ಕೆ ಸಿಎಂ ಪರಿಹಾರ!

ಶುಕ್ರವಾರ ಸುರಿದ ಭಾರಿ ಮಳೆಯಲ್ಲಿ ನೀರುಪಾಲಾಗಿದ್ದ ಅರ್ಚಕ ವಾಸುದೇವ ಭಟ್ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ಶನಿವಾರ ಪರಿಹಾರ ಘೋಷಣೆ ಮಾಡಿದೆ.
ಅರ್ಚಕ ವಾಸುದೇವ್ ಅವರ ಕುಟುಂಬಸ್ಥರ ಭೇಟಿ ಮಾಡಿದ ಸಿಎಂ
ಅರ್ಚಕ ವಾಸುದೇವ್ ಅವರ ಕುಟುಂಬಸ್ಥರ ಭೇಟಿ ಮಾಡಿದ ಸಿಎಂ
ಬೆಂಗಳೂರು: ಶುಕ್ರವಾರ ಸುರಿದ ಭಾರಿ ಮಳೆಯಲ್ಲಿ ನೀರುಪಾಲಾಗಿದ್ದ ಅರ್ಚಕ ವಾಸುದೇವ ಭಟ್ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ಶನಿವಾರ ಪರಿಹಾರ ಘೋಷಣೆ ಮಾಡಿದೆ.
ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದು, ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿರುವ ಅರ್ಚಕ್ ವಾಸುದೇವ್ ಅವರ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ  ವಾಸುದೇವ್ ಅವರ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನೂ ಕೂಡ ಸರ್ಕಾರವೇ ಭರಿಸಲಿದೆ ಎಂದು ಹೇಳಿದ್ದಾರೆ.
ಇಂದು ಬೆಳಗ್ಗೆ ಘಟನೆ ನಡೆದಿದ್ದ ಕುರುಬರ ಹಳ್ಳಿಗೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಮಳೆ ಸಂತ್ರಸ್ಥ ಕುಟುಂಬಸ್ಥರನ್ನು ಭೇಟಿಯಾದರು. ಈ ವೇಳೆ ಅರ್ಚಕರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಸಿಎಂ, ರಾತ್ರಿ ಮಳೆಗೆ ಜೀವ  ತೆತ್ತವರ ಬಗ್ಗೆ ಬಹಳ ದುಃಖವಾಗಿದೆ. ಎಲ್ಲ ಮೃತರ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು ಎಂದರು. ಅಂತೆಯೇ ಸಾವಿನ ಸಂದರ್ಭದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಹೇಳಿದ ಸಿದ್ದರಾಮಯ್ಯ ಕೇವಲ  ರಾಜಕೀಯ ಕಾರಣಕ್ಕೆ ಬಿಜೆಪಿ ನಾಯಕರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಈ ಬಾರಿ ಹೆಚ್ಚು ಮಳೆ ಬಂದಿರುವುದೇ ಅನಾಹುತಕ್ಕೆ ಕಾರಣ. ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.  ಬಿಡುವಿಲ್ಲದೇ ಮಳೆ ಸುರಿಯುತ್ತಿರುವ ಕಾರಣ ರಾಜಕಾಲುವೆಯ ಹೂಳು ತೆಗೆಯಲೂ ಸಾಧ್ಯವಾಗುತ್ತಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಪ್ರತಿಪಕ್ಷಗಳಿಂದಲೂ ಸಂತ್ರಸ್ಥ ಕುಟುಂಬಕ್ಕೆ ಪರಿಹಾರ
ಇದೇ ವೇಳೆ ಪ್ರತಿಪಕ್ಷ ಬಿಜೆಪಿ ಕೂಡ ಮಳೆ ಸಂತ್ರಸ್ಥ ಕುಟುಂಬಕ್ಕೆ ಪರಿಹಾರ ನೀಡಿದ್ದು, ತಲಾ 1 ಲಕ್ಷ ರು. ಪರಿಹಾರ ನೀಡಿದ್ದಾರೆ. ನೀರಿನಲ್ಲಿ ಕೊಚ್ಚಿ ಹೋದ ವಾಸುದೇವ್ ಕುಟುಂಬ ಹಾಗೂ ಮನೆ ಗೋಡೆ ಕುಸಿದು ಸಾವನ್ನಪ್ಪಿದ  ಶಂಕರಪ್ಪ-ಕಮಲಮ್ಮ ದಂಪತಿಗಳ ಕುಟುಂಬವನ್ನು ಭೇಟಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವರಾದ ಸದಾನಂದಗೌಡ ಮತ್ತು ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಅವರು ಸಾಂತ್ವನ  ಹೇಳಿದರು. ಬಳಿಕ ಸಂತ್ರಸ್ಥ ಕುಟುಂಬಗಳಿಗೆ ತಲಾ 1 ಲಕ್ಷ ರು.ಗಳ ಪರಿಹಾರ ನೀಡಿದರು. ಅಂತೆಯೇ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರೂ ಕೂಡ ಮಳೆ ಸಂತ್ರಸ್ಥರ ಕುಟುಂಬಕ್ಕೆ ಭೇಟಿ  ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com