ಬೆಂಗಳೂರು ಮಳೆ ಅವಾಂತರ ಕುರಿತು ವರದಿ ಕೇಳಿದ ರಾಹುಲ್ ಗಾಂಧಿ!

ಭಾರಿಮಳೆಯಿಂದಾಗಿ ಬೆಂಗಳೂರಿನಲ್ಲಿ ಸಂಭವಿಸಿರುವ ಸಾವಿನ ಕುರಿತಂತೆ ವರದಿ ನೀಡುವಂತೆ ಎಐಸಿಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದಿಂದ ವರದಿ ಕೇಳಿದ್ದಾರೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಭಾರಿಮಳೆಯಿಂದಾಗಿ ಬೆಂಗಳೂರಿನಲ್ಲಿ ಸಂಭವಿಸಿರುವ ಸಾವಿನ ಕುರಿತಂತೆ ವರದಿ ನೀಡುವಂತೆ ಎಐಸಿಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದಿಂದ ವರದಿ ಕೇಳಿದ್ದಾರೆ ಎಂದು ತಿಳಿದುಬಂದಿದೆ.
ಶನಿವಾರ ಬೆಳಗ್ಗೆ ರಾಜ್ಯದ ಮುಖಂಡರಿಗೆ ರಾಹುಲ್ ಗಾಂಧಿ ಈ ಬಗ್ಗೆ ಮಾಹಿತಿ ನೀಡಿದ್ದು, ಮಳೆ ಅವಾಂತರ ಮತ್ತು ರಸ್ತೆಗುಂಡಿಗಳಿಂದ ಸಂಭವಿಸಿದ ಸಾವುಗಳ ಕುರಿತಂತೆ ವರದಿ ಮತ್ತು ಸರ್ಕಾರ ಕೈಗೊಂಡ ಕ್ರಮಗಳ ಕುರಿತು ವರದಿ ನೀಡುವಂತೆ ಕೇಳಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಅವರು, ಮಳೆ ಅವಾಂತರ ಕುರಿತಂತೆ ಸಿಎಂ ಸಿದ್ದರಾಮಯ್ಯರಿಂದ ವರದಿ ನೀಡುವಂತೆ ಕೇಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗಷ್ಟೇ ಪ್ರತಿಪಕ್ಷ ಬಿಜೆಪಿ ಮುಖಂಡರು ಬೆಂಗಳೂರು ಮಳೆ ಅವಾಂತರ ಹಾಗೂ ರಸ್ತೆಗುಂಡಿಗಳಿಂದಾಗಿ ಸಂಭವಿಸಿದ ಸಾವಿನ ಕುರಿತಂತೆ ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕ ಪ್ರತಿಭಟನೆ ನಡೆಸಿದ್ದರು. ಕಾಂಗ್ರೆಸ್ ಸರ್ಕಾರ ಸೂಕ್ತ ಮೂಲಭೂತ ಸೌಕರ್ಯ ನೀಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿತ್ತು. 
ಇದೀಗ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಸರ್ಕಾರದಿಂದ ಮಳೆ ಅವಾಂತರದ ಕುರಿತು ವರದಿ ಕೇಳಿದೆ.
ಕಳೆದೆರಡು ವಾರಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನಾದ್ಯಂತ ರಸ್ತೆಗಳು ಹಾಳಾಗಿದ್ದು, ರಸ್ತೆಗಳಲ್ಲಿ ಅಪಾಯಕಾರಿ ರಸ್ತೆಗುಂಡಿಗಳು ಬಾಯಿ ತೆರೆದು ನಿಂತಿವೆ. ಈಗಾಗಲೇ ರಸ್ತೆಗುಂಡಿಗೆ ನಾಲ್ಕು ಮಂದಿ  ಬಲಿಯಾಗಿದ್ದು, ಕಳೆದ ಅಕ್ಟೋಬರ್ 4ರಂದು ಮೈಸೂರು ರಸ್ತೆಯ ಮೇಲ್ಸೇತುವೆ ಬಳಿ ಆ್ಯಂಟನಿ ಜೋಸಫ್ ಮತ್ತು ಪತ್ನಿ ಸಗಾಯ್ ಮೇರಿ ಸಾವನ್ನಪ್ಪಿದ್ದರು. ಅಂತೆಯೇ ಕಳೆದ ಭಾನುವಾರ ನಾಯಂಡಹಳ್ಳಿ ಜಂಕ್ಷನ್ ನಲ್ಲಿ ರಾಧಾ ಅಂಜನಪ್ಪ ಎಂಬ ಮಹಿಳೆ ಹಾಗೂ ದೇವನಹಳ್ಳಿ ಮುಖ್ಯರಸ್ತೆಯಲ್ಲಿ ವೀಣಾ ಎಂಬುವವ ರಸ್ತೆಗುಂಡಿಗೆ ಬಲಿಯಾಗಿದ್ದಾರೆ. 
ಅಂತೆಯೇ ನಿನ್ನೆ ಸುರಿದ ಭಾರಿ ಮಳೆಗೆ ರಾಜ್ಯದಲ್ಲಿ ಒಟ್ಟು ಐದು ಮಂದಿ ಸಾವನ್ನಪ್ಪಿದ್ದು, ಬೆಂಗಳೂರಿನಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಕುರುಬರ ಹಳ್ಳಿಯಲ್ಲಿ ಅರ್ಚಕ ವಾಸುದೇವ್ ಮತ್ತು ಅದೇ ಪ್ರದೇಶದಲ್ಲಿರುವ ಜೆಸಿ ನಗರದ ನಿವಾಸಿಗಳಾದ ನಿಂಗಮ್ಮ ಮತ್ತು ಅವರ ಮಗಳು ಪುಷ್ಪಾ ಸಾವನ್ನಪ್ಪಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com