ವಿಧಾನಸೌಧ ವಜ್ರ ಮಹೋತ್ಸವ ವೆಚ್ಚ ರೂ.10ಕೋಟಿಗೆ ಇಳಿಕೆ

ಸಾರ್ವಜನಿಕರ ವಿರೋಧದ ನಡುವೆಯೂ ವಿಧಾನಸೌಧದ ವಜ್ರ ಮಹೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಬೇಕೆಂಬ ಸ್ಪೀಕರ್ ಕೆ.ಬಿ.ಕೋಳಿವಾಡ ಹಾಗೂ ಸಭಾಪತಿ ಡಿ.ಹೆಚ್. ಶಂಕರಮೂರ್ತಿಯವರ ಬಿಗಿಪಟ್ಟಿಗೆ ಹಿನ್ನಡೆಯುಂಟಾಗಿದ್ದು, ವಜ್ರ ಮಹೋತ್ಸವ ದುಂದುವೆಚ್ಚಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ...
ವಿಧಾನಸೌಧ
ವಿಧಾನಸೌಧ

ಬೆಂಗಳೂರು: ಸಾರ್ವಜನಿಕರ ವಿರೋಧದ ನಡುವೆಯೂ ವಿಧಾನಸೌಧದ ವಜ್ರ ಮಹೋತ್ಸವವನ್ನು ಅದ್ದೂರಿಯಾಗಿ ನೆರವೇರಿಸಬೇಕೆಂಬ ಸ್ಪೀಕರ್ ಕೆ.ಬಿ.ಕೋಳಿವಾಡ ಹಾಗೂ ಸಭಾಪತಿ ಡಿ.ಹೆಚ್. ಶಂಕರಮೂರ್ತಿಯವರ ಬಿಗಿಪಟ್ಟಿಗೆ ಹಿನ್ನಡೆಯುಂಟಾಗಿದ್ದು, ವಜ್ರ ಮಹೋತ್ಸವ ದುಂದುವೆಚ್ಚಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕತ್ತರಿ ಹಾಕಿದ್ದಾರೆ.

ವಜ್ರಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕೆಂದು ಪಟ್ಟು ಹಿಡಿದು ಕುಳಿತಿದ್ದ ಕೋಳಿವಾಡ ಹಾಗೂ ಶಂಕರಮೂರ್ತಿಯವರ ಆಗ್ರಹಗಳಿಗೆ ಸೊಪ್ಪು ಹಾಕದ ಸಿದ್ದರಾಮಯ್ಯ ಅವರು ಮಹೋತ್ವಸ ಆಚರಣೆಯನ್ನು 1 ದಿನಕ್ಕೆ ಮೊಟಕುಗೊಳಿಸಿ. ವೆಚ್ಚವನ್ನು ರೂ.10 ಕೋಟಿಗೆ ಮಿತಿಗೊಳಿಸಿದ್ದಾರೆ. ಅಲ್ಲದೆ, ಶಾಸಕರಿಗೆ ದುಬಾರಿ ನೆನಪಿನ ಕಾಣಿಕೆ ನೀಡದಂತೆ ಸ್ಪೀಕರ್ ಹಾಗೂ ಸಭಾಪತಿಗೆ ತಾಕೀತು ಮಾಡಿದ್ದಾರೆ. 

ಸ್ಪೀಕರ್ ಹಾಗೂ ಸಭಾಪತಿಯವರ ಒತ್ತಾಸೆಯ ಮೇರೆಗೆ ವಜ್ರಮಹೋತ್ಸವದ ಖರ್ಜು ವೆಚ್ಚವನ್ನು ರೂ.26 ಕೋಟಿ ಎಂದು ತೋರಿಸಿದ ಸಚಿವಾಲಯದ ಪ್ರಸ್ತಾವನೆಗೆ ಹಣಕಾಸು ಇಲಾಖೆ ಆಕ್ಷೇಪ ವ್ಯಕ್ತಪಡಿಸಿ ರೂ.10 ಕೋಟಿ ಗೆ ವೆಚ್ಚ ಕಡಿತಗೊಳಿಸುವಂತೆ ಸೂಚನೆ ನೀಡಿತ್ತು. ಈ ಕಡಜ ಅಂತಿಮವಾಗಿ ಮುಖ್ಯಮಂತ್ರಿಗಳ ಅವಗಾಹನೆ ಬಂದಿತ್ತು. 

ಆದರೂ, ಪಟ್ಟು ಬಿಡದ ಸ್ಪೀಕರ್ ಹಾಗೂ ಸಭಾಪತಿಗಳು ನಿನ್ನೆ ಬೆಳಿಗ್ಗೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ತೆರಳಿ ಉದ್ದೇಶಿತ ವೆಚ್ಚಕ್ಕೆ ಅನುಮೋದನೆ ನೀಡುವಂತೆ ಪಟ್ಟು ಹಿಡಿದಿದ್ದರು. ಇದಕ್ಕೆ ಸೊಪ್ಪು ಹಾಕದ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಅತಿವೃಷ್ಟಿಯಿದ್ದು, ಅನೇಕ ಕಡೆಗಳಲ್ಲಿ ಬರಗಾಲ ಇದೆ. ಇಂತಹ ಸಂದರ್ಭದಲ್ಲಿ ಕೋಟ್ಯಾಂತರ ಹಣವನ್ನು ಎರಡು ದಿನಗಳ ಕಾರ್ಯಕ್ರಮಕ್ಕೆ ವೆಚ್ಚ ಮಾಡುವುದು ಸರಿಯಲ್ಲ. ಅದರಲ್ಲೂ ಶಾಸಕರಿಗೆ ಚಿನ್ನದ ಬಿಸ್ಕತ್ತು, ಸಿಬ್ಬಂದಿಗೆ ಬೆಳ್ಳಿ ತಟ್ಟೆ ಇತ್ಯಾದಿ ದುಬಾರಿ ಕಾಣಿಕೆ ನೀಡಲು ಮುಂದಾದರೆ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಪ್ರತಿಪಕ್ಷಗಳಿಗೂ ಅಸ್ತ್ರ ಸಿಕ್ಕಂತಾಗುತ್ತದೆ. ಸರ್ಕಾರವನ್ನು ಟೀಕಿಸಲು ನಾವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com