ಬೆಂಗಳೂರು: ನಿತ್ಯ ಲಕ್ಷಾಂತರ ಪ್ರಯಾಣಿಕರನ್ನು ಹೊತ್ತು ಸಾಗುವ ನಮ್ಮ ಮೆಟ್ರೊ ಇಂದು ಆರು ವರ್ಷಗಳನ್ನು ಪೂರೈಸಿ ಏಳನೇ ವರ್ಷಕ್ಕೆ ಕಾಲಿಟ್ಟಿದೆ.
ಕೆಲವು ಸಮಸ್ಯೆಗಳು, ಸಾರ್ವಜನಿಕರ ಟೀಕೆಗಳ ನಡುವೆಯೂ ಜನಪ್ರಿಯತೆ ಗಳಿಸಿರುವ ನಮ್ಮ ಮೆಟ್ರೊ 6 ವರ್ಷಗಳ ಹಿಂದೆ ಅಂದರೆ 2011ರಲ್ಲಿ ಎಂ.ಜಿ.ರಸ್ತೆಯಿಂದ ಮೊದಲ ಬಾರಿಗೆ ಪ್ರಯಾಣ ಆರಂಭಿಸಿತ್ತು. ಅಂದು ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಮೆಟ್ರೊ ರೈಲು ಬೆಂಗಳೂರಿನಲ್ಲಿ ಉದ್ಘಾಟನೆಗೊಂಡಿದ್ದು.
ನಮ್ಮ ಮೆಟ್ರೊ ನಿಲ್ದಾಣದಲ್ಲಿ ಹಿಂದಿ ಸೂಚನ ಫಲಕಗಳನ್ನು ತೆಗೆದುಹಾಕಬೇಕೆಂದು ಕನ್ನಡಪರ ಸಂಘಟನೆಗಳ ಪ್ರತಿಭಟನೆ, ಎರಡನೇ ಹಂತದಲ್ಲಿ ನಾಗವಾರ-ಗೊಟ್ಟಿಗೆರೆ ಮಾರ್ಗದ ಜೋಡಣೆಗೆ ಒತ್ತಾಯ, ಪ್ರತಿ ರೈಲಿನಲ್ಲಿ ಬೋಗಿಗಳ ಸೇರ್ಪಡೆಗೆ ಮನವಿ ಇತ್ಯಾದಿ ಹತ್ತು ಹಲವು ಬೇಡಿಕೆಗಳನ್ನು ನಮ್ಮ ಮೆಟ್ರೊ ಕಂಡಿದೆ.
ವಾರದ ದಿನಗಳಲ್ಲಿ ಸರಾಸರಿ 3.5 ಲಕ್ಷ ಪ್ರಯಾಣಿಕರು ಮತ್ತು ವಾರಾಂತ್ಯಗಳಲ್ಲಿ ಸುಮಾರು 3.2 ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ. ಪ್ರಸ್ತುತ ನಮ್ಮ ಮೆಟ್ರೊದಲ್ಲಿ 3 ಬೋಗಿಗಳ 50 ಮೆಟ್ರೊ ರೈಲುಗಳಿವೆ. ಮುಂದಿನ ವರ್ಷ 6 ಬೋಗಿಗಳ ರೈಲಿಗೆ ವಿಸ್ತರಣೆಯಾದಾಗ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ ವರ್ಷಾಂತ್ಯಕ್ಕೆ ಎರಡು ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಸೇರ್ಪಡೆ ಮಾಡುವ ಮೂಲಕ ಪ್ರತ್ಯೇಕ ಮಹಿಳೆಯರ ಬೋಗಿಗಳು ಕೂಡ ಆರಂಭವಾಗಲಿದೆ. ದೆಹಲಿ ನಂತರ ಬೆಂಗಳೂರಿನ ಮೆಟ್ರೊ ರೈಲು ಎರಡನೆ ಅತಿದೊಡ್ಡ ಕಾರ್ಯನಿರ್ವಹಣೆಯ ಜಾಲವನ್ನು ಹೊಂದಿದೆ.
ಹೊಸ ವರ್ಷದ ಸಂದರ್ಭ ಮತ್ತು ಇತ್ತೀಚೆಗೆ ನಗರದಲ್ಲಿ ಭಾರೀ ಮಳೆ ಸುರಿದ ಸಮಯಗಳಲ್ಲಿ ಮೆಟ್ರೊ ಸಂಚಾರದ ಅವಧಿ ವಿಸ್ತರಿಸಿ ಪ್ರಯಾಣಿಕರಿಗೆ ಮೆಟ್ರೊ ರೈಲು ನಿಗಮ ಅನುಕೂಲ ಮಾಡಿಕೊಟ್ಟಿದೆ. ಎರಡನೇ ಹಂತದ ಮಾರ್ಗದ ಮೆಟ್ರೊ ರೈಲು ಸಂಚಾರಕ್ಕೆ ವಿಸ್ತೃತ ವರದಿಯನ್ನು ಮೆಟ್ರೊ ರೈಲು ನಿಗಮ ತಯಾರಿಸುತ್ತಿದೆ. ಕಾರ್ಯನಿರ್ವಹಣೆ ವೆಚ್ಚವನ್ನು ತಗ್ಗಿಸಲು ಕ್ರಮ ಕೈಗೊಳ್ಳುತ್ತಿದೆ.
ಪ್ರಯಾಣಿಕರ ವಾಹನ ಪಾರ್ಕಿಂಗ್, ಜಾಹಿರಾತು, ಮೆಟ್ರೊ ನಿಲ್ದಾಣಗಳಲ್ಲಿ ವಾಣಿಜ್ಯ ಉದ್ದೇಶಗಳಲ್ಲಿ ಮಳಿಗೆ ಹಾಕಲು ಸ್ಥಳವನ್ನು ಬಾಡಿಗೆ ನೀಡುವ ಮೂಲಕ ಆದಾಯವನ್ನು ಹೆಚ್ಚಿಸಲು ನಮ್ಮ ಮೆಟ್ರೊ ರೈಲು ನಿಗಮ ಕ್ರಮ ಕೈಗೊಂಡಿದೆ.
ಆದರೂ ಮೆಟ್ರೊ ರೈಲು ನಿಲ್ದಾಣ ಸಂಪರ್ಕ ಪ್ರಯಾಣಿಕರಿಗೆ ಇನ್ನೂ ಸುಗಮವಾಗಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಇತರ ಸಾರ್ವಜನಿಕ ಸಾರಿಗೆಗಳಿಗೆ ಸಂಪರ್ಕ ಹೊಂದಲು ಬಹುದೂರ ಸಾಗಬೇಕು ಮತ್ತು ಮೆಟ್ರೊ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂಬ ದೂರು ಸಾರ್ವಜನಿಕರಲ್ಲಿದೆ.