'ತುಳುಗೆ ಪ್ರಾದೇಶಿಕ ಭಾಷೆ ಮಾನ್ಯತೆ ನೀಡಿ': ಪ್ರಧಾನಿ ಮೋದಿಗೆ ಡಾ.ವೀರೇಂದ್ರ ಹೆಗ್ಗಡೆ ಮನವಿ

ತುಳು ಭಾಷೆಗೆ ಪ್ರಾದೇಶಿಕ ಭಾಷೆಯ ಸ್ಥಾನ ಮಾನ ನೀಡುವಂತೆ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಭಾಷಣ
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಭಾಷಣ
ಉಜಿರೆ: ತುಳು ಭಾಷೆಗೆ ಪ್ರಾದೇಶಿಕ ಭಾಷೆಯ ಸ್ಥಾನ ಮಾನ ನೀಡುವಂತೆ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು.
ಇಂದು ಉಜಿರೆಯ ರತ್ನವರ್ಮ ಕ್ರೀಡಾಂಗಣದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಮಹಾ ಸಮಾವೇಶ ಮತ್ತು ರುಪೇ ಕಾರ್ಡ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ   ಅವರನ್ನು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ತುಳುವಿನಲ್ಲೇ ಸ್ವಾಗತಿಸಿದರು. "ಇರೆಗ್‌ ಯಂಕಲ್‌ನ ಸ್ವಾಗತ... ಎಂದ ಡಾ.ಹೆಗ್ಗಡೆ, ತುಳು ಭಾಷೆಗೆ ಇತರ ಪ್ರಾದೇಶಿಕ ಭಾಷೆಗಳ ರೀತಿ ಸ್ಥಾನಮಾನ ಸಿಕ್ಕಿಲ್ಲ. ಹೀಗಾಗಿ  ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ವೀರೇಂದ್ರ ಹೆಗ್ಗಡೆ ಅವರು ಮನವಿ ಮಾಡಿದರು.
"ಸನ್ಮಾನ್ಯ ಪ್ರಧಾನ ಮಂತ್ರಿಲೆ, ಎಂಕ್ಲೆನ ತುಳುನಾಡ್‌ ದ ಬೊಕ್ಕ ಮಾತ ತುಳು ಬಂಧುಲೆನ ಪರವಾದ್‌ ಸೊಲ್ಮೆಲು. ಈರೆಗ್‌ ಸ್ವಾಗತ.. (ಸನ್ಮಾನ್ಯ ಪ್ರಧಾನಿ ಮಂತ್ರಿಯವರೆ, ತುಳುನಾಡು ಮತ್ತು ತುಳು ಜನತೆಯ ಪರವಾಗಿ ತಮಗೆ  ಆತ್ಮೀಯ ಸ್ವಾಗತ ಮತ್ತು ಅಭಿನಂದನೆಗಳು). ನಮ್ಮ ಮಾತೃಭಾಷೆ ತುಳು. ಈ ಭಾಷೆಗೆ ಇನ್ನೂ ದೇಶದ ಇತರ ಭಾಷೆಗಳಂತೆ ನ್ಯಾಯವಾಗಿ ಸಲ್ಲಬೇಕಾದ ಮಾನ್ಯತೆ ದೊರೆತಿಲ್ಲ. ನಾವು ತುಳುವರು ತುಳು ಭಾಷೆಯನ್ನು  ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಮನವಿ ಮಾಡುತ್ತಿದ್ದೇವೆ. ಈ ಮೊದಲು ಹೊಸದಿಲ್ಲಿಯಲ್ಲಿ ತಮ್ಮನ್ನು ಭೇಟಿ ಮಾಡಿದಾಗ ಈ ಕುರಿತು ಜ್ಞಾಪನಾಪತ್ರವೊಂದನ್ನು ನೀಡಿದ್ದೆ' ಎಂದು ಡಾ. ಹೆಗ್ಗಡೆಯವರು  ಪ್ರಧಾನಿಯವರನ್ನು ಸ್ವಾಗತಿಸುತ್ತ ಹೇಳಿದರು.
ತಾವು ಸರ್ಕಾರವನ್ನು ಜನರ ಹತ್ತಿರ ತಂದಿದ್ದೀರಿ. ಇಡೀ ದೇಶಕ್ಕೆ ಇಂದು ಒಂದು ಎಂಬ ಭಾವನೆ ಮೂಡಿದೆ. ಮೂರು ವರ್ಷಗಳಲ್ಲಿ ನಾನು ಬಹಳಷ್ಟು ಬದಲಾವಣೆಗಳನ್ನು ಗಮನಿಸಿದ್ದೇನೆ. ನೀವೊಂದು 'ಜಾಗೃತ ಭಾರತ'ವನ್ನು  ನಿರ್ಮಿಸಿದ್ದೀರಿ.‌ ನಿಮ್ಮಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಸಂಬಂಧ ಸುಧಾರಣೆಯಾಗಿದೆ. ಧರ್ಮಸ್ಥಳ ಕ್ಷೇತ್ರ ಧಾರ್ಮಿಕ, ಆಧ್ಯಾತ್ಮಿಕ ಕೇಂದ್ರವಾಗಿ ಸೌಹಾರ್ದ ವಾತಾವರಣ ನಿರ್ಮಿಸಿದೆ. ದೇವಸ್ಥಾನದ ಮೂಲಕ ಜನತೆಗೆ  ಅನ್ನದಾನ, ಔಷಧದಾನ, ವಿದ್ಯಾದಾನ ಮತ್ತು ಮುಖ್ಯವಾಗಿ ಅಭಯದಾನ ನೀಡಲಾಗುತ್ತಿದೆ. ಅಭಯದಾನ ಮೂಲಕ ಮೌಲ್ಯಯುತ ಶಿಕ್ಷಣ ಕೊಡಲಾಗುತ್ತಿದೆ. ಎಸ್‌ ಕೆಆರ್‌ ಡಿಪಿ ಮೂಲಕ ಸ್ವಸಹಾಯ ಗುಂಪುಗಳ ಮಹಿಳೆಯರನ್ನು  ಸ್ವಾವಲಂಬಿಗಳನ್ನಾಗಿ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಕೊನೆಯಲ್ಲಿ ನಮ್ಮ ಸಣ್ಣ ಗ್ರಾಮಕ್ಕೆ ಬಂದ ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು ಎಂದು ಹೇಳಿ ಹೆಗ್ಗಡೆ ಅವರು ಹೇಳಿದರು.
ಇದಕ್ಕೂ ಮೊದಲು ಧರ್ಮಸ್ಥಳಕ್ಕೆ ಬಂದ ಪ್ರಧಾನಿ ಮೋದಿ ಅವರನ್ನು ವಿರೇಂದ್ರ ಹೆಗ್ಗಡೆ ಅವರು ಸನ್ಮಾನಿಸಿದರು, ಪ್ರಧಾನಿ ಮೋದಿ ಮೈಸೂರು ಪೇಟ ತೊಡಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಈ ವೇಳೆ ಸಂಸದ ನಳಿನ್‌ ಕುಮಾರ್‌  ಕಟೀಲ್‌ ಅವರು ಕಂಬಳದಲ್ಲಿ ಕೋಣಗಳಿಗೆ ಕಟ್ಟುವ ನೊಗದ ಆಕೃತಿಯ ಸ್ಮರಣಿಕೆಯನ್ನು ಪ್ರಧಾನಿ ಮೋದಿ ಅವರಿಗೆ ಉಡುಗೊರೆಯಾಗಿ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com