ಬೀದರ್ ಬಳಿ 182 ಅಡಿ ಎತ್ತರದ ಅನುಭವ ಮಂಟಪ ನಿರ್ಮಾಣಕ್ಕೆ ಸಮಿತಿ ಶಿಫಾರಸು

ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ವೀರಶೈವ ಮತ್ತು ಲಿಂಗಾಯತರ ನಡುವೆ ಪರ -ವಿರೋಧ ಚರ್ಚೆಗಳು ತಾರಕಕ್ಕೇರಿರುವ ಸಂದರ್ಭದಲ್ಲೇ ಬೀದರ್ ಜಿಲ್ಲೆಯ....
ಅನುಭವ ಮಂಟಪದ ನೀಲನಕ್ಷೆ
ಅನುಭವ ಮಂಟಪದ ನೀಲನಕ್ಷೆ
ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ವೀರಶೈವ ಮತ್ತು ಲಿಂಗಾಯತರ ನಡುವೆ ಪರ -ವಿರೋಧ ಚರ್ಚೆಗಳು ತಾರಕಕ್ಕೇರಿರುವ ಸಂದರ್ಭದಲ್ಲೇ ಬೀದರ್ ಜಿಲ್ಲೆಯ ಬಸವ ಕಲ್ಯಾಣದ ತ್ರಿಪುರಾಂತಕ ಕೆರೆ ದಂಡೆಯಲ್ಲಿ ಬಸವಾದಿ ಶರಣರ ಕಲ್ಯಾಣ ಕ್ರಾಂತಿಯ ‘ಅನುಭವ ಮಂಟಪ’ ಪುನರ್ ನಿರ್ಮಾಣಕ್ಕೆ ತಜ್ಞರ ಸಮಿತಿ ಶಿಫಾರಸು ಮಾಡಿದೆ.
ಸುಮಾರು 25 ಎಕರೆ ವಿಸ್ತೀರ್ಣದಲ್ಲಿ, 182ಅಡಿ ಎತ್ತರದ, ಆರು ಅಂತಸ್ತಿನ ಭವ್ಯ ಕಟ್ಟಡ ನಿರ್ಮಿಸುವ ಯೋಜನೆಗೆ ನೀಲನಕ್ಷೆಯನ್ನೊಳಗೊಂಡ ವರದಿಯನ್ನು ತಜ್ಞರ ಸಲಹಾ ಸಮಿತಿ ಅಧ್ಯಕ್ಷ ಗೊ.ರು. ಚನ್ನಬಸಪ್ಪ ಅವರು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ.
12ನೇ ಶತಮಾನದ ಶರಣರ ಚಳವಳಿಯ ನೆನಪುಗಳನ್ನು ಮರುಸೃಷ್ಟಿಸುವ ಮಾದರಿಯಲ್ಲಿ ಈ ಕಟ್ಟಡದ ರೂಪುರೇಷೆ ತಯಾರಿಸಲಾಗಿದ್ದು, ಯೋಜನೆಗೆ  600 ಕೋಟಿ ರುಪಾಯಿ ವೆಚ್ಚವಾಗಬಹುದು ಎಂದು ವರದಿ ಉಲ್ಲೇಖಿಸಿದೆ.
ಅನುಭವ ಮಂಟಪದ ಹಿರಿಮೆಯನ್ನು ಮರುಸ್ಥಾಪಿಸುವ ಆಶಯದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿರುವ ‘ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ’ 2016ರ ಮೇ 20ರಂದು ತಜ್ಞರ ಸಲಹಾ ಸಮಿತಿ ರಚಿಸಿತ್ತು.
ಅನುಭವ ಮಂಟಪ ಅಸ್ತಿತ್ವದ ಬಗ್ಗೆ ಯಾವುದೇ ಐತಿಹಾಸಿಕ ದಾಖಲೆಗಳು ದೊರೆಯದ ಹಿನ್ನೆಲೆಯಲ್ಲಿ ಹೊಸ ಅನುಭವ ಮಂಟಪವನ್ನು ಕಲ್ಯಾಣರ ಚಾಲುಕ್ಯರ ಶೈಲಿಯಲ್ಲಿ ನಿರ್ಮಿಸಲು, ಬೆಂಗಳೂರಿನ ನೇಚರ್‌ ಆಂಡ್‌ ನರ್ಚರ್‌ ಎಂಟರ್‌ ಪ್ರೈಸಸ್‌ ಸಂಸ್ಥೆಯವರು ವಿನ್ಯಾಸ ರೂಪಿಸಿದ್ದಾರೆ.
ವಚನಗಳು, ಕೆಲವು ಕೃತಿಗಳನ್ನು ಆಧರಿಸಿ ಮಂಟಪದ ಸ್ವರೂಪವನ್ನು ಕಲ್ಪಿಸಿಕೊಂಡು ವಿನ್ಯಾಸಗೊಳಿಸಲಾಗಿದೆ. ರೆವರೆಂಡ್‌ ಉತ್ತಂಗಿ ಚನ್ನಪ್ಪನವರ ‘ಅನುಭವ ಮಂಟಪದ ಐತಿಹಾಸಿಕತೆ’,ಎಸ್‌.ಎಂ. ಜಾಮದಾರ ಅವರ ‘ಅನುಭವ ಮಂಟಪದ ನವನಿರ್ಮಾಣ ಕುರಿತ ಟಿಪ್ಪಣಿ’, ವಚನ ಸಾಹಿತ್ಯ ಸಂಪುಟಗಳು, ಶರಣರ ಪುರಾಣಗಳಲ್ಲಿರುವ ಮಾಹಿತಿಗಳನ್ನು ಪರಿಗಣಿಸಿ, ಯಾವುದೇ ಅನುಕರಣೆಯಿಲ್ಲದಂತೆ ಮಂಟಪ ನಿರ್ಮಿಸುವ ರೂಪುರೇಷೆಯನ್ನು ಸಮಿತಿ ಸಿದ್ಧಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com