ಮೈಸೂರು ದಸರಾಗೆ ಹೆಚ್ಚಿದ ರಂಗು: ಪ್ರವಾಸಿ ಸ್ನೇಹಿ ಗೋಲ್ಡ್ ಕಾರ್ಡ್ ಬಿಡುಗಡೆ

ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆಗಳು ಬಿರುಸಿನಿಂದ ಸಾಗಿದ್ದು, ಈ ಬಾರಿಯ ದಸಾರಕ್ಕಾಗಿ ಪ್ರವಾಸಿಗರಿಗೆ ಸಹಾಯಕವಾಗಲೆಂದು ಗೋಲ್ಡ್ ಕಾರ್ಡ್ ಗಳನ್ನು ಜಿಲ್ಲಾಡಳಿತ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ ರಂದೀಪ್ ಅವರು ಶುಕ್ರವಾರ ಹೇಳಿದ್ದಾರೆ...
ಮೈಸೂರು ದಸರಾ (ಸಂಗ್ರಹ ಚಿತ್ರ)
ಮೈಸೂರು ದಸರಾ (ಸಂಗ್ರಹ ಚಿತ್ರ)

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆಗಳು ಬಿರುಸಿನಿಂದ ಸಾಗಿದ್ದು, ಈ ಬಾರಿಯ ದಸಾರಕ್ಕಾಗಿ ಪ್ರವಾಸಿಗರಿಗೆ ಸಹಾಯಕವಾಗಲೆಂದು ಗೋಲ್ಡ್ ಕಾರ್ಡ್ ಗಳನ್ನು ಜಿಲ್ಲಾಡಳಿತ ಸಿದ್ಧಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ ರಂದೀಪ್ ಅವರು ಶುಕ್ರವಾರ ಹೇಳಿದ್ದಾರೆ. 

ಗೋಲ್ಡ್ ಕಾರ್ಡ್ ವಿತರಣೆ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ರಂದೀಪ್ ಅವರು, ಈ ಬಾರಿಯ ಮೈಸೂರು ದಸರಾಗೆ ಎರಡು ನಮೂನೆಯ ಗೋಲ್ಡ್ ಗಾರ್ಡ್ ಗಳನ್ನು ಮಾಡಿಸಲಾಗಿದೆ. ಒಟ್ಟು 300 ಕಾರ್ಡ್ ಗಳನ್ನು ತಯಾರಿಸಲಾಗಿದ್ದು, ಆನ್ ಲೈನ್ ನಲ್ಲಿ 150, ಚಿಲ್ಲಾಧಿಕಾರಿ ಕಚೇರಿಯಲ್ಲಿ ಉಳಿದ 150 ಕಾರ್ಡ್ ಗಳು ಲಭ್ಯವಿದೆ ಎಂದು ಹೇಳಿದ್ದಾರೆ. 

ರಾಜ್ಯ ಪ್ರವಾಸೋದ್ಯಮ ಪ್ರಾಧಿಕಾರ ಗೋಲ್ಡನ್ ಚಾರಿಯೇಟ್ ಹೊಂದಿದವರಿಗೆ ಸುಮಾರು 150 ಕಾರ್ಡ್ ಗಳು ಬೇಕೆಂದು ಕೋರಿದೆ. ಅದಕ್ಕಾಗಿ ಇನ್ನೊಂದು ಮಾದರಿಯಲ್ಲಿ 150 ಕಾರ್ಡ್ ಗಳನ್ನು ಮುದ್ರಿಸಲಾಗಿದೆ. ಪ್ರತಿ ಕಾರ್ಡಿಗೆ ರೂ.3,999 ಇದ್ದು, ಅಗತ್ಯವಿದ್ದರೆ ಹೆಚ್ಚುವರಿ ಕಾರ್ಡ್ ಗಳನ್ನು ಮುದ್ರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

ಗೋಲ್ಡ್ ಕಾರ್ಡ್ ಪಡೆದವರು ಮೈಸೂರು ಅರಮನೆ, ಮೃಗಾಲಯ, ಹಾರಂಗಿ ಕೆರೆ, ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ವಿಶೇಷ ದರ್ಶನ, ಜಗನ್ ಮೋಹನ ಅರಮನೆ, ಶ್ರೀರಂಗಪಟ್ಟಣದ ರಂಗನತಿಟ್ಟು, ಪಕ್ಷಿಧಾಮ, ಕೆಆರ್'ಎಸ್ ಅಣೆಕಟ್ಟು ಸೇರಿದಂತೆ ಶ್ರೀರಂಗಪಟ್ಟಣದ ಪ್ರವಾಸಿ ತಾಣಗಳನ್ನು ಸಹ ವೀಕ್ಷಿಸಬಹುದಾಗಿದೆ.

ಒಂದು ಕಾರ್ಡ್ ಮೂಲಕ ಒಬ್ಬರಿಗೆ ಮಾತ್ರ ಪ್ರವೇಶ ಸಿಗಲಿದೆ. ಕಾರ್ಡ್ ಹೊಂದಿದವರಿಗೆ 2 ಸಾವಿರ ನಿಗದಿತ ಆಸನ ವ್ಯವಸ್ಥೆಯನ್ನು ಅರಮನೆ ಮತ್ತು ಪಂಜಿನ ಕವಾಯತು ಮೈದಾನದಲ್ಲಿ ಕಾಯ್ದಿರಿಸಲಾಗುವುದು ಎಂದಿದ್ದಾರೆ. 

ಪ್ರವಾಸಿಗರಿಗೆ ಹೆಲಿಕಾಪ್ಟರ್ ಸುತ್ತಾಟ
ದಸರಾ ವೀಕ್ಷಿಸಲು ಬರುವ ಪ್ರವಾಸಿಗರು ಹೆಲಿಕಾಪ್ಟರ್ ನಲ್ಲಿ ಮೈಸೂರು ನಗರದ ಸೌಂದರ್ಯವನ್ನು ಸವಿಯಬಹುದಾಗಿದೆ. ಹೆಲಿರೈಡ್ಸ್ ಮತ್ತು ಪ್ಯಾಲೆಸ್ ಆನ್ ವೀಲ್ಸ್ ಮೂಲಕ ಪ್ರವಾಸಿಗಳನ್ನು ಸೆಳೆಯುವ ಪ್ರಯತ್ನಗಳು ನಡೆದಿದೆ. 

10 ನಿಮಿಷಗಳ ಕಾಲ ಹಾರಾಡುತ್ತ ಪಾರಂಪರಿಕ ನಗರದ ವಿಹಂಗಮ ನೋಟವನ್ನು ಕಣ್ಣು ತುಂಬಿಕೊಳ್ಳಬಹುದು. ಒಂದು ರೈಡ್ ನಲ್ಲಿ 6 ಮಂದಿ ಏಕಕಾಲಕ್ಕೆ ಸಂಚರಿಸಬಹುದು. ಇದಕ್ಕೆ ವಯಸ್ಕರಿಗೆ ರೂ.2,300 ಹಾಗೂ 6 ವರ್ಷಕ್ಕಿಂತ ಕೆಳಗಿರುವವರು ಅಂಗವಿಕಲ ಮಕ್ಕಳಿಗೆ ರೂ.2,200 ದರವನ್ನು ನಿಗದಿ ಮಾಡಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com