ಗೌರಿ ಬಳಿಕ ಮುಂದಿನ ಟಾರ್ಗೆಟ್ ನಾನೇ: ನಿಡುಮಾಮಿಡಿ ಶ್ರೀ

ಹಂತಕರ ಹಿಟ್ ಲಿಸ್ಟ್ ನಲ್ಲಿ ನಾನೂ ಕೂಡ ಇದ್ದು, ಪತ್ರಕರ್ತೆ ಗೌರಿ ಲಂಕೇಶ್ ಬಳಿ ಮುಂದಿನ ಟಾರ್ಗೆಟ್ ನಾನೇ ಆಗಿದ್ದೇನೆಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿಯವರು ಭಾನುವಾರ ಹೇಳಿದ್ದಾರೆ...
ಪತ್ರಕರ್ತೆ ಗೌರಿ ಲಂಕೇಶ್
ಪತ್ರಕರ್ತೆ ಗೌರಿ ಲಂಕೇಶ್
ಬೆಂಗಳೂರು: ಹಂತಕರ ಹಿಟ್ ಲಿಸ್ಟ್ ನಲ್ಲಿ ನಾನೂ ಕೂಡ ಇದ್ದು, ಪತ್ರಕರ್ತೆ ಗೌರಿ ಲಂಕೇಶ್ ಬಳಿ ಮುಂದಿನ ಟಾರ್ಗೆಟ್ ನಾನೇ ಆಗಿದ್ದೇನೆಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿಯವರು ಭಾನುವಾರ ಹೇಳಿದ್ದಾರೆ. 
ವಿಚಾರವಾದಿಗಳ ವೇದಿಕೆ ಕರ್ನಾಟಕ ವತಿಯಿಂದ ನಗರದಲ್ಲಿ ನಿನ್ನೆ ಹಮ್ಮಿಕೊಳ್ಳಲಾಗಿದ್ದ 'ಪೆರಿಯಾರ್ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಮಾತನಾಡಿರುವ ಅವರು, ಹಂತಕರ ಹಿಟ್ ಲಿಸ್ಟ್ ನಲ್ಲಿ ಐವರು ಪ್ರಮುಖ ವ್ಯಕ್ತಿಗಳಿದ್ದು, ಇದರಲ್ಲಿ ಈಗಾಗಲೇ ಗೌರಿ ಲಂಕೇಶ್ ಹಾಗೂ ಎಂಎಂ ಕಲಬುರ್ಗಿಯವರನ್ನು ಹತ್ಯೆ ಮಾಡಲಾಗಿದೆ. ಮುಂದಿನ ನಾನಾಗಿರಬಹುದು ಇಲ್ಲದೇ ಹೋದರೆ, ಕೆ.ಎಸ್ ಭಗವಾನ್ ಅವರಾಗಿರಬಹುದು ಎಂದು ಹೇಳಿದ್ದಾರೆ. 
ಬಳಿಕ ಮಾತನಾಡಿರುವ ಪತ್ರಕರ್ತ ಅಗ್ನಿ ಶ್ರೀಧರ್ ಅವರು, ಸಂಘ ಪರಿವಾರದ ಸದಸ್ಯರೆಂದರೆ ಭಯ ಪಡಬೇಕಾದ ಅಗತ್ಯವಿಲ್ಲ. ಕಾಂಗ್ರೆಸ್ ಅಥವಾ ಬೇರೆ ಪಕ್ಷದಲ್ಲಿ ಇರುವ ಹಿಂದುತ್ವಾದಿ ಮನೋಭಾವದವರು ಅತಿ ಅಪಾಯಕಾರಿ. ಅವರು ಆರ್'ಎಸ್ಎಸ್ ನ ಸ್ಪೀಪಿಂಗ್ ಸೆಲ್ ಇದ್ದಂತೆ. ಇವರ ಬಗ್ಗೆ ಎಚ್ಚರವಹಿಸಬೇಕೆಂದು ತಿಳಿಸಿದ್ದಾರೆ. 
ಎಂಎಂ. ಕಲಬುರ್ಗಿ, ಗೌರಿ ಲಂಕೇಶ್ ಹತ್ಯೆ ಮಾಡಿದವರು ಸುಪಾರಿ ಪಡೆದ ಹಂತಕರಲ್ಲ. ಒಂದು ವೇಳೆ ಸುಪಾರಿ ಪಡೆದುಕೊಂಡ ಹಂತಕರೇ ಆಗಿದ್ದರೆ, ತಲೆಮರೆಸಿಕೊಳ್ಳುತ್ತಿರಲಿಲ್ಲ. ತರಬೇತಿ ಪಡೆದವರೇ ಈ ಹತ್ಯೆಗಳನ್ನು ನಡೆಸಿದ್ದಾರೆ. ಹಿಂಸೆಯ ಜಗತ್ತನ್ನು ಹತ್ತಿರದಿಂದ ಕಂಡ ನನ್ನಂತಹವರಿಗೆ ಇದು ಗೊತ್ತಾಗುತ್ತದೆ ಎಂದರು. 
ಹಂತಕರು ತಾವು ಬಳಸಿದ ಬಂದೂಕನ್ನು ಭದ್ರವಾಗಿ ಇಟ್ಟುಕೊಳ್ಳುತ್ತಾರೆ. ಏಕೆಂದರೆ, ಅದಕ್ಕೆ ದೀಕ್ಷೆ ಕೊಟ್ಟಿರುತ್ತಾರೆ. ಅದನ್ನು ಕೇಸರಿ ಬಟ್ಟೆಯಲ್ಲಿ ಇಟ್ಟು ಪೂಜೆ ಮಾಡುತ್ತಾರೆ. ಈ ಬಗ್ಗೆ ಬಹಳಷ್ಟು ಸಂಗತಿಗಳನ್ನು ಹೇಳಲು ಸಾಧ್ಯವಿಲ್ಲ. ಹಿಂದುತ್ವದ ಬಗ್ಗೆ ಮಾತನಾಡಿದ್ದಕ್ಕೆ ಇತ್ತೀಚೆಗೆ 150 ಜನರು ನನ್ನ ಮನೆ ಮೇಲೆ ದಾಳಿ ಮಾಡಿದ್ದರು. ಈಗ ಮಾತನಾಡಿದರೆ 1,500 ಮಂದಿ ದಾಳಿ ಮಾಡುತ್ತಾರೆಂದು ಸೂಚ್ಯವಾಗಿ ಹೇಳಿದ್ದಾರೆ. 
ಸಮಾರಂಭದಲ್ಲಿ 2016ನೇ ಸಾಲಿನ ಪೆರಿಯಾರ್ ಪ್ರಶಸ್ತಿಯನ್ನು ಕೊಟಿಗಾನ ಹಳ್ಳಿ ರಾಮಯ್ಯ ಅವರಿಗೆ ಪ್ರದಾನ ಮಾಡಲಾಯಿತು. 2017ರ ಪ್ರಶಸ್ತಿಯನ್ನು ಗೌರಿ ಲಂಕೇಶ್ ಪರವಾಗಿ ಕೋಮು ಸೌಹಾರ್ದ ವೇದಿಕೆಯ ಸದಸ್ಯರು ಸ್ವೀಕರಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com