ಅಸ್ಥಿತ್ವದಲ್ಲಿಲ್ಲದ ಕಂಪೆನಿಯಿಂದ ಸರ್ಕಾರಿ ಕಚೇರಿಗೆ ಹೊರಗುತ್ತಿಗೆ ಮೇಲೆ ನೌಕರರ ಪೂರೈಕೆ!

ತನ್ನ ಆಯುಕ್ತರ ಕಚೇರಿಯಿಂದ ಹೊರಗುತ್ತಿಗೆ ಮೇಲೆ ನೌಕರರನ್ನು ಒದಗಿಸುತ್ತಿದ್ದ ಗ್ರಾಮೀಣಾಭಿವೃದ್ಧಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ತನ್ನ ಆಯುಕ್ತರ ಕಚೇರಿಯಿಂದ ಹೊರಗುತ್ತಿಗೆ ಮೇಲೆ ನೌಕರರನ್ನು ಒದಗಿಸುತ್ತಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಂಪೆನಿಯ ವಿಳಾಸ ಹಡುಕಿದಾಗ ಬೆಂಗಳೂರಿನಲ್ಲಿ ಕಂಪೆನಿಯೇ ಇರಲಿಲ್ಲ. ಇನ್ನು ವಿಜಯಪುರದಲ್ಲಿ ಕ್ಸೆರಾಕ್ಸ್ ಅಂಗಡಿಯೊಂದರ ಹೆಸರು ಆ ರೀತಿ ಇರುವುದು ಪತ್ತೆಯಾಯಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ನೂರಾರು ಮಂದಿ ಹೊರಗುತ್ತಿಗೆ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಬೇರೆ ಬೇರೆ ಸಂಸ್ಥೆಗಳಿಂದ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿತ್ತು, ಅವುಗಳಲ್ಲೊಂದು ಮೇಘಾ ಸರ್ವಿಸ್ ಪ್ರೈವೆಟ್ ಲಿಮಿಟೆಡ್, ಅದು 67 ಮಂದಿ ನೌಕರರನ್ನು ಗ್ರಾಮೀಣಾಭಿವೃದ್ಧಿಯ ಆಯುಕ್ತರ ಕಚೇರಿಗೆ ಪೂರೈಸಿತ್ತು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ಜೆಯಡಿ ಮಾನವ ಸಂಪನ್ಮೂಲ ಒದಗಿಸುವ ಸಂಸ್ಥೆಗಳು ಗ್ರಾಮೀಣಾಭಿವೃದ್ಧಿ ಇಲಾಖೆಗೆ ಕೆಲಸ ಮಾಡುತ್ತಿವೆ. ಅವುಗಳಲ್ಲೊಂದು ಮೇಘ ಸರ್ವಿಸ್ ಬೆಂಗಳೂರಿನ ಆಯುಕ್ತರ ಕಚೇರಿಗೆ ನೌಕರರನ್ನು ಒದಗಿಸುತ್ತಿತ್ತು. ಡಾಟಾ ಎಂಟ್ರಿ ಆಪರೇಟರ್, ತಾಂತ್ರಿಕ ಸಿಬ್ಬಂದಿ ಮತ್ತು ಗ್ರೂಪ್ ಡಿ ನೌಕರರಾಗಿ ಈ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿ ತಮಗೆ ತಿಂಗಳ ವೇತನ ಬರಲಿಲ್ಲವೆಂದು ಕೆಲವು ನೌಕರರು ಗ್ರಾಮೀಣಾಭಿವೃದ್ಧಿ ಇಲಾಖೆ ಆಯುಕ್ತರ ಕಚೇರಿಯ ಮೇಲಾಧಿಕಾರಿಗಳಿಗೆ ದೂರು ನೀಡಿದ್ದರು. ಆಗ ಕಚೇರಿ ಸಿಬ್ಬಂದಿ ಮೇಘ ಸರ್ವಿಸಸ್ ನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ ಸಂಪರ್ಕಕ್ಕೆ ಸಿಗದಿದ್ದಾಗ ಒಪ್ಪಂದ ಪತ್ರದಲ್ಲಿ ನಮೂದಾಗಿದ್ದ ಕಂಪೆನಿ ವಿಳಾಸವನ್ನು ಸಂಪರ್ಕಿಸಿದರು.

ಅಲ್ಲಿ ವಿಜಯಪುರ ವಿಳಾಸ ಕ್ಸೆರಾಕ್ಸ್ ಅಂಗಡಿಯೆಂದು ಕಚೇರಿ ಸಿಬ್ಬಂದಿಗೆ ಗೊತ್ತಾಯಿತು. ಇನ್ನು ಬೆಂಗಳೂರಿನಲ್ಲಿ ಆ ಹೆಸರಿನ ಸಂಸ್ಥೆಯೇ ಇಲ್ಲ ಎಂದು ತಿಳಿದುಬಂತು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವರದಿಯಲ್ಲಿ ತಿಳಿಸಿದೆ. ಇದರ ಒಂದು ಪ್ರತಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲಭ್ಯವಾಗಿದೆ.

ಇಲಾಖೆ ತನ್ನ ವರದಿಯಲ್ಲಿ, ಹೊರಗುತ್ತಿಗೆ ಮೇಲೆ ನೇಮಕಗೊಂಡ 67 ಸಿಬ್ಬಂದಿಯಲ್ಲಿ 48 ಮಂದಿ ನೌಕರರಿಗೆ ಪಿಎಫ್ ಮತ್ತು ಇಎಸ್ಐ ಪಡೆದಿದ್ದಾರೆ ಎಂದು ಹೇಳಲಾಗಿದೆ. ಆದರೆ ವಾಸ್ತವವಾಗಿ ಕೇವಲ 15 ಮಂದಿ ನೌಕರರಿಗೆ ಮಾತ್ರ ಇಎಸ್ಐ ಕಾರ್ಡು ನೀಡಲಾಗಿದೆ. ಉಳಿದವರಿಗೆ ಪಿಎಫ್ ನೀಡಿರಲಿಲ್ಲ ಮತ್ತು ಕೆಲವು ನೌಕರರ ಬ್ಯಾಂಕ್ ಖಾತೆಗಳನ್ನೇ ತೆರೆದಿಲ್ಲ.
ಸರಿಯಾಗಿ ತಮಗೆ ವೇತನ ಬರುತ್ತಿಲ್ಲ ಎಂದು ಕೆಲವು ಸಿಬ್ಬಂದಿ ದೂರು ನೀಡಿದಾಗಲೇ ನಮಗೆ ವಾಸ್ತವ ಗೊತ್ತಾಗಿದ್ದು. ನಮ್ಮ ಕಚೇರಿಯ ಸಿಬ್ಬಂದಿ ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆಯೇ ಎಂಬುದು ಇನ್ನೂ ಗೊತ್ತಾಗಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿ ಹೇಳಿದ್ದಾರೆ.

ನೌಕರರನ್ನು ಪೂರೈಸಲು 2014ರಲ್ಲಿ ಮೇಘಾ ಸರ್ವಿಸಸ್ ಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಟೆಂಡರ್ ನೀಡಿತ್ತು. ಈ ಕನ್ಸಲ್ಟೆನ್ಸಿಗಳಿಗೆ ತಿಂಗಳು ತಿಂಗಳು ಹಣ ಪಾವತಿಸಲಾಗುತ್ತಿತ್ತು. ಅವರು ಗುತ್ತಿಗೆ ನೌಕರರಿಗೆ ವೇತನ ನೀಡಬೇಕಾಗಿತ್ತು ಎನ್ನುತ್ತಾರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತ ಉಪೇಂದ್ರ ಪ್ರತಾಪ್ ಸಿಂಗ್.

ಈ ವಿಷಯ ನಮ್ಮ ಗಮನಕ್ಕೆ ಬಂದ ಮೇಲೆ ಹಲವು ಸ್ಥಳಗಳಲ್ಲಿ ಸಂಪರ್ಕಿಸಲು ಪ್ರಯತ್ನಿಸಿದೆವು. ಕೊನೆಯದಾಗಿ ನಾವು ನೊಟೀಸ್ ಜಾರಿ ಮಾಡಿದ್ದು ನೌಕರರ ಪರವಾಗಿ ನೀಡಲಾಗಿದ್ದ ಪಿಎಫ್ ಮತ್ತು ಇಎಸ್ಐ ಮೊತ್ತವನ್ನು ನೀಡಲು ಹೇಳಿದ್ದೇವೆ. ಕೆಲವು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಪರಿಶೀಲನೆ ಪತ್ರ ಬಂದ ಮೇಲೆ ಕಂಪೆನಿಯನ್ನು ಕಪ್ಪುಪಟ್ಟಿಗೆ ಸೇರಿಸುವ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com