ಬೆಂಗಳೂರು: ತಾನೊಬ್ಬ ರಾಜಕಾರಣಿ ಎಂದು ಪರಿಚಯಿಸಿಕೊಂಡು ಚಿನ್ನಾಭರಣ ಉದ್ಯಮಿಗೆ ವಂಚಿಸಿದ್ದ ವ್ಯಕ್ತಿಯನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ. ವಿಯಜನಗರದ ಪ್ರಭಾವಶಾಲಿ ರಾಜಕಾರಣಿಯೊಬ್ಬರ ಹೆಸರನ್ನು ಬಂಧಿತ ಆರೋಪಿ ದುರುಪಯೋಗ ಪಡಿಸಿಕೊಂಡಿದ್ದಾನೆ.
ಮೈಸೂರು ಮೂಲದ ಎಲ್. ಸೋಮಣ್ಣ ಸಹಕಾರನಗರದ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಿದ್ದು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವುದಾಗಿ. ಹೇಳಿಕೊಳ್ಳುತ್ತಿದ್ದ ಹಣ ದೇಣಿಗೆ ನೀಡುವಂತೆ ಉದ್ಯಮಿಗಳಿಗೆ ಒತ್ತಾಯ ಮಾಡುತ್ತಿದ್ದ.
ತಾನು ವಿಧಾನ ಪರಿಷತ್ ಸದಸ್ಯ ಎಂದು ಸುಳ್ಳು ಹೇಳಿ ಹಲವರಿಗೆ ವಂಚಿಸಿದ್ದಾನೆ. ಈತನ ವಿರುದ್ಧ ಕೊಡಿಗೇಹಳ್ಳಿ, ವೈಯ್ಯಾಲಿಕಾವಲ್ ಹಾಗೂ ಮೈಸೂರಿನ ನಜರಾಬಾದ್ ಠಾಣೆಗಳಲ್ಲೂ ಪ್ರಕರಣಗಳು ದಾಖಲಾಗಿವೆ.
ಫೆಬ್ರವರಿ 21ರಂದು ಆಭರಣ ಅಂಗಡಿ ಮಾಲೀಕ ಧೀರಜ್ ಡಿ.ಎನ್ ಎಂಬುವರು ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು, ಸೋಮಣ್ಣ ಎಂಬಾತ 94 ಲಕ್ಷ ರು ಮೌಲ್ಯದ ಒಡವೆ ಪಡೆದು ವಂಚಿಸಿರುವುದಾಗಿ ದೂರು ನೀಡಿದ್ದರು,.
ಮೈಸೂರಿನಲ್ಲಿ 51 ಸಾಮೂಹಿಕ ವಿವಾಹವಿದ್ದು, 51 ತಾಳಿಗಳು ಬೇಕೆಂದು ಕೇಳಿದ್ದ, ಅದಕ್ಕಾಗಿ ಚಿನ್ನದ ತಾಳಿಗಳು ಹಾಗೂ ಬಿಸ್ಕತ್‌ಗಳನ್ನು ಪಡೆದು, ನಿವೇಶನ ಕೊಡಿಸುವುದಾಗಿ ನಂಬಿಸಿ ಹಲವರಿಗೆ ಮೋಸ ಮಾಡಿದ್ದಾನೆ.
ತನ್ನ ಚಿನ್ನದ ಹಣವನ್ನು ವಾಪಸ್ ನೀಡುವಂತೆ ಧೀರಜ್ ಪದೇ ಪದೇ ಒತ್ತಡ ಹೇರುತ್ತಿದ್ದ ಹಿನ್ನೆಲೆಯಲ್ಲಿ ಸೋಮಣ್ಣ ದೀರಜ್ ನನ್ನು ಹತ್ತಿರಕ್ಕೆ ಸೇರಿಸುತ್ತಿರಲಿಲ್ಲ, ದೂರಿನ ಹಿನ್ನೆಲೆಯಲ್ಲಿ ಸಿಸಿಟಿವಿ ದಾಖಲೆ ಪರಿಶೀಲಿಸಿದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮಣ್ಣ ವಿರುದ್ಧ ಹಲವು ಠಾಣೆಗಳಲ್ಲಿ ದೂರು ದಾಖಲಾಗಿದೆ.
ಸೋಮಣ್ಣನಿಂದ ಮೋಸ ಹೋದವರು ಬಸವೇಶ್ವರನಗರ ಪೊಲೀಸ್ ಠಾಣೆಗೆ (080-22943232 ) ಅಥವಾ ಇನ್‌ಸ್ಪೆಕ್ಟರ್‌ಗೆ (9480801729) ಕರೆ ಮಾಡಿ ಮಾಹಿತಿ ನೀಡಬಹುದು.