ಬೆಂಗಳೂರು: ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿಯೊಂದು ಇಲ್ಲಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದ ವಿಜ್ಞಾನ ವಿಷಯದ ಪಠ್ಯಪುಸ್ತಕಗಳು ಕನ್ನಡದಲ್ಲಿಯೂ ದೊರೆಯಲಿದೆ. ಮುಂದಿನ 15 ದಿನಗಳಲ್ಲಿ ಈ ಭಾಷಾಂತರಗೊಂಡ ಪುಸ್ತಕಗಳು ಮಾರುಕಟ್ಟೆಯಲ್ಲಿ ದೊರಕಲಿದೆ.
ಕನ್ನಡ ಪುಸ್ತಕಗಳು ಕನ್ನಡ ಮಾದ್ಯಮ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ವಿಜ್ಞಾನ ವಿಷಯವನ್ನು ಅದ್ಯಯನ ನಡೆಸುವುದಕ್ಕೆ ಪ್ರೋತ್ಸಾಹ ದೊರಕಲಿದೆ.
ರಾಜ್ಯದ ಕಾಲೇಜುಗಳಲ್ಲಿ ವಿಜ್ಞಾನ ಶಿಕ್ಷಣವನ್ನು ಆಂಗ್ಲ ಭಾಷೆಯಲ್ಲೇ ಒದಗಿಸಿದರೂ ಸಹ ಅನುವಾದಿತ ಪಠ್ಯಪುಸ್ತಕಗಳಿಂದ ಇಂಗ್ಲಿಷ್ ಅರ್ಥಮಾಡಿಕೊಳ್ಳಲು ಕಷ್ಟಕರವಾದ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಲಿದೆ."ಕನ್ನಡ ಮಾದ್ಯಮದಲ್ಲಿ ಓದಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆ ಅತ್ಯಂತ ಕಡಿಮೆ ಇದೆ. ಈ ಕಾರಣಕ್ಕಾಗಿ ಅನೇಕ ಕಾಲೇಜುಗಳಲ್ಲಿ ಕನ್ನಡ ಮಾದ್ಯಮದ ವಿಜ್ಞಾನದ ತರಗತಿಗಳನ್ನು ಮುಚ್ಚಿದೆ." ಎಂದು ಪದವಿಪೂರ್ವ ಶಿಕ್ಷಣ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
"ವಿಷಯ ತಜ್ಞರು ಮತ್ತು ಹಿರಿಯ ಬೋಧನಾ ವಿಭಾಗದ ಸದಸ್ಯರ ಸಹಾಯದಿಂದ, ಪಠ್ಯಪುಸ್ತಕಗಳನ್ನು ಅನುವಾದಿಸಲಾಗಿದೆ. ಇದಾಗಲೇ ಅನುವಾದ ಕಾರ್ಯ ಪೂರ್ಣಗೊಂಡಿದೆ. ರಾಜ್ಯದಲ್ಲಿನ ಸರ್ಕಾರಿ ಕಾಲೇಜುಗಳಿಗೆ ಈ ಅನುವಾದಿತ ಪಠ್ಯಪುಸ್ತಕಗಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದು. ವಿಜ್ಞಾನ ವಿಷಯ ಬೋಧಿಸುತ್ತಿರುವ ಪ್ರತಿಯೊಂದು ಸರ್ಕಾರಿ ಕಾಲೇಜು ಕನ್ನಡ ಭಾಷಾಂತರದ ಎರಡು ಸೆಟ್ ಪುಸ್ತಕಗಳನ್ನು ಪಡೆಯಲಿದೆ" ಪಿಯುಇ ಇಲಾಖೆ ನಿರ್ದೇಶಕ ಸಿ ಶಿಖಾ ಹೇಳಿದರು,
ಯೋಜನೆ ವಿಫಲವಾಗಿತ್ತು
ಗಮನಾರ್ಹ ಸಂಗತಿ ಎಂದರೆ 2013-14ರ ಅವಧಿಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಇದೇ ರೀತಿಯ ಯೋಜನೆಯನ್ನು ಜಾರಿಗೆ ತರಲು ಮುಂದಾಗಿತ್ತು. ಆಗ ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಪಠ್ಯಪುಸ್ತಕಗಳನ್ನು ಅನುವಾದಿಸುವ ಜವಾಬ್ದಾರಿಯನ್ನು ವಹಿಸಲಾಗಿತ್ತು. ಆದರೆ, ಕೆಲವು ತಾಂತ್ರಿಕ ಸಮಸ್ಯೆಗಳ ಕಾರಣ, ಇದನ್ನು ಯಶಸ್ವಿಯಾಗಿ ಜಾರಿಗೊಳಿಸಲು ಸಾಧ್ಯವಾಗಿರಲಿಲ್ಲ.
ಈ ಬಾರಿ ರಾಜ್ಯದ ವಿವಿಧೆಡೆ ಕಾಲೇಜುಗಳಲ್ಲಿ ಕೆಲಸ ಮಾಡುವ ಉಪನ್ಯಾಸಕರ ಸಹಾಯದಿಂದ, ಪಠ್ಯಪುಸ್ತಕವನ್ನು ಯಶಸ್ವಿಯಾಗಿ ಭಾಷಾಂತರಿಸಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ಪುಸ್ತಕಗಳು ಶೀಘ್ರದಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.