ಬೆಂಗಳೂರು: ಪೊಲೀಸ್ ಪೇದೆ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲು ಯತ್ನಿಸಿದ ಬವಾರಿಯಾ ಗ್ಯಾಂಗ್ ನ ಸದಸ್ಯನಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ.
ಉತ್ತರ ಪ್ರದೇಶದ ಶಮ್ಲಿ ಜಿಲ್ಲೆಯ ರಾಮ್ ಸಿಂಗ್ ಅಲಿಯಾಸ್ ಸುಮೇರ್ ಅಲಿಯಾಸ್ ಹೋಮಿ ಕಾಲಿಗೆ ಗುಂಡೇಟು ಬಿದ್ದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ನಂದಿನಿಲೇಔಟ್, ಪೀಣ್ಯ, ಯಲಹಂಕ, ಸೋಲದೇವನಹಳ್ಳಿ ಕಡೆಗಳಲ್ಲಿ ಸರಗಳ್ಳತನ ಹೆಚ್ಚಾಗಿ ನಡೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು .
ಆರೋಪಿಗಳು ಪಂಜಾಜ್ ನೋಂದಣಿ ಸಂಖ್ಯೆಯ ಪಲ್ಸರ್ ಬೈಕ್ ನಲ್ಲಿ ಓಡಾಡುತ್ತಿದ್ದರು.
ಸೋಲದೇವನಹಳ್ಳಿಯ ಲಕ್ಷ್ಮಿಪುರ ಕ್ರಾಸ್ ಬಳಿ ಸೋಲದೇವನಹಳ್ಳಿ ಪೊಲೀಸ್ ಸಿಬ್ಬಂದಿ, ಇಮಾಮ್ ಸಾಬ್ ಕರಿಕಟ್ಟಿ ಹಾಗೂ ಬಿರಾದಾರ್ ತಪಾಸಣೆ ನಡೆಸುತ್ತಿದ್ದಾಗ ನೀಲಿ ಬಣ್ಣದ ಬಜಾಜ್ ಪಲ್ಸರ್ ಬೈಕ್‌ನಲ್ಲಿ ಇಬ್ಬರು ಹೋಗುತ್ತಿರುವುದು ಕಂಡು ಬಂತು.
ಕೂಡಲೇ ಬೈಕ್ ನಿಲ್ಲಿಸಿ ತಪಾಸಣೆ ನಡೆಸಲು ಹೋದಾಗ ದುಷ್ಕರ್ಮಿಗಳು ಬೈಕ್ ಬೀಳಿಸಿ ಪರಾರಿಯಾಗಲು ಯತ್ನಿಸಿದ್ದು, ಹಿಡಿಯಲು ಹೋದ ಇಮಾಮ್ ಸಾಬ್ ಕರಿಕಟ್ಟೆ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ತಪ್ಪಿಸಿಕೊಂಡು ನೀಲ್‌ಗಿರಿ ತೋಪಿಗೆ ಓಡಿ ಹೋದರು. ಕೂಡಲೇ ಹೆಚ್ಚಿನ ಸಿಬ್ಬಂದಿಯನ್ನು ಕರೆಸಿಕೊಂಡು ನೀಲ್‌ಗಿರಿ ತೋಪನ್ನು ಕಾರ್ಯಾಚರಣೆ ನಡೆಸಿದಾಗ ದುಷ್ಕರ್ಮಿಗಳು ಕೆರೆಗುಡ್ಡದಹಳ್ಳಿ ಅರಣ್ಯಪ್ರದೇಶದಲ್ಲಿ ಅಡಗಿರುವುದು ಪತ್ತೆಯಾಗಿದೆ.
ರಾತ್ರಿ 11.50ರ ಸುಮಾರಿಗೆ ತೆರಳಿ ಕಾರ್ಯಾಚರಣೆ ನಡೆಸಿದಾಗ ಕಂಡು ಬಂದ ರಾಮ್‌ಸಿಂಗ್ ಬಂಧಿಸಲು ಬಂದ ಪೊಲೀಸರು ಮೇಲೆ ಚಾಕು ಹಿಡಿದು ಹಲ್ಲೆಗೆ ಮುಂದಾಗಿದ್ದಾನೆ ಶರಣಾಗುವಂತೆ ಸ್ಥಳದಲ್ಲಿದ್ದ ನಂದಿನಿಲೇಔಟ್ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಸೋಮಶೇಖರ್ ಗಾಳಿಯಲ್ಲಿ ಎರಡು ಸುತ್ತು ಹಾರಿಸಿ ಎಚ್ಚರಿಕೆ ನೀಡಿದರೂ ಮತ್ತೆ ಪೊಲೀಸರತ್ತ ನುಗ್ಗಿದಾಗ ಮತ್ತೆ ಎರಡು ಸುತ್ತು ಗುಂಡು ಹಾರಿಸಿದ್ದಾರೆ.
ಪರಾರಿಯಾದ ಮತ್ತೊಬ್ಬ ಸರಗಳ್ಳ ರಾಜೇಶ್‌ಗಾಗಿ ಇಡೀ ರಾತ್ರಿ ಶೋಧಿಸಲಾಯಿತಾದರೂ ಆತ ಪತ್ತೆಯಾಗಿಲ್ಲ ರಾಮ್‌ಸಿಂಗ್ ನಡೆಸಿದ ಹಲ್ಲೆ ಗಾಯಗೊಂಡಿರುವ ಇಮಾಮ್ ಸಾಬ್ ಕರಿಕಟ್ಟಿ ಹಾಗೂ ಬಿರಾದಾರ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.
ಬಾವರಿಯಾ ಗ್ಯಾಂಗ್‌ನ ರಾಮ್‌ಸಿಂಗ್ ಕುಖ್ಯಾತ ಸರಗಳ್ಳನಾಗಿದ್ದಾನೆ ಬೆಂಗಳೂರು ಸೇರಿ ದೇಶದ ಹಲವು ನಗರಗಳಲ್ಲಿ ಈತ ಸರಗಳ್ಳತನ ನಡೆಸಿದ ಕುಖ್ಯಾತಿ ಹೊಂದಿದ್ದಾನೆ.