ಮದ್ಯದಂಗಡಿಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣು

ಮುಂಬರುವ ವಿಧಾನಸಭೆ ಚುನಾವಣೆಯ ಪರಿಣಾಮವಿದು. ರಾಜ್ಯದ ಮದ್ಯ ಮಾರಾಟಗಾರರು ತಾವು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯ ಪರಿಣಾಮವಿದು. ರಾಜ್ಯದ ಮದ್ಯ ಮಾರಾಟಗಾರರು ತಾವು ಮಾರಾಟ ಮಾಡುವ ಪ್ರತಿ ಮದ್ಯದ ಬಾಟಲಿಗಳ ಬಗ್ಗೆ ಲೆಕ್ಕ ತೋರಿಸಬೇಕು. ರಾಜ್ಯ ಚುನಾವಣಾ ಆಯೋಗದ ಆದೇಶದ ಪ್ರಕಾರ, ಅಬಕಾರಿ ಇಲಾಖೆ ರಾಜ್ಯದ ಎಲ್ಲಾ ಬಾರ್ ಗಳು ಮತ್ತು ಲಿಕ್ಕರ್ ಮಾರಾಟ ಮಳಿಗೆಗಳಿಗೆ ಮಾರ್ಗಸೂಚಿ ಹೊರಡಿಸಿ ಲೆಕ್ಕಪತ್ರಗಳನ್ನು ಆಯಾಯ ಸಮಯಕ್ಕೆ ತೋರಿಸುವಂತೆ ಹೇಳಿದೆ.

ಅಬಕಾರಿ ಇಲಾಖೆಯ ಈ ಆದೇಶ ಮದ್ಯದಂಗಡಿ ಮಾಲಿಕರಿಗೆ ಆತಂಕ ತರಿಸಿದೆ. ಕಳೆದ ವರ್ಷಕ್ಕಿಂತ ಶೇಕಡಾ 10ರಷ್ಟು ಮದ್ಯಗಳ ಮಾರಾಟದಲ್ಲಿ ವ್ಯತ್ಯಾಸ ಕಂಡುಬಂದರೆ ಅಂತಹ ಮದ್ಯದಂಗಡಿಗಳು ವಿಚಾರಣೆ ಎದುರಿಸಬೇಕಾಗುತ್ತದೆ. ಕೆಲವು ಮಾರ್ಗಸೂಚಿಗಳಿದ್ದು ಅದರ ಪ್ರಕಾರ ಎಲ್ಲಾ ಮದ್ಯದಂಗಡಿಗಳು ಮತ್ತು ಮದ್ಯ ಮಾರಾಟದ ಮಳಿಗೆಗಳು ಒಂದೇ ನಿಯಮವನ್ನು ಪಾಲಿಸಬೇಕಾಗುತ್ತದೆ.

ಬೆಂಗಳೂರು ನಗರದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ನಿಯಮ ಉಲ್ಲಂಘಿಸಿದ 50ಕ್ಕೂ ಹೆಚ್ಚು ಬಾರ್ ಗಳಿಗೆ ನೊಟೀಸ್ ಕಳುಹಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಅಬಕಾರಿ ಇಲಾಖೆ ಕ್ಷಿಪ್ರಪಡೆಯನ್ನು ರಚಿಸಿದ್ದು ಅದು ನಗರದಾದ್ಯಂತ ಗಸ್ತು ತಿರುಗಲಿದೆ. ಯಾವುದೇ ಸಮಯದಲ್ಲಿ ಈ ಕ್ಷಿಪ್ರಪಡೆ ಯಾವ ಮದ್ಯದಂಗಡಿಗೆ ಬೇಕಾದರೂ ಭೇಟಿ ನೀಡಿ ಮಾಲಿಕರಲ್ಲಿ ಮದ್ಯ ಮಾರಾಟದ ಬಗ್ಗೆ ಲೆಕ್ಕವಿವರ ಕೇಳಬಹುದು ಎಂದು ಹೇಳಿದ್ದಾರೆ.

ನಿನ್ನೆ ಅಬಕಾರಿ ಇಲಾಖೆ 16 ಬಾರ್ ಗಳು ಮತ್ತು ಮದ್ಯದಂಗಡಿಗಳಿಗೆ ನೊಟೀಸ್ ಜಾರಿ ಮಾಡಿದೆ. ಒಂದು ಮದ್ಯದಂಗಡಿಯ ಪರವಾನಗಿಯನ್ನು ಶಾಶ್ವತವಾಗಿ ಮುಚ್ಚಲಾಗಿದ್ದು 9 ಮದ್ಯದಂಗಡಿ ಮತ್ತು ಬಾರ್ ಗಳನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ. ಕೆಲವು ಅಂಗಡಿಗಳು ತೆರಿಗೆ ರಹಿತ ಮದ್ಯಗಳನ್ನು ಮಾರಾಟ ಮಾಡುತ್ತಿದ್ದರೆ ಇನ್ನು ಕೆಲವು ಮಳಿಗೆಗಳಲ್ಲಿ ಮಧ್ಯರಾತ್ರಿ ಅವಧಿ ಮುಗಿದ ನಂತರವೂ ಮದ್ಯ ಮಾರಾಟ ಮಾಡಲಾಗುತ್ತಿತ್ತು ಮತ್ತು ಮದ್ಯ ಮಾರಾಟದ ಬಗ್ಗೆ ಸರಿಯಾದ ವಿವರ ನೀಡಿಲ್ಲ ಎಂದು ದಯಾನಂದ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com