ಬೆಂಗಳೂರು: ಚಿನ್ನದ ಆಸೆಗಾಗಿ ಸ್ನೇಹಿತನ ಪತ್ನಿಯ ಹತ್ಯೆ, ಆರೋಪಿ ಬಂಧನ
ಬೆಂಗಳೂರು: ಒಂಟಿ ಮಹಿಳೆಯನ್ನು ಬರ್ಭರವಾಗಿ ಹತ್ಯೆ ಮಾಡಿರುವ ಘಟನೆ ದೇವನಹಳ್ಳಿ ಸಮೀಪ ಚಿಕ್ಕಜಾಲದಲ್ಲಿ ನಡೆದಿದೆ.
ಘಟನೆ ಸಂಭವಿಸಿದ ಒಂದೇ ಗಂಟೆಯಲ್ಲಿ ಶಂಕಿತನನ್ನು ಪೊಲೀಸರು ಬಂಧಿಸಿದ್ದು ಕುಟುಂಬ ಸ್ನೇಹಿತನೇ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಮೃತ ಮಹಿಳೆಯನ್ನು 36 ವರ್ಷದ ಚಂದ್ರಕಲಾ ಎಂದು ಗುರುತಿಸಲಾಗಿದ್ದು ಶ್ರೀನಿವಾಸ್ ಕುಮಾರ್ ಅವರ ಪತ್ನಿಯಾಗಿದ್ದಾರೆ. ದಂಪತಿ ಭಾರತೀನಗರದ ನಿವಾಸಿಗಳಾಗಿದ್ದು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.
ಮೊನ್ನೆ ಗುರುವಾರ ಮಧ್ಯಾಹ್ನ ಸುಮಾರು 3.30ರ ಹೊತ್ತಿಗೆ ಈ ಘಟನೆ ನಡೆದಿದ್ದು ಚಂದ್ರಕಲಾ ಆಗ ಮಲಗಿದ್ದರು. ಮನೆಯ ಬಾಗಿಲು ಭಾಗಶಃ ಮುಚ್ಚಿತ್ತು. ದರೋಡೆಕೋರರು ಆಕೆಯನ್ನು ಗಮನಿಸುತ್ತಿದ್ದರು. ಮಲಗಿದ್ದಾಗ ಮನೆಯೊಳಗೆ ಪ್ರವೇಶಿಸಿ ಚಂದ್ರಕಲಾ ಬಟ್ಟೆಯಿಂದ ಕುತ್ತಿಗೆ ಹಿಸುಕಿ ಸಾಯಿಸಿ ಮಂಗಳಸೂತ್ರದೊಂದಿಗೆ ಪರಾರಿಯಾಗಿದ್ದಾರೆ.
ಕ್ಷೌರಿಕನಾಗಿ ಕೆಲಸ ಮಾಡುತ್ತಿರುವ ಚಂದ್ರಕಲಾಳ ಪತಿ ಶ್ರೀನಿವಾಸ್ ಘಟನೆ ನಡೆದ ಸಂದರ್ಭದಲ್ಲಿ ಹುಣಸಮಾರನಹಳ್ಳಿಯಲ್ಲಿ ಇದ್ದರು. ಆಕೆಯ ತಾಯಿ ಲಲಿತಮ್ಮ ಬಂದು ನೋಡುವಾಗ ಚಂದ್ರಕಲಾ ಸತ್ತು ಬಿದ್ದಿರುವುದನ್ನು ನೋಡಿದರು, ಮಂಗಳಸೂತ್ರದೊಂದಿಗೆ ದರೋಡೆಕೋರರು ಪರಾರಿಯಾಗಿರುವುದು ಗೊತ್ತಾಯಿತು.
ನೆರೆಹೊರೆಯವರಿಗೆ ವಿಷಯ ಮುಟ್ಟಿಸಿದ ಲಲಿತಮ್ಮ ಚಿಕ್ಕಜಾಲ ಪೊಲೀಸರಿಗೆ ದೂರು ನೀಡಿದರು. ಘಟನೆ ನಡೆದ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ದೊಡ್ಡಬಳ್ಳಾಪುರ ಗ್ರಾಮದ ಬಳಿ ಬಂಧಿಸಿದ್ದಾರೆ. ದರೋಡೆಕೋರರಿಂದ ಮಂಗಳಸೂತ್ರವನ್ನು ವಶಪಡಿಸಿಕೊಳ್ಳಲಾಗಿದೆ.
ಶ್ರೀನಿವಾಸ್ ಮತ್ತು ಆರೋಪಿ ಕೆಲ ಸಮಯಗಳಿಂದ ಸ್ನೇಹಿತರಾಗಿದ್ದರು. ಹಣಕಾಸಿನ ಮುಗ್ಗಟ್ಟು ಹೊಂದಿದ್ದರಿಂದ ಆರೋಪಿ ಚಂದ್ರಕಲಾಳ ಚಿನ್ನವನ್ನು ದರೋಡೆ ಮಾಡಲು ಹೊಂಚುಹಾಕುತ್ತಿದ್ದನು. ಮನೆಯ ಸುತ್ತಮುತ್ತ ಯಾವುದೇ ಸಿಸಿಟಿವಿ ಕ್ಯಾಮರಾಗಳಿಲ್ಲ. ನೆರೆ ಮನೆಯವರು ಮಾಹಿತಿ ನೀಡಿದ ಆಧಾರದ ಮೇಲೆ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ