ಫ್ಲೆಕ್ಸ್ ತೆರವು ವೇಳೆ ಬಿಬಿಎಂಪಿ ಅಧಿಕಾರಿಗಳ ಮೇಲೆ ಹಲ್ಲೆ

ರಾಜಧಾನಿಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌, ಭಿತ್ತಿಪತ್ರಗಳ ತೆರವು ಕಾರ್ಯಾಚರಣೆ ತೀವ್ರಗೊಳಿಸಿರುವ ಬಿಬಿಎಂಪಿಯು ...
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ
ಬೆಂಗಳೂರು: ರಾಜಧಾನಿಯಲ್ಲಿ ಅನಧಿಕೃತವಾಗಿ ಅಳವಡಿಸಿರುವ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌, ಭಿತ್ತಿಪತ್ರಗಳ ತೆರವು ಕಾರ್ಯಾಚರಣೆ ತೀವ್ರಗೊಳಿಸಿರುವ ಬಿಬಿಎಂಪಿಯು ಸಾವಿರಾರು ಫ್ಲೆಕ್ಸ್ ಗಳನ್ನು ತೆರವುಗೊಳಿಸಿದೆ. 
ಹೈಕೋರ್ಟ್‌ ಚಾಟಿ ಬೀಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಪಾಲಿಕೆ ಅಧಿಕಾರಿ, ಸಿಬ್ಬಂದಿ ವರ್ಗ ಗುರುವಾರವೂ ಫ್ಲೆಕ್ಸ್‌, ಬ್ಯಾನರ್‌, ಬಂಟಿಂಗ್ಸ್‌ಗಳ ತೆರವು ಕಾರ್ಯವನ್ನು ಕೈಗೊಂಡಿತು. ಕೆ.ಆರ್‌.ಪುರದ ಟಿನ್‌ಫ್ಯಾಕ್ಟರಿ ಬಳಿ ಅನಧಿಕೃತವಾಗಿ ಅಳವಡಿಸಿದ್ದ ಫ್ಲೆಕ್ಸ್‌ ತೆರವುಗೊಳಿಸುತ್ತಿದ್ದ ಸಂದರ್ಭದಲ್ಲಿ 50ಕ್ಕೂ ಅಧಿಕ ಮಂದಿ ಕಿಡಿಗೇಡಿಗಳ ತಂಡವೊಂದು ಪಾಲಿಕೆಯ ಸಹಾಯಕ ಕಂದಾಯ ಅಧಿಕಾರಿ ಭಟ್ಟಾಚಾರ್ಯ ಮತ್ತು ಕೂಲಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದೆ. ಈ ಸಂಬಂಧ ರಾಮಮೂರ್ತಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 
ರಾಜಧಾನಿಯಾದ್ಯಂತ ರಾರಾಜಿಸುತ್ತಿದ್ದ ಫ್ಲೆಕ್ಸ್‌ಗಳಿಗೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದ ಅಧಿಕಾರಿ, ಸಿಬ್ಬಂದಿಗಳು ಗಲ್ಲಿ ಗಲ್ಲಿಗಳಲ್ಲಿ ತಿರುಗಾಡಿ ಫ್ಲೆಕ್ಸ್‌ಗಳನ್ನು ಕಿತ್ತು ಹಾಕಿದರು. 
ನಗರದಲ್ಲಿ ಇನ್ನು ಮುಂದೆ ಅನಧಿಕೃತವಾಗಿ ಜಾಹೀರಾತು ಫಲಕ, ಫ್ಲೆಕ್ಸ್‌, ಬ್ಯಾನರ್‌, ಭಿತ್ತಿಪತ್ರ, ಬಾವುಟಗಳನ್ನು ಅಳವಡಿಸುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. 
ಹಲ್ಲೆ ನಡೆಸಿದ ಆರೋಪಿಗಳನ್ನು ಕೂಡಲೇ  ಬಂಧಿಸಿ ಕ್ರಮ ಕೈಗೊಳ್ಳುವಂತೆ ಪೊಲೀಸ್‌ ಕಮೀಷನರ್‌ ಅವರಿಗೆ ಮನವಿ ಮಾಡಿಕೊಳ್ಳಲಾಗಿದೆ,'' ಎಂದು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ,
ಹಲ್ಲೆ ನಡೆಸಿದವರು ಶಾಸಕ ಭೈರತಿ ಬಸವರಾಜ್ ಕಡೆಯವರು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ, ಆದರೆ ಮೇಯರ್ ಸಂಪತ್ ರಾಜ್ ಈ ಆರೋಪವನ್ನು ನಿರಾಕರಿಸಿದ್ದಾರೆ, ಇನ್ನು ಫ್ಲೆಕ್ಸ್ ತೆರವುಗೊಳಿಸುವಾಗ ಪೊಲೀಸ್ ಸಿಬ್ಬಂದಿ ಜೊತೆಗಿರುತ್ತಾರೆ, ಇನ್ನು ಒಂದು ವಾರದಲ್ಲಿ ನಗರದಲ್ಲಿರುವ ಎಲ್ಲಾ ಫ್ಲೆಕ್ಸ್ ಗಳನ್ನು ತೆರವುಗೊಳಿಸಬೇಕು ಎಂದು ಹೈಕೋರ್ಟ್ ಸೂಚಿಸಲಾಗಿದೆ,ಇದುವರೆಗೂ 18,671 ಫ್ಲೆಕ್ಸ್ ಗಳನ್ನು ತೆರವುಗೊಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com