ಏರೋ ಇಂಡಿಯಾ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್'ಗೆ ಕಾಂಗ್ರೆಸ್ ಪತ್ರ

ಬೆಂಗಳೂರಿನಲ್ಲಿ ನಡೆಯಬೇಕಿರುವ 'ಏರೋ ಇಂಡಿಯಾ' ವೈಮಾನಿಕ ಪ್ರದರ್ಶನ ಸ್ಥಳಾಂತರ ಯತ್ನಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ರಾಜ್ಯ ಕಾಂಗ್ರೆಸ್ ಪತ್ರ ಬರೆದಿದ್ದು, ಕೂಡಲೇ ಏರೋ ಇಂಡಿಯಾ ಸ್ಥಳಾಂತರ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಬೆಂಗಳೂರಿನಲ್ಲಿ ನಡೆಯಬೇಕಿರುವ 'ಏರೋ ಇಂಡಿಯಾ' ವೈಮಾನಿಕ ಪ್ರದರ್ಶನ ಸ್ಥಳಾಂತರ ಯತ್ನಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ರಾಜ್ಯ ಕಾಂಗ್ರೆಸ್ ಪತ್ರ ಬರೆದಿದ್ದು, ಕೂಡಲೇ ಏರೋ ಇಂಡಿಯಾ ಸ್ಥಳಾಂತರ ಪ್ರಯತ್ನ ನಿಲ್ಲಿಸುವುದಾಗಿ ಘೋಷಿಸಬೇಕೆಂದು ಆಗ್ರಹಿಸಿದೆ. 
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ರಕ್ಷಣಾ ಸಚಿವರಿಗೆ ಪತ್ರ ಬರೆದಿದ್ದು, ಬೆಂಗಳೂರಿನಲ್ಲಿ ನಡೆಯಬೇಕಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಸ್ಥಳಾಂತರ ಯತ್ನ, ನಗರದ ಹೆಚ್ಎಎಲ್'ನಿಂದ ರಫೇಲ್ ಯುದ್ಧ ವಿಮಾನ ಒಪ್ಪಂದ ಕಸಿದುಕೊಂಡು ಉದ್ಯಮಿಗೆ ನೀಡಿದ್ದು, ಸಿಆರ್'ಪಿಎಫ್ ಕೇಂದ್ರವನ್ನು ಉತ್ತರಪ್ರದೇಶಕ್ಕೆ ನೀಡಿದ್ದು ಸೇರಿದಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಸಾಕಷ್ಟು ಅನ್ಯಾಯ ಮಾಡಿದ್ದಾರೆಂದು ಆರೋಪಿಸಿದ್ದಾರೆ. 
ಅಲ್ಲದೆ, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಸೀತಾರಾಮನ್ ಅವರು ಕೂಡಲೇ ಏರೋ ಇಂಡಿಯಾ ಸ್ಥಳಾಂತರ ಪ್ರಯತ್ನ ನಿಲ್ಲಿಸುವುದಾಗಿ ಘೋಷಣೆ ಮಾಡಬೇಕು. ಈ ಬಗ್ಗೆ ರಕ್ಷಣಾ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. 
ಏರೋ ಇಂಡಿಯಾ ಅತ್ಯಂತ ಪ್ರತಿಷ್ಠಿಕ ಕಾರ್ಯಕ್ರಮವಾಗಿದ್ದು, ಇಡೀ ವಿಶ್ವದ ಜನತೆಯ ಕಣ್ಮನವನ್ನು ಸೆಳೆಯುತ್ತಿದೆ. ಕಾರ್ಯಕ್ರಮ ಆಯೋಜಿಸಲು ಬೆಂಗಳೂರು ಬಿಟ್ಟರೆ ಬೇರಾವುದೇ ಅತ್ಯುತ್ತಮ ಸ್ಥಳಗಳಿಲ್ಲ. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ನೀವು ರಾಜ್ಯಕ್ಕೆ ಏನನ್ನು ನೀಡಿದ್ದೀರಿ? ರಾಜ್ಯಕ್ಕೆ ಕೊಡುಗೆಗಳನ್ನು ನೀಡುವ ಬದಲಿಗೆ ಇಲ್ಲಿರುವುದನ್ನೇ ಇದರೆಡೆಗೆ ಸ್ಥಳಾಂತರ ಮಾಡುತ್ತಿದ್ದೀರಿ. ಸೀತಾರಾಮನ್ ಅವರು ಮೊದಲು ರಾಜ್ಯದ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಹೇಳಿದ್ದಾರೆ. 
ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿರುವ ಅವರು, ರೈತರ ಸಾಲ ಮನ್ನಾ ಮಾಡುವ ಕುರಿತು ಕೈಜೋಡಿಸಲು ಬಿಜೆಪಿ ನಿರಾಕರಿಸುತ್ತಿದೆ. ಮಹದಾಯಿ ವಿಚಾರದಲ್ಲಿ ಮಧ್ಯೆ ಪ್ರವೇಶ ಮಾಡುತ್ತಿಲ್ಲ. ಇದರಿಂದ 15ನೇ ವೇತನ ಆಯೋಗ ಜಾರಿಗೆ ಸಮಸ್ಯೆಯಾಗುತ್ತಿದೆ. ಕೇಂದ್ರ ಮೋದಿ ನೇತೃತ್ವದ ಸರ್ಕಾರ ಏಕಪಕ್ಷೀಯವಾಗಿ ವರ್ತಿಸುತ್ತಿದೆ. ಸಿಆರ್'ಪಿಎಫ್ ಕೇಂದ್ರವನ್ನು ಉತ್ತರಪ್ರದೇಶಕ್ಕೆ ಸ್ಥಳಾಂತರ ಮಾಡಿದ ಕೇಂದ್ರ, ಇದೀಗ ಏರೋ ಇಂಡಿಯಾವನ್ನು ಉತ್ತರಪ್ರದೇಶಕ್ಕೆ ಸ್ಥಳಾಂತರ ಮಾಡಲು ಯತ್ನಿಸುತ್ತಿದೆ. ರಫೇಲ್ ಒಪ್ಪಂದವನ್ನೂ ಹೆಚ್ಎಎಲ್ ನಿಂದ ಕಿತ್ತುಕೊಂಡಿದ್ದರು. ಇದೀಗ ಏರೋ ಇಂಡಿಯಾ ಕಸಿಯಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com