ಅರ್ಚಕರಿಗೆ ಪೂಜೆ ಪಾಠ ಹೇಳಿಕೊಟ್ಟ ಸಚಿವ ಹೆಚ್ ಡಿ ರೇವಣ್ಣ

ದೇವಸ್ಥಾನದ ಗರ್ಭಗುಡಿಯಲ್ಲಿ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಅವರ ಸೂಚನೆಯಂತೆ ...
ಹರದನಹಳ್ಳಿ ದೇಗುಲದಲ್ಲಿ ಪೂಜೆ ನೆರವೇರಿಸಿ ಹೊರಬಂದ ಸಿಎಂ ಕುಮಾರಸ್ವಾಮಿ ದಂಪತಿ
ಹರದನಹಳ್ಳಿ ದೇಗುಲದಲ್ಲಿ ಪೂಜೆ ನೆರವೇರಿಸಿ ಹೊರಬಂದ ಸಿಎಂ ಕುಮಾರಸ್ವಾಮಿ ದಂಪತಿ

ಹೊಳೆನರಸೀಪುರ (ಹಾಸನ ಜಿಲ್ಲೆ): ದೇವಸ್ಥಾನದ ಗರ್ಭಗುಡಿಯಲ್ಲಿ ಲೋಕೋಪಯೋಗಿ ಸಚಿವ ಹೆಚ್ ಡಿ ರೇವಣ್ಣ ಅವರ ಸೂಚನೆಯಂತೆ ಪೂಜೆ ಮಾಡಿದ ಮತ್ತೊಂದು ಘಟನೆ ಸೋಮವಾರ ನಡೆದಿದೆ.

ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಅವರ ಪತ್ನಿ ಅನಿತಾ ಕುಮಾರಸ್ವಾಮಿಯವರ ಟೆಂಪಲ್ ರನ್ ಮುಂದುವರಿದಿದ್ದು, ಮುಖ್ಯಮಂತ್ರಿಯಾದ ನಂತರ ಇಂದು ತಮ್ಮ ತವರು ಜಿಲ್ಲೆ ಹಾಸನಕ್ಕೆ ಪತ್ನಿ ಜೊತೆ ಭೇಟಿ ನೀಡಿದ್ದರು. ಜೊತೆಗೆ ಸಚಿವ ಹೆಚ್ ಡಿ ರೇವಣ್ಣ ಕೂಡ ಇದ್ದರು.

ಈ ಸಂದರ್ಭದಲ್ಲಿ ರೇವಣ್ಣ ಅವರೇ ತಮ್ಮ ಸೋದರ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಹೊಳೆನರಸೀಪುರದ ಶಿವನ ದೇವಸ್ಥಾನಕ್ಕೆ ಇಷ್ಟು ಹೊತ್ತಿಗೆ ಬನ್ನಿ, ಹೀಗೆಯೇ ದೇವಸ್ಥಾನಕ್ಕೆ ಸುತ್ತು ಬನ್ನಿ ಎಂದು ಹೇಳಿ ಅರ್ಚಕರಿಗೆ ಪೂಜೆ ಮಾಡಲು ಮಾರ್ಗದರ್ಶನ ಮಾಡುತ್ತಿದ್ದರು.

ಮುಂದೆ ಕುಮಾರಸ್ವಾಮಿ ಮತ್ತವರ ಕುಟುಂಬ ಹೊಳೆನರಸೀಪುರದ ಹರದನಹಳ್ಳಿಯಲ್ಲಿರುವ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿತು.ಅಲ್ಲಿ ಗರ್ಭಗುಡಿ ಕೆಳಗೆ ನಿಂತು ಸಚಿವ ರೇವಣ್ಣ ಅರ್ಚಕರಿಗೆ ಪೂಜೆಯ ಪಾಠ ಮಾಡಿದರು. ಇಂತಿಷ್ಟು ಹೊತ್ತಿಗೆ ಹೀಗೆಯೇ ಪೂಜೆ ಮಾಡಬೇಕೆಂದು ನಿರ್ದೇಶನ ನೀಡುತ್ತಿದ್ದರು. ಅರ್ಚಕರು ಕೂಡ ಬೇರೆ ವಿಧಿಯಿಲ್ಲದೆ ಸಚಿವರು ಹೇಳಿದಂತೆ ಪೂಜೆ ಮಾಡುತ್ತಿದ್ದುದು ಕಂಡುಬಂತು.

ಅಲ್ಲದೆ ಕುಮಾರಸ್ವಾಮಿ ದಂಪತಿಗೆ ಸಹ ಪೂಜೆಯಲ್ಲಿ ಹೇಗೆ ಪಾಲ್ಗೊಳ್ಳಬೇಕೆಂದು ಸೂಚನೆ ನೀಡಿದರು. ಈ ಹಿಂದೆ ಹಾಸನ ಜಿಲ್ಲೆಯಲ್ಲಿ ಸರ್ಕಾರಿ ಕಟ್ಟಡವೊಂದರ ಶಂಕುಸ್ಥಾಪನೆ ಸಂದರ್ಭದಲ್ಲಿ ಕೂಡ ರೇವಣ್ಣ ಅರ್ಚಕರು ಪೂಜೆ ಮಾಡುತ್ತಿದ್ದುದನ್ನು ಪ್ರಶ್ನಿಸಿದ್ದು ಮತ್ತು ಪೂಜೆ ಹೇಗೆ ಮಾಡಬೇಕೆಂದು ಹೇಳಿದ್ದು ಸುದ್ದಿಯಾಗಿತ್ತು.

ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅನಿತಾ ಕುಮಾರಸ್ವಾಮಿ, ತಮ್ಮ ಪತಿಗೆ ಮುಖ್ಯಮಂತ್ರಿ ಅಧಿಕಾರ ಸಿಕ್ಕಿದ ಹಿನ್ನಲೆಯಲ್ಲಿ ರಾಜ್ಯದ ಜನತೆಗೆ ಒಳ್ಳೆಯದಾಗಲಿ ಎಂದು ಮಾವ ಹೆಚ್ ಡಿ ದೇವೇಗೌಡರ ಆದೇಶದ ಪ್ರಕಾರ ಪೂಜೆ ಸಲ್ಲಿಸಿದ್ದೇವೆ, ಇಲ್ಲಿಂದ ನಂತರ ಧರ್ಮಸ್ಥಳ ಮಂಜುನಾಥ ದೇಗುಲ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಹೋಗಲಿದ್ದೇವೆ ಎಂದರು.

ಶ್ರಾವಣ ಮಾಸ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಮನೆ ದೇವರು ಹೊಳೆನರಸೀಪುರದ ಹರದನಹಳ್ಳಿ ದೇವೇಶ್ವರ ದೇವಾಲಯ, ಅವರ ತಂದೆಯ ಮೆಚ್ಚಿನ ದೈವ ಮಾವಿನ ಕೆರೆ ಬೆಟ್ಟದ ರಂಗನಾಥಸ್ವಾಮಿ ಸೇರಿದಂತೆ ಅವರ ಕುಲದೈವದ ಪೂಜೆಯಲ್ಲಿ ಭಾಗಿಯಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com