ಕೊಡಗು ಜಿಲ್ಲೆಯಲ್ಲಿ ಮತ್ತೆ ಭಾರೀ ಮಳೆ: ಕಾರ್ಯಾಚರಣೆಗೆ ಅಡ್ಡಿ, ಹಲವರು ನಾಪತ್ತೆ

ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಮತ್ತೆ ಮುಂದುವರೆದಿದ್ದು, ಹಲವೆಡೆ ಭೂಕುಸಿತ ಸಂಭವಿಸಿದೆ. ಭೂಕುಸಿತ ಹಿನ್ನಲೆಯಲ್ಲಿ ಹಲವರು ನಾಪತ್ತೆಯಾಗಿದ್ದು, ನಾಪತ್ತೆಯಾಗಿರುವವರು ಬದುಕುಳಿದಿರುವ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ...
ಪ್ರವಾಹ ಪೀಡಿತ ಕೊಡಗು ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಭದ್ರತಾ ಪಡೆಗಳು
ಪ್ರವಾಹ ಪೀಡಿತ ಕೊಡಗು ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಭದ್ರತಾ ಪಡೆಗಳು
ಮಡಿಕೇರಿ; ಕೊಡಗು ಜಿಲ್ಲೆಯಲ್ಲಿ ವರುಣನ ಆರ್ಭಟ ಮತ್ತೆ ಮುಂದುವರೆದಿದ್ದು, ಹಲವೆಡೆ ಭೂಕುಸಿತ ಸಂಭವಿಸಿದೆ. ಭೂಕುಸಿತ ಹಿನ್ನಲೆಯಲ್ಲಿ ಹಲವರು ನಾಪತ್ತೆಯಾಗಿದ್ದು, ನಾಪತ್ತೆಯಾಗಿರುವವರು ಬದುಕುಳಿದಿರುವ ಬಗ್ಗೆ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ. 
ಸ್ಥಳೀಯ ಮೂಲಗಳ ಪ್ರಕಾರ, ಜಿಲ್ಲೆಯು ಸಂಪರ್ಕವನ್ನು ಕಳೆದುಕೊಂಡಿದ್ದು, ಬಹಳಷ್ಟು ಜನರ ಸಾವುಗಳು ವರದಿಯೇ ಆಗಿಲ್ಲ ಎಂದು ತಿಳಿಸಿವೆ. 
ಮುಕ್ಕೊಡ್ಲು ಮತ್ತು ಕಾಲೂರು ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ್ದು, ಪ್ರವಾಹದ ನೀರಿನ ಮಟ್ಟ ಕೂಡ ಏರಿಕೆಯಾಗಿದೆ. ಇದರಿಂದ ರಕ್ಷಣಾ ಕಾರ್ಯಾಚರಣೆಗೆ ಭಾರೀ ತೊಡಕುಂಟಾಗಿದೆ. ಭಾರೀ ಮಳೆಯ ನಡುವೆಯೂ ಭದ್ರತಾ ಪಡೆಗಳು ಮುಕ್ಕೊಡ್ಲುವಿನಲ್ಲಿ ಹಗ್ಗ ಕಟ್ಟಿ ಜನ್ನರನ್ನು ರಕ್ಷಣೆ ಮಾಡುತ್ತಿದೆ. 
ಎನ್'ಡಿಆರ್'ಎಫ್, ಭಾರತೀಯ ಸೇನೆ, ನಾಗರೀಕ ಭದ್ರತಾ ಪಡೆ, ಎಸ್'ಡಿಆರ್'ಎಫ್, ಸ್ಥಳೀಯ ಪೊಲೀಸರ ತಂಡ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈವರೆಗೂ ಮುಕ್ಕೊಡ್ಲು ಪ್ರದೇಶದ 60 ಗ್ರಾಮಸ್ಥರನ್ನು ರಕ್ಷಣೆ ಮಾಡಿದ್ದಾರೆ. ಎಮ್ಮೆಥಾಡು ಗ್ರಾಮದಲ್ಲಿ 300 ಎಕರೆ ಭೂಮು ಸಂಪೂರ್ಣವಾಗಿ ನಾಶಗೊಂಡಿದೆ. ಆದರೆ, ಗ್ರಾಮಸ್ಥರನ್ನು ರಕ್ಷಣೆ ಮಾಡಿ ನಿರಾಶ್ರಿತ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. 
ಕಾಲೂರಿನಲ್ಲಿ ಇನ್ನು ಕೆಲ ಗ್ರಾಮಸ್ಥರಿದ್ದು, ರಕ್ಷಣೆಗಾಗಿ ಎದುರು ನೋಡುತ್ತಿದ್ದಾರೆ. ಅರಣ್ಯ ಪ್ರದೇಶದಲ್ಲಿ ಟ್ರೆಕ್ಕಿಂಗ್ ಮೂಲಕ ಮಡಿಕೇರಿ ತಲುಪಿದ್ದೆ. ಈ ವೇಳೆ 20ಮಂದಿ ಗ್ರಾಮಸ್ಥರು ಸಂಕಷ್ಟದಲ್ಲಿರುವುದು ಕಂಡು ಬಂದಿತ್ತು. ಆ ಪ್ರದೇಶ ಮಡಿಕೇರಿಯಿಂದ 13 ಕಿಮೀ ದೂರದಲ್ಲಿದೆ. ಸಂಕಷ್ಟದಲ್ಲಿದ್ದ 20 ಮಂದಿಯ ಪೈಕಿ ಓರ್ವ ವ್ಯಕ್ತಿಯನ್ನು ಸಂಪರ್ಕಿಸಿದ್ದೆ. ಈ ವೇಳೆ ಆ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿರುವ ವಿಚಾರ ತಿಳಿಯಿತು ಎಂದು ಕಾಲೂರು ಪ್ರದೇಶದ ಗ್ರಾಮಸ್ಥ ಚೆನ್ನಪಂಡ ನಿತಿನ್ ಹೇಳಿದ್ದಾರೆ. 
ಮಳೆಯ ನಡುವೆಯೂ ಸೇನಾಪಡೆಗಳು ರಕ್ಷಣಾ ಕಾರ್ಯಾಚರಣೆಗಳನ್ನು ಮುಂದುವರೆಸಿದ್ದು, ಮುಕ್ಕೊಡ್ಲು ಗ್ರಾಮದಿಂದ ಜೋಡುಪಾಲ 2ನೇ ಮೊನ್ನಗೇರಿ ಮತ್ತು ಕತಕೇರಿ ಪ್ರದೇಶ ತಲುಪಿದೆ. ಭಾರತೀಯ ಸೇನೆ ಹಾಗೂ ನಾಗರೀಕ ರಕ್ಷಣಾ ಪಡೆಗಳು ಕಾಲೂರು ಹಾಗೂ ದೇವಸ್ತುರುಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಎಸ್'ಡಬ್ಲ್ಯೂಎಟಿ ತಂಡ, ಪೊಲೀಸ್ ಪಡೆಗಳು ತಂತಿಪಾಲ ಗ್ರಾಮದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. 
ಭದ್ರತಾ ಪಡೆಗಳು ಪ್ರವಾಹ ಪೀಡಿತ ಪ್ರತೀ ಪ್ರದೇಶಗಳನ್ನು ತಲುಪಲು ಯತ್ನ ನಡೆಸುತ್ತಿದೆ ಎಂದು ಎಡಿಜಿಪಿ ಭಾಸ್ಕರ್ ರಾವ್ ಅವರು ಹೇಳಿದ್ದಾರೆ. 
ಕಾರ್ಯಾಚರಣೆ ವೇಳೆ ಕೆಲ ಹಿರಿಯ ನಾಗರೀಕರು ತಮ್ಮ ಮನೆಗಳನ್ನು ಬಿಟ್ಟು ಬರುವುದಿಲ್ಲ ಎಂದು ಹೇಳುತ್ತಿದ್ದರು. ನಂತರ ಅವರ ಮನವೊಲಿಸಿ ಭದ್ರತಾ ಕ್ರಮಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಯಿತು. ಹವಾಮಾನ ಇಲಾಖೆ ಇನ್ನೂ 36 ಗಂಟೆಗಳು ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿದೆ. ಹೀಗಾಗಿ ಹೆಲಿಕಾಪ್ಟರ್ ಕಾರ್ಯಾಚರಣೆಗೆ ತಡೆಯುಂಟಾಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com