ಕೊಡಗು ಪ್ರವಾಹ ಸಂತ್ರಸ್ತ ಮಕ್ಕಳಿಗೆ ರಾಜ್ಯದ ಯಾವುದೇ ಶಾಲೆಯಲ್ಲಿ ಉಚಿತ ಪ್ರವೇಶ: ಶಿಕ್ಷಣ ಇಲಾಖೆ ಆದೇಶ

ನೆರೆಯಿಂದಾಗಿ ಸಂಕಷ್ಟಗೊಳಗಾಗಿರುವ ಕೊಡಗು ಜಿಲ್ಲೆಯ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಮಕ್ಕಳು ರಾಜ್ಯದಲ್ಲಿ ಯಾವುದೇ ಶಾಲೆಯಲ್ಲಾದರೂ ಪ್ರವೇಶ ಪಡೆಯಬಹುದಾಗಿದೆ.
ಸಂತ್ರಸ್ತ ಮಕ್ಕಳು
ಸಂತ್ರಸ್ತ ಮಕ್ಕಳು

ಬೆಂಗಳೂರು: ಪ್ರವಾಹ ಪೀಡಿತ ಕೊಡಗು ಜಿಲ್ಲೆಯಲ್ಲಿ ನಾಶಗೊಂಡ ಶಾಲೆಗಳ ವಿದ್ಯಾರ್ಥಿಗಳಿಗೆ ರಾಜ್ಯದ ಯಾವುದೇ ಭಾಗದಲ್ಲಿ ಪ್ರವೇಶ ಪಡೆಯಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಈ ಸಂಬಂಧ ರಾಜ್ಯದ ಎಲ್ಲಾ ಜಿಲ್ಲೆಗಳ ಶಾಲೆಗಳಿಗೆ ಅಧಿಕೃತ ಸುತ್ತೋಲೆ ಹೊರಡಿಸಿದ್ದು ಕೊಡಗು ಜಿಲ್ಲೆಯ ಪ್ರವಾಹದಲ್ಲಿ ಶಾಲೆಗಳು ಕೊಚ್ಚಿಹೋಗಿ ನಿರ್ಗತಿಕರಾಗಿರುವ ಮಕ್ಕಳಿಗೆ ಯಾವುದೇ ತರಗತಿಗೆ ಸಹ ಪ್ರವೇಶ ನಿರಾಕರಿಸಬಾರದೆಂದು ಸೂಚನೆ ನೀಡಿದೆ. ಅಲ್ಲದೆ, ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುವ ಸಂದರ್ಭದಲ್ಲಿ ಯಾವುದೇ ಪ್ರಮಾಣಪತ್ರ ಅಥವಾ ದಾಖಲೆಗಳನ್ನು ಕೇಳಬಾರದು ಎಂದು ಕೂಡ ಸರ್ಕಾರ ಆದೇಶ ಹೊರಡಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಪ್ರವಾಹದಲ್ಲಿ ಹಲವು ಶಾಲೆಗಳು ನಾಶವಾಗಿ ಹೋಗಿವೆ. ಅವುಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಕೂಡ ಸೇರಿವೆ. ಇಂತಹ ಶಾಲೆಗಳ ವಿದ್ಯಾರ್ಥಿಗಳನ್ನು ಬೇರೆ ಶಾಲೆಗಳಿಗೆ ದಾಖಲಾತಿ ಮಾಡಿಕೊಳ್ಳುವಾಗ ಯಾವ ಪ್ರಮಾಣಪತ್ರಗಳನ್ನೂ ಕೇಳಬಾರದು. ಮಕ್ಕಳು ಶಿಕ್ಷಣ ವಂಚಿತರಾಗಬಾರದು ಎಂಬುದೇ ಸರ್ಕಾರದ ಉದ್ದೇಶವಾಗಿದೆ. ಬೇರೆ ಜಿಲ್ಲೆಗಳ ಸರ್ಕಾರಿ ವಸತಿ ಶಾಲೆಗಳಿಗೆ ಕಳುಹಿಸಲು ಬಹುತೇಕ ಪೋಷಕರು ಒಲವು ತೋರಿದ್ದಾರೆ ಅಂತವರಿಗೆ ಪ್ರವೇಶಾತಿಯನ್ನು ತಕ್ಷಣವೇ ನೀಡಬೇಕೆಂದು ಹೇಳಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಕೆಲವು ಶಾಲೆಗಳನ್ನು ಮರು ನಿರ್ಮಿಸಬೇಕಾದ ಅಗತ್ಯವಿದೆ. ಅದಕ್ಕೆ ಕನಿಷ್ಠವೆಂದರೂ ಒಂದು ವರ್ಷ ಬೇಕಾಗಬಹುದು. ಹೀಗಿರುವಾಗ ಸದ್ಯದ ಮಟ್ಟಿಗೆ ರಾಜ್ಯದ ಯಾವುದಾದರೂ ಶಾಲೆಯಲ್ಲಿ ಮಕ್ಕಳನ್ನು ದಾಖಲಾತಿ ಮಾಡುವಂತೆ ನಾವು ಸೂಚಿಸಿದ್ದೇವೆ. ಇದುವರೆಗೆ ಶಿಕ್ಷಣ ಇಲಾಖೆ ಜಿಲ್ಲೆಯಲ್ಲಿ ಸಂಪೂರ್ಣವಾಗಿ ನಾಶವಾದ 9 ಶಾಲೆಗಳನ್ನು ಗುರುತಿಸಿದೆ. ಈ ಶಾಲೆಗಳಲ್ಲಿ 580 ವಿದ್ಯಾರ್ಥಿಗಳಿದ್ದಾರೆ. ಕನಿಷ್ಠ 76 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಅಲ್ಪಸ್ವಲ್ಪ ದುರಸ್ತಿ ಕಾರ್ಯ ನಡೆಯಬೇಕಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಹಳ್ಳಿಗಳಿಂದ ಬರುವ ಅನೇಕ ಪಿಯುಸಿ ವಿದ್ಯಾರ್ಥಿಗಳಿಗೆ ಕಾಲೇಜುಗಳಿಗೆ ಬರಲು ಸಾಧ್ಯವಾಗದಿರಬಹುದು. ಅಂತಹ ವಿದ್ಯಾರ್ಥಿಗಳಿಗೆ ಹಾಜರಾತಿಯಲ್ಲಿ ವಿನಾಯ್ತಿ ನೀಡಲು ಪಿಯುಸಿ ಮಂಡಳಿ ನಿರ್ಧರಿಸಿದೆ ಮತ್ತು ಪಠ್ಯ ಮುಗಿಸಲು ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಭಾನುವಾರ ಮತ್ತು ದಸರಾ ರಜೆಗಳಲ್ಲಿ ತರಗತಿ ನಡೆಸುವಂತೆ ಸೂಚಿಸಲಾಗಿದೆ ಎಂದು ಇಲಾಖೆ ನಿರ್ದೇಶಕಿ ಸಿ ಶಿಖಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com