ಮಡಿಕೇರಿ: ಮಡಿಕೇರಿ ತಾಲೂಕಿನ ಹೆಮ್ಮತ್ತಾಳು ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕು ಮನೆ ಸಮೇತ ಕೊಚ್ಚಿ ಹೋಗಿದ್ದ ತಾಯಿ ಮತ್ತು ಮಗನ ಮೃತದೇಹವನ್ನು ಬುಧವಾರ ಪತ್ತೆ ಮಾಡಲಾಗಿದೆ.
ಸೇನಾಪಡೆ ಸತತ ಕಾರ್ಯಾಚರಣೆ ನಡೆಸಿ, ಹೆಮ್ಮತ್ತಾಳು ಗ್ರಾಮದ ಚಂದ್ರಾವತಿ (66) ಮತ್ತು ಅವರ ಪುತ್ರ ಉಮೇಶ್(36) ಅವರ ಮೃತದೇಹ ಪತ್ತೆ ಹಚ್ಚಿದ್ದಾರೆ.
ಕೊಡಗಿನಲ್ಲಿ ಉಂಟಾದ ಜಲ ಪ್ರಳಯದಿಂದಾಗಿ ಹೆಮ್ಮತ್ತಾಳು ಗ್ರಾಮದ ಈ ತಾಯಿ, ಮಗ ನೀರಿನಲ್ಲಿ ಕೊಚ್ಚಿ ಹೋಗಿರುವ ಬಗ್ಗೆ ಸಂಬಂಧಿಕರು ರಕ್ಷಣಾ ಪಡೆಗೆ ಮಾಹಿತಿ ನೀಡಿದ್ದರು. ಮಾಹಿತಿ ಪಡೆದ ರಕ್ಷಣಾ ಸಿಬ್ಬಂದಿ ಸತತ ಮೂರು ದಿನಗಳ ಹುಡುಕಾಟದ ಬಳಿಕ ಇಂದು ಇಬ್ಬರ ಶವ ಹೆಮ್ಮತಾಳು ಪ್ರದೇಶದಲ್ಲೇ ಪತ್ತೆ ಮಾಡಿದ್ದಾರೆ.
ಭೂಕುಸಿತದಿಂದ 20ಕ್ಕೂ ಹೆಚ್ಚು ಮನೆಗಳು ಕೊಚ್ಚಿ ಹೋಗಿದ್ದು, ಗ್ರಾಮದ ಹಲವು ಮನೆಗಳಿಗೆ ಭಾರೀ ಹಾನಿ ಉಂಟಾಗಿದೆ. ಮತ್ತೊಂದು ಕಡೆ ಹೆಬ್ಬಟ್ಟಗೆರೆ ಗ್ರಾಮದಲ್ಲಿಯೂ ಸೇನಾಪಡೆಗಳು ಡ್ರೋಣ್ ಮೂಲಕ ನಾಪತ್ತೆಯಾದವರಿಗೆ ಹುಡುಕಾಟ ನಡೆಸುತ್ತಿದೆ. 40 ಮನೆಗಳಿರುವ ಈ ಗ್ರಾಮ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ.