ಗೌರಿ ಲಂಕೇಶ್ ಹತ್ಯೆ ಪ್ರಕರಣ: ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಜಪ, ಮಂತ್ರ ಪಠಿಸುತ್ತಿದ್ದ ಆರೋಪಿಗಳು

ಗೌರಿ ಲಂಕೇಶ್ ಹಾಗೂ ಎಂಎಂ ಕಲಬುರಗಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳಿಂದ ಮಾಹಿತಿಗಳನ್ನು ಸಂಗ್ರಹಿಸಲು ವಿಶೇಷ ತನಿಖಾ ದಳ (ಎಸ್ಐಟಿ)ದ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಗೌರಿ ಲಂಕೇಶ್ ಹಾಗೂ ಎಂಎಂ ಕಲಬುರಗಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳಿಂದ ಮಾಹಿತಿಗಳನ್ನು ಸಂಗ್ರಹಿಸಲು ವಿಶೇಷ ತನಿಖಾ ದಳ (ಎಸ್ಐಟಿ)ದ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. 
ಕೇವಲ ಹತ್ಯೆ ಮಾಡುವುದಕ್ಕಷ್ಟೇ ಅಲ್ಲದೆ, ಹತ್ಯೆಯಾದ ಬಳಿಕ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡರೂ ವಿಚಾರಣೆಯನ್ನು ಹೇಗೆ ಎದುರಿಸಬೇಕೆಂಬ ಸೂಕ್ಷ್ಮ ತರಬೇತಿಗಳನ್ನು ಆರೋಪಿಗಳು ಪಡೆದುಕೊಂಡಿರುವುದು ಇದೀಗ ತಿಳಿದುಬಂದಿದೆ. 
ಹತ್ಯೆ ಪ್ರಕರಣ ಸಂಬಂಧ ಪೊಲೀಸರು ಆರೋಪಿಗಳನ್ನು ವಿಚಾರಣೆಗೊಳಪಡಿಸಿದ ಸಂದರ್ಭದಲ್ಲಿ ಆರೋಪಿಗಳು ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಾಗೂ ತಮ್ಮ ಜ್ಞಾನ ಬೇರೆಲ್ಲೂ ಸುಳಿಯದಂತೆ ನೋಡಿಕೊಳ್ಳಲು ಜಪ ಹಾಗೂ ಮಂತ್ರಗಳನ್ನು ಪಠಿಸುತ್ತಿದ್ದರು ಎಂದು ವರದಿಗಳು ತಿಳಿಸಿವೆ. 
ಪ್ರಕರಣ ಸಂಬಂಧ ಭರತ್ ಕುಣ್ರೆ ಎಂಬ ಆರೋಪಿಯನ್ನು ಪೊಲೀಸರು 10 ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ, ಆರೋಪಿಯನ್ನು ವಿಚಾರಣೆಗೊಳಪಡಿಸಿದ ಅಧಿಕಾರಿಗಳು ಆತನಿಂದ ಮಾಹಿತಿಗಳನ್ನು ಸಂಗ್ರಹಿಸಲು ಹರಸಾಹಸ ಪಡುತ್ತಿದ್ದಾರೆ. ವಿಚಾರಣೆ ವೇಳೆ ಆತ ಮೌನಕ್ಕೆ ಜಾರಿದ್ದು, ಆತನ ಮೌನ ಮುರಿಯಲು ಪೊಲೀಸರು ಸಾಕಷ್ಟ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. 
ಮಹಾರಾಷ್ಟ್ರ ರಾಜ್ಯದ ಎಟಿಎಸ್ ಅಧಿಕಾರಿಗಳು ಮಾತನಾಡಿ, ಪ್ರತೀ ಬಾರಿ ಪ್ರಶ್ನೆ ಮಾಡಿದಾಗಲೂ, ಪ್ರಮುಖವಾಗಿ ಇತ್ತೀಚಿನ ದಿನಗಳಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳ ಕುರಿತು ಪ್ರಶ್ನೆಗಳನ್ನು ಕೇಳಿದಾಕ್ಷಣ ಮೌನಕ್ಕೆ ಹೋಗುತ್ತಾನೆ ಹಾಗೂ ಜಪ, ಮಂತ್ರಗಳನ್ನು ಪಠಿಸಲು ಆರಂಭಿಸುತ್ತಾನೆಂದು ಹೇಳಿದ್ದಾರೆ. 
ಪ್ರಕರಣ ಸಂಬಂಧ ಮೊದಲ ಬಾರಿಗೆ ವಿಚಾರಣೆ ಪೊಲೀಸರು ಹಾಗೂ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಗಳು ಆರೋಪಿಸಿದ್ದರು. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಹೀಗಾಗಿ ಇದೀಗ ಜಪ, ಮಂತ್ರಗಳಂತಹ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಹಿಂದೂ ಉಗ್ರಗಾಮಿಗಳ ಗುಂಪಿನಲ್ಲಿ ಇದೂ ಕೂಡ ತರಬೇತಿಯ ಒಂದು ಭಾಗವಾಗಿದೆ ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ. 
ಗೌರಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮೊದಲ ಆರೋಪಿ ಟಿ.ನವೀನ್ ಕುಮಾರ್ ಸುಳ್ಳು ಪತ್ತೆ ಪರೀಕ್ಷೆಗೊಳಪಡಲು ನಿರಾಕರಿಸಿದ್ದ ಎಂದು ಬೆಂಗಳೂರು ತನಿಖಾ ತಂಡ ಮಹಾರಾಷ್ಟ್ರದ ಎಟಿಎಸ್ ಅಧಿಕಾರಿಗಳಿಗೆ ಮಾಹಿತಿ ನೀಡಿತ್ತು. ಇದಲ್ಲದೆ, ಆರೋಪಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನೂ ಹಾಕಿದ್ದರು. ಇದೇ ರೀತಿಯಲ್ಲಿಯೇ ಇದೀಗ ಆರೋಪಿಗಳಾದ ವೈಭವ್ ರಾವತ್, ಶರದ್ ಕಲ್ಸ್ಕರ್ ಮತ್ತು ಸುಧಾನ್ವಾ ಗೊಂಡಾಲ್ಕರ್ ಕೂಡ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸುತ್ತಿದ್ದಾರೆ. 
ಸಮೀರ್ ಗಾಯಕ್ವಾಡ್, ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಭೇಟಿಯಾಗಲು ಸತಾರ ಕಾರಾಗೃಹಕ್ಕೆ ಹೋದಾಗ ಇದೇ ರೀತಿ ತಂತ್ರವನ್ನೇ ಆತ ಕೂಡ ಪ್ರಯೋಗಿಸಿದ್ದರು. ಕಲಬುರಗಿ ಹತ್ಯೆ ಪ್ರಕರಣದ ಆರೋಪಿ ಕುರಿತು ಪ್ರಶ್ನೆ ಕೇಳಿದ ಕೂಡಲೇ ಆರೋಪಿಗಳು ಜಪ, ಮಂತ್ರ ಪಠಿಸಲು ಆರಂಭಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. 
ಈ ಜಪ ಹಾಗೂ ಮಂತ್ರಗಳ ಕುರಿತಂತೆ ಆರೋಪಿ ಅಮೋಲ್ ಕಾಳೆ ಬರೆದಿದ್ದ ಡೈರಿಯಲ್ಲಿ ದಾಖಳಾಗಿರುವುದು ತನಿಖಾಧಿಕಾರಿಗಳಿಗೆ ತಿಳಿದುಬಂದಿದೆ. 
ಪ್ರತೀಯೊಂದಕ್ಕೂ ಆರೋಪಿಗಳ ಬಳಿ ಕೋಡ್ ಗಳಿವೆ. ಭೇಟಿಯಾಗುವ ಹಾಗೂ ಮಾತುಕತೆ ನಡೆಸುವ ದಿನಾಂಕಕ್ಕೂ ಕೋಡ್ ಗಳನ್ನು ಬಳಕೆ ಮಾಡುತ್ತಿದ್ದರು. ಆರೋಪಿಗಳ ಬಳಿ ಹಲವು ಮೊಬೈಲ್ ಸಂಖ್ಯೆಗಳಿರುವುದು ತನಿಖೆ ವೇಳೆ ತಿಳಿದುಬಂದಿದೆ. 
ಬಲಪಂಥೀಯ ಸಂಘಟನೆಗಳಿಗಿರುವ ಸನಾತನ ಸಂಸ್ಥೆ ಜೊತೆಗಿನ ನಂಟು ಕಲಬುರಗಿ ಅತವಾ ಗೌರಿ ಲಂಕೇಶ್ ಹತ್ಯೆ ಪ್ರಕರಣಗಳಲ್ಲಿ ಏನಾದರೂ ನಂಟಿದೆಯೇ ಎಂಬುದರ ಕುರಿತು ಕರ್ನಾಟಕ ತನಿಖಾ ತಂಡ ಕೂಡ ತನಿಖೆ ನಡೆಸುತ್ತಿದೆ. ಗೋವಾದಲ್ಲಿರುವ ಸನಾತನ ಸಂಸ್ಥೆಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 
ಇದಲ್ಲದೆ, ಮತ್ತೊಂದು ಕುತೂಹಲಕಾರಿ ವಿಚಾರವೆಂದರೆ, ಬಲಪಂಥೀಯ ಸಂಘಟನೆಗಳು ಹಾಗೂ ಸನಾತನ ಸಂಸ್ಥೆ ಆಗಸ್ಟ್ 20ರಂದು ತನ್ನ ವೆಬ್ ಸೈಟ್ ಗಳಲ್ಲಿ ಸಲಹೆ, ಸೂಚನೆಗಳನ್ನು ನೀಡಿದ್ದು, ತನ್ನ ಅನುಯಾಯಿಗಳನ್ನು ಬಂಧನದಿಂದ ತಪ್ಪಿಸಿಕೊಳ್ಳಲು ಜಪ, ಮಂತ್ರಗಳನ್ನು ಪಠಿಸುವಂತೆ ತಿಳಿಸಿದೆ. 
ಶೀಘ್ರದಲ್ಲಿಯೇ ಮತ್ತೊಬ್ಬ ಆರೋಪಿಯ ಬಂಧನ
ಗೌರಿ ಲಂಕೇಶ್ ಹಾಗೂ ಕಲಬುರಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಶೀಘ್ರದಲ್ಲಿಯೇ ಬಂಧನಕ್ಕೊಳಪಡಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 
ಈ ಕುರಿತು ಪುಣೆ ಕ್ರಿಮಿನಲ್ ತನಿಖಾ ಇಲಾಖೆ ಮೂಲಗಳು ಮಾಹಿತಿ ನೀಡಿದ್ದು, ಎಟಿಎಸ್ ಜೊತೆಗೆ ಕರ್ನಾಟಕ ಸಿಐಡಿ ಮತ್ತು ಪುಣೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಮುಂದಿನ ಕ್ರಮಗಳ ಕುರಿತು ಶುಕ್ರವಾರಷ್ಟೇ ಪುಣೆಯಲ್ಲಿ ಸಭೆ ನಡೆಸಿದೆ. ಆರೋಪಿಗಳಿಗೆ ಪೊಲೀಸರು ಬಂಧನಕ್ಕೊಳಪಡಿಸುವ ವಿಚಾರ ತಿಳಿದುಬಂದಿದ್ದು, ಹೀಗಾಗಿ ಪದೇ ಪದೇ ತಮ್ಮ ಸ್ಥಳಗಳನ್ನು ಬದಲಿಸುತ್ತಿದ್ದಾರೆಂದು ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com