ಅಂತಾರಾಜ್ಯ ತಂಡದಿಂದ ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ

ಮೂವತ್ತು ಲಕ್ಷ ರೂಪಾಯಿ ನೀಡಿದರೆ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮೂವತ್ತು ಲಕ್ಷ ರೂಪಾಯಿ ನೀಡಿದರೆ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ ಅಂತರಾಜ್ಯ ತಂಡವನ್ನು ಬಂಧಿಸಲು ಬೆಂಗಳೂರು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕಳೆದ 10 ದಿನಗಳಲ್ಲಿ ಮೂವರು ಈ ರೀತಿ ಮೋಸ ಮಾಡಿ 52 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ. ಇವರ ಬಗ್ಗೆ ಮಹತ್ವದ ಮಾಹಿತಿ ಸಿಕ್ಕಿದ್ದು ಸದ್ಯದಲ್ಲಿಯೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡಿನ ರೈತರೊಬ್ಬರ ಮಗನಿಂದ ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ 9.5 ಲಕ್ಷ ರೂಪಾಯಿ ಎಗರಿಸಿದ್ದಾರೆ. ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಾಜಿ ಎಸ್ ಎಂಬ ವಿದ್ಯಾರ್ಥಿಗೆ ಆಗಸ್ಟ್ 16ರಂದು ರಾಜ್ ಕುಮಾರ್ ತಿಬರ್ ವಾಲ್ ಎಂಬುವವರಿಂದ ಫೋನ್ ಬಂದಿದೆ. 20 ಲಕ್ಷ ಕೊಟ್ಟರೆ ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ಹೇಳಿ ನಂಬಿಸಿದ್ದ. ಅದನ್ನು ನಂಬಿದ ಬಾಲಾಜಿ ಮುಂಗಡವಾಗಿ ಆಗಸ್ಟ್ 24ರಂದು 9.5 ಲಕ್ಷ ರೂಪಾಯಿ ನೀಡಿದ್ದನು.

ಹಣ ವರ್ಗಾವಣೆ ಮಾಡಿದ ನಂತರ ಫೋನ್ ಮಾಡುವುದಾಗಿ ತಿಳಿಸಿದ್ದರು. ಆದರೆ ಫೋನ್ ಬರಲಿಲ್ಲ, ಬಾಲಾಜಿ ಕರೆ ಮಾಡಿದಾಗ ತಿಬರ್ ವಾಲ್ ಮೊಬೈಲ್ ಸ್ವಿಚ್ ಆಫ್ ಎಂದು ಬರುತ್ತಿತ್ತು. ಆಗ ಬಾಲಾಜಿಗೆ ತಾನು ಮೋಸ ಹೋಗಿರುವುದು ತಿಳಿಯಿತು. ಅದೇ ರೀತಿ ಹರ್ಯಾಣ ಮೂಲದ ವ್ಯಾಪಾರಿಯೊಬ್ಬ ಕಿಮ್ಸ್ ನಲ್ಲಿ ತನ್ನ ಮಗನಿಗೆ ಮೆಡಿಕಲ್ ಸೀಟು ಸಿಗುತ್ತದೆಂದು ನಂಬಿ 21.5 ಲಕ್ಷ ರೂಪಾಯಿ ನೀಡಿ ಮೋಸ ಹೋಗಿದ್ದಾರೆ. ಅವರು ಸಹ ಆಗಸ್ಟ್ 23ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಆಂಧ್ರ ಪ್ರದೇಶದ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ಕೂಡ ಇಂತಹದ್ದೇ ಮತ್ತೊಂದು ವಂಚನೆ ಕೇಸು ದಾಖಲಾಗಿದೆ. ಶಶಾಂಕ್ ಶೇಖರ್ ಮತ್ತು ದಿನೇಶ್ ಸಿಂಗ್ ಎಂಬುವವರು ಪಿ ಚಂಗಲ್ ರಾಯುಡು ಮಗನಿಗೆ ಬೆಂಗಳೂರಿನ ವೈದೇಹಿ ಮೆಡಿಕಲ್ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ 52 ಲಕ್ಷ ರೂಪಾಯಿ ವಂಚಿಸಿದ್ದ.

ಪ್ರತಿವರ್ಷ ವೈದ್ಯಕೀಯ ಸೀಟು ಹಂಚಿಕೆ ಸಮಯದಲ್ಲಿ ಈ ರೀತಿಯ ವಂಚನೆ ಪ್ರಕರಣಗಳು ನಡೆಯುತ್ತವೆ. ಮೋಸ ಮಾಡುವವರ ತಂಡ ನೀಟ್ ದಾಖಲಾತಿ ಮತ್ತು ಫಲಿತಾಂಶ ಪಟ್ಟಿ ಮೂಲಕ ವಿದ್ಯಾರ್ಥಿಗಳ ಹೆಸರು ಮತ್ತು ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡು ಕರೆ ಮಾಡುತ್ತಾರೆ. ಇದೊಂದು ದೊಡ್ಡ ಪ್ರಮಾಣದ ವಂಚನೆಯಾಗಿದ್ದು ಮೋಸ ಹೋಗುವವರು ಬಹುತೇಕರು ಹೊರ ರಾಜ್ಯದವರಾಗಿರುತ್ತಾರೆ. ಇಂತಹ ವಂಚನೆ ಮಾಡುವವರ ದೊಡ್ಡ ಜಾಲವೇ ಇರುತ್ತದೆ, ಜನರು ಎಚ್ಚರಿಕೆಯಿಂದ ಇರಬೇಕು ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com