ಸಿನಿಮೀಯ ಮಾದರಿಯಲ್ಲಿ ಕ್ಯಾಬ್ ಚಾಲಕನ ಬಂಧಿಸಿ ಪತ್ನಿಯ ಬೆತ್ತಲೆ ವಿಡಿಯೊ ಮಾಡಿದ ಪ್ರಯಾಣಿಕರು!

ಪ್ರಯಾಣಿಕರು ಕ್ಯಾಬ್ ಚಾಲಕನನ್ನು ಸಿನಿಮೀಯ ಮಾದರಿಯಲ್ಲಿ ಅಪಹರಿಸಿ ಆತನ ಪತ್ನಿಯ ಬೆತ್ತಲೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು; ಪ್ರಯಾಣಿಕರು ಕ್ಯಾಬ್ ಚಾಲಕನನ್ನು ಸಿನಿಮೀಯ ಮಾದರಿಯಲ್ಲಿ ಅಪಹರಿಸಿ ಆತನ ಪತ್ನಿಯ ಬೆತ್ತಲೆ ವಿಡಿಯೊ ಮಾಡಿ ಹಣದ ಬೇಡಿಕೆಯಿಟ್ಟು ಹಿಂಸೆ ನೀಡಿದ ವಿಲಕ್ಷಣ ಘಟನೆ ಕಳೆದ ವಾರಾಂತ್ಯ ಬೆಂಗಳೂರಿನಲ್ಲಿ ನಡೆದಿದೆ.

ನಡೆದ ಘಟನೆಯೇನು?:
ಕಳೆದ ಶುಕ್ರವಾರ ರಾತ್ರಿ ಬೊಮ್ಮಸಂದ್ರದಿಂದ ಕ್ಯಾಬ್ ಚಾಲಕನಿಗೆ ಪ್ರಯಾಣಿಕರನ್ನು ಪಿಕ್ ಅಪ್ ಮಾಡಿಕೊಳ್ಳಲು ಬುಕ್ಕಿಂಗ್ ಕರೆ ಬಂದಿದೆ. ಅದರಂತೆ ಒಲಾ ಕ್ಯಾಬ್ ಚಾಲಕ ಅಲ್ಲಿಗೆ ತೆರಳಿದರು. ಹೇಳಿದ ಜಾಗದಲ್ಲಿ 4 ಮಂದಿ ಇದ್ದರು. ಕಾರಿಗೆ ಹತ್ತಿ ಕುಳಿತ ಪ್ರಯಾಣಿಕರು ಚಾಲಕ ಎಲ್ಲಿಗೆ ಹೋಗಬೇಕು ಎಂದು ಕೇಳಿದಾಗ ನಾಲ್ವರು ಹಲ್ಲೆ ಮಾಡಲು ಆರಂಭಿಸಿದರು.

ಚಾಲಕನನ್ನು ಬಲವಂತವಾಗಿ ಸೀಟಿನಿಂದ ಹಿಂದೆ ಕರೆದು ಕೂರಿಸಿ ಬೇರೊಬ್ಬ ಚಾಲಕನ ಸೀಟಿನಲ್ಲಿ ಕುಳಿತುಕೊಂಡನು, ಪಕ್ಕದಲ್ಲಿ ಮತ್ತೊಬ್ಬ ಕುಳಿತನು. ಹಿಂದೆ ಚಾಲಕನನ್ನು ಹಿಡಿದು ಮತ್ತಿಬ್ಬರು ಕುಳಿತರು. ರಾಮನಗರ ಕಡೆಗೆ ಕಾರನ್ನು ಕೊಂಡೊಯ್ದರು. ಚಾಲಕನ ಆನ್ ಲೈನ್ ವಾಲೆಟ್ ನಲ್ಲಿ 9 ಸಾವಿರದ 9 ರೂಪಾಯಿ ನೋಡಿ ಚಾಲಕನ ಅಳಿಯನಿಗೆ ಕರೆ ಮಾಡಿ ಹೆಚ್ಚಿನ ಹಣವನ್ನು ಖಾತೆಗೆ ವರ್ಗಾಯಿಸುವಂತೆ ಹೇಳಲು ಬಲವಂತಪಡಿಸಿದರು.

ಚಾಲಕನ ಅಳಿಯ 22 ಸಾವಿರ ರೂಪಾಯಿ ವರ್ಗಾಯಿಸುತ್ತಾರೆ. ಹಣ ಖಾತೆಗೆ ಬರುತ್ತಿದ್ದಂತೆ ಚಾಲಕನಲ್ಲಿದ್ದ ಎಟಿಎಂನ್ನು ಬಲವಂತವಾಗಿ ಕಿತ್ತುಕೊಂಡು 22 ಸಾವಿರ ರೂಪಾಯಿ ತೆಗೆಯುತ್ತಾರೆ. ನಂತರ ಕಾರು ಮೈಸೂರು ಹೆದ್ದಾರಿಯಲ್ಲಿ ಹೋಗುತ್ತದೆ. ಚನ್ನಪಟ್ಟಣದಲ್ಲಿ ಹೊಟೇಲ್ ನಲ್ಲಿ ರೂಂ ಬುಕ್ ಮಾಡಿ ಅಲ್ಲಿ ಚಾಲಕನನ್ನು ಸುಮಾರು 5 ಗಂಟೆಗಳ ಕಾಲ ಕೂಡಿ ಹಾಕುತ್ತಾರೆ. ಇಷ್ಟಕ್ಕೇ ಪ್ರಯಾಣಿಕರ ದರ್ಪ ಮುಗಿಯಲಿಲ್ಲ.

ಚಾಲಕನಿಗೆ ಆತನ ಪತ್ನಿಗೆ ವಿಡಿಯೊ ಕಾಲ್ ಮಾಡಿ ಬೆತ್ತಲೆಯಾಗಿ ನಿಲ್ಲುವಂತೆ ಹೇಳುತ್ತಾರೆ, ಇಲ್ಲದಿದ್ದರೆ ನಿನ್ನ ಪತಿಯನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕುತ್ತಾರೆ. ತನ್ನ ಪತಿಗೆ ಬಂದೊದಗಿದ ಕಷ್ಟವನ್ನು ನೋಡಿ ಮಹಿಳೆ ಭೀತಿಯಿಂದ  ಬೆತ್ತಲಾಗುತ್ತಾಳೆ. ಆರೋಪಿಗಳು ವಿಡಿಯೊ ಕಾಲ್ ಮಾಡಿ ಹೆಚ್ಚಿನ ಹಣ ನೀಡಬೇಕು, ಇಲ್ಲದಿದ್ದರೆ ಸೋಷಿಯಲ್ ಮೀಡಿಯಾದಲ್ಲಿ ಬೆತ್ತಲೆ ವಿಡಿಯೊ ಹಾಕಿ ಅವಮಾನ ಮಾಡುವುದಾಗಿ ಹೇಳುತ್ತಾರೆ.

ಕೊನೆಗೆ ಹೇಗೋ ಕ್ಯಾಬ್ ಚಾಲಕ ಶನಿವಾರ ಮಧ್ಯಾಹ್ನ ಶೌಚಾಲಯದ ಕಿಟಕಿ ಮೂಲಕ ತಪ್ಪಿಸಿಕೊಳ್ಳುವಲ್ಲಿ ಸಫಲರಾಗುತ್ತಾರೆ. ಕ್ಯಾಬ್ ಚಾಲಕ ತಪ್ಪಿಸಿಕೊಂಡಿದ್ದು ಗೊತ್ತಾದ ಕೂಡಲೇ ಆರೋಪಿಗಳು ಪೊಲೀಸರು ದಾಳಿ ಮಾಡಬಹುದು ಎಂಬ ಭಯದಿಂದ ರೂಂನಿಂದ ಓಡಿಹೋಗುತ್ತಾರೆ. ಆದರೆ ಕ್ಯಾಬ್ ಚಾಲಕನ ತೊಂದರೆ ಇಲ್ಲಿಗೇ ನಿಲ್ಲಲಿಲ್ಲ.

ಚನ್ನಪಟ್ಟಣ ಪೊಲೀಸರ ಬಳಿ ದೂರು ನೀಡಲು ಹೋದಾಗ ಎಫ್ಐಆರ್ ದಾಖಲಿಸಿಕೊಳ್ಳದೆ ಇದು ಬೆಂಗಳೂರಿನಲ್ಲಿ ಆದ ಘಟನೆ ಎಂದು ಬೆಂಗಳೂರಿಗೆ ಪೊಲೀಸರೊಬ್ಬರೊಂದಿಗೆ ಕಳುಹಿಸಿದರು. ಬೆಂಗಳೂರಿನ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಬೇಕೆಂದು ಹೇಳಿದರು. ನಂತರ ಚಾಲಕ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.

ಪತ್ನಿಯ ಬೆತ್ತಲೆ ವಿಡಿಯೊ ಮಾಡಿರುವುದು ಕುಟುಂಬದ ಮಾನದ ವಿಷಯವಾಗಿರುವುದರಿಂದ ಅದನ್ನು ದೂರಿನಲ್ಲಿ ಪ್ರಸ್ತಾಪಿಸದಂತೆ ಪೊಲೀಸರು ಹೇಳಿದರು. ಹೀಗಾಗಿ ನಾನು ಅದನ್ನು ದೂರಿನಲ್ಲಿ ಪ್ರಸ್ತಾವಿಸಲಿಲ್ಲ ಎಂದು ಚಾಲಕ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದಾರೆ. ಆಡುಗೋಡಿ ಪೊಲೀಸರು ಅಪಹರಣ, ದರೋಡೆ ಮತ್ತು ಬೆದರಿಕೆ ಕೇಸನ್ನು ದಾಖಲಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ರಾಬಿನ್ ಮತ್ತು ಅರುಣ್ ಬೆತ್ನಿ ಎಂದು ಗುರುತಿಸಲಾಗಿದೆ. ಉಳಿದವರು ತಲೆಮರೆಸಿಕೊಂಡಿದ್ದು ಹುಡುಕಲು ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಒಲಾ ವಕ್ತಾರ, ಇದೊಂದು ದುರದೃಷ್ಟಕರ ಘಟನೆ, ಚಾಲಕ ಮತ್ತು ಅವರ ಕುಟುಂಬದವರು ಎದುರಿಸಿದ ಪರಿಸ್ಥಿತಿ ನಿಜಕ್ಕೂ ಆಘಾತಕಾರಿ. ಇಂತಹ ಕೃತ್ಯವನ್ನು ನಾವು ಖಂಡಿಸುತ್ತೇವೆ. ಘಟನೆ ಬೆಳಕಿಗೆ ಬಂದ ಕೂಡಲೇ ಆ ಪ್ರಯಾಣಿಕರ ಒಲಾ ಖಾತೆಯನ್ನು ಕಪ್ಪು ಪಟ್ಟಿಗೆ ಸೇರಿಸಿದ್ದೇವೆ. ಈ ಮಧ್ಯೆ ಚಾಲಕನಿಗೆ ಮುಂದಿನ ತನಿಖೆ ವೇಳೆ ಎಲ್ಲಾ ರೀತಿಯಲ್ಲಿಯೂ ಸಹಕರಿಸುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com