ರಾಜ್ಯದ 6 ಸಾವಿರ ಗ್ರಾಮಗಳಲ್ಲಿ ಸ್ಮಶಾನವಿಲ್ಲ: ಹೈಕೋರ್ಟ್ ಗೆ ಸರ್ಕಾರದ ಮಾಹಿತಿ

ರಾಜ್ಯದ ಸುಮಾರು 6 ಸಾವಿರ ಗ್ರಾಮಗಳು ಮತ್ತು ಎರಡು ನೂರಕ್ಕೂ ಹೆಚ್ಚು ಪಟ್ಟಣ ಪ್ರದೇಶಗಳಲ್ಲಿ ಸ್ಮಶಾನಗಳಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅಧಿಕೃತ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯದ  ಸುಮಾರು 6 ಸಾವಿರ ಗ್ರಾಮಗಳು ಮತ್ತು ಎರಡು ನೂರಕ್ಕೂ ಹೆಚ್ಚು ಪಟ್ಟಣ ಪ್ರದೇಶಗಳಲ್ಲಿ ಸ್ಮಶಾನಗಳಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಅಧಿಕೃತ ಮಾಹಿತಿ ನೀಡಿದೆ.
ಸ್ಮಶಾನ ಇಲ್ಲದ ಗ್ರಾಮಗಳಲ್ಲಿ ಸ್ಮಶಾನಕ್ಕಾಗಿ ಅಗತ್ಯ ಜಮೀನು ಗುರುತಿಸಲು ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಮೊಹಮ್ಮದ್‌ ಇಕ್ಬಾಲ್‌ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹಾಗೂ ನ್ಯಾ. ಎಸ್‌. ಸುಜಾತ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರ ಈ ಮಾಹಿತಿ ಸಲ್ಲಿಸಿತು.
ವಿಚಾರಣೆ ವೇಳೆ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪರವಾಗಿ ಸರ್ಕಾರಿ ವಕೀಲರು ನ್ಯಾಯಪೀಠಕ್ಕೆ ಪ್ರಮಾಣಪತ್ರ ಸಲ್ಲಿಸಿದರು. ರಾಜ್ಯದಲ್ಲಿ ಸ್ಮಶಾನಗಳ ಸಮಸ್ಯೆ ನಿವಾರಿಸಲು ಸರ್ಕಾರದಿಂದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 
2018 19ನೇ ಸಾಲಿನ ಬಜೆಟ್‌ನಲ್ಲಿ ಸ್ಮಶಾನಗಳ ನಿರ್ಮಾಣಕ್ಕಾಗಿ 10 ಕೋಟಿ ಮೀಸಲಿರಿಸಿದೆ. ಪ್ರಸ್ತುತ ರಾಜ್ಯದ 6,053 ಗ್ರಾಮಗಳಲ್ಲಿ ಹಾಗೂ 281 ಪಟ್ಟಣಗಳಲ್ಲಿ ಸ್ಮಶಾನಕ್ಕೆ ಜಾಗ ಲಭ್ಯವಿಲ್ಲ. ಹೀಗಾಗಿ ಎಲ್ಲ  ಜಿಲ್ಲಾಧಿಕಾರಿಗಳಿಗೆ ಅಗತ್ಯ ಜಾಗ ಖರೀದಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಸರ್ಕಾರಿ ವಕೀಲರು  ವಿವರಿಸಿದರು.
ಅಲ್ಲದೇ ಕಳೆದ ಎರಡು ವರ್ಷಗಳಲ್ಲಿ 1,123 ಗ್ರಾಮಗಳಲ್ಲಿ ಸ್ಮಶಾನ ನಿರ್ಮಿಸಲಾಗಿದೆ. ಪ್ರತಿವರ್ಷ ಎಲ್ಲ ಗ್ರಾಮಗಳಿಗೂ ಅವುಗಳ ಜನಸಂಖ್ಯೆ ಆಧರಿಸಿ ಎಲ್ಲ ಧರ್ಮವರಿಗೂ ಅನುಕೂಲವಾಗುವಂತೆ ಸ್ಮಶಾನ ನಿರ್ಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪ್ರಮಾಣಪತ್ರದಲ್ಲಿ ವಿವರಿಸಲಾಗಿದೆ.
ರಾಜ್ಯದ ಅನೇಕ ಗ್ರಾಮಗಳಲ್ಲಿ ಸ್ಮಶಾನವೇ ಇಲ್ಲ. ಅಲ್ಲಿ ಜನ ಮೃತಪಟ್ಟರೆ ಅವರ ಅಂತ್ಯಕ್ರಿಯೆ ನಡೆಸುವುದೇ ದೊಡ್ಡ ಸಮಸ್ಯೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com