ಬೆಳಗಾವಿ ಸುವರ್ಣ ಸೌಧ ಸ್ವಚ್ಛಗೊಳಿಸಲು ಸರ್ಕಾರ ಮಾಡಿರುವ ವೆಚ್ಚ ಬರೋಬ್ಬರಿ 29 ಲಕ್ಷ ರೂ!

ಸುವರ್ಣ ಸೌಧದಲ್ಲಿ ವಿಧಾನ ಮಂಡಲ ಅಧಿವೇಶ ನಡೆಸಲು ರಾಜ್ಯ ಸರ್ಕಾರ ಕೋಟಿಗಟ್ಟಲೆ ಹಣವನ್ನು ...
ಬೆಳಗಾವಿ ವಿಧಾನ ಸಭೆ ಅಧಿವೇಶನದ ಸಂಗ್ರಹ ಚಿತ್ರ
ಬೆಳಗಾವಿ ವಿಧಾನ ಸಭೆ ಅಧಿವೇಶನದ ಸಂಗ್ರಹ ಚಿತ್ರ

ಬೆಳಗಾವಿ: ಸುವರ್ಣ ಸೌಧದಲ್ಲಿ 10 ದಿನಗಳ ಚಳಿಗಾಲ ಅಧಿವೇಶನ ಇನ್ನು ಮೂರು ದಿನಗಳಲ್ಲಿ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಅಲ್ಲಿ ಅಧಿವೇಶನ ನಡೆಸಲು ಸರ್ಕಾರ ಎಷ್ಟು ಖರ್ಚು ಮಾಡುತ್ತದೆ ಎಂಬ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತ ಆಘಾತಕಾರಿ ಅಂಕಿಅಂಶವೊಂದನ್ನು ಬಹಿರಂಗಪಡಿಸಿದ್ದಾರೆ.

ಅಧಿವೇಶನ ನಡೆಸಲು ರಾಜ್ಯ ಸರ್ಕಾರ ಕೋಟಿಗಟ್ಟಲೆ ಹಣವನ್ನು ವ್ಯಯಿಸುತ್ತದೆ ಎಂದು ಈ ಹಿಂದೆ ಸಾಕಷ್ಟು ಬಾರಿ ಟೀಕೆಗಳು ಕೇಳಿಬಂದಿದ್ದವು. ವರ್ಷದಲ್ಲಿ ಕೇವಲ 10 ದಿನ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೆ ಕೋಟಿಗಟ್ಟಲೆ ಹಣ ವ್ಯಯಿಸುವ ಅಗತ್ಯವೇನಿದೆ ಎನ್ನುವ ಪ್ರಶ್ನೆ ಜನಸಾಮಾನ್ಯರದ್ದಾಗಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ಸಿಕ್ಕಿರುವ ಮಾಹಿತಿ ಪ್ರಕಾರ, ಕಳೆದ ವರ್ಷ ಚಳಿಗಾಲದ ಅಧಿವೇಶನ ಆರಂಭವಾಗುವುದಕ್ಕೆ ಮುನ್ನ ಸುವರ್ಣ ಸೌಧದ ಧೂಳು, ಬಲೆ ತೆಗೆದು ಕಟ್ಟಡವನ್ನು ಸ್ವಚ್ಛಗೊಳಿಸಲು ಸರ್ಕಾರ ವ್ಯಯಿಸಿದ ಹಣ ಬರೋಬ್ಬರಿ 29 ಲಕ್ಷ ರೂಪಾಯಿ.

ಆರ್ ಟಿಐ ಕಾರ್ಯಕರ್ತ ಭೀಮಪ್ಪ ಗಡದ್ ಅವರಿಗೆ ಸರ್ಕಾರದಿಂದ ಕಳೆದ ಬೆಳಗಾವಿ ಅಧಿವೇಶನದಲ್ಲಿ ವೆಚ್ಚವಾದ ಬಗ್ಗೆ ಸಿಕ್ಕಿರುವ ಅಧಿಕೃತ ಮಾಹಿತಿಯಲ್ಲಿ 10 ದಿನಗಳ ಚಳಿಗಾಲ ಅಧಿವೇಶನಕ್ಕೆ ಒಟ್ಟು ಬರೋಬ್ಬರಿ 21.57 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರದ ಉನ್ನತ ಮಟ್ಟದ ನಾಲ್ವರು ಸಚಿವರು ಅಧಿವೇಶನ ಸಮಯದಲ್ಲಿ ಬೆಳಗಾವಿಯಲ್ಲಿ ಉಳಿದುಕೊಳ್ಳಲು 24 ಲಕ್ಷ ರೂಪಾಯಿ ವ್ಯಯಿಸಿದರೆ ಶಾಸಕರು ಮತ್ತು ಇತರ ಅತಿ ಗಣ್ಯ ವ್ಯಕ್ತಿಗಳ ವಸತಿಗೆ 4.79 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಇದುವರೆಗೆ ಬೆಳಗಾವಿಯಲ್ಲಿ 8 ಅಧಿವೇಶನಗಳನ್ನು ನಡೆಸಲಾಗಿದ್ದು ಬರೋಬ್ಬರಿ 84 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ.

ಹುಬ್ಬಳ್ಳಿಯಲ್ಲಿ ಶಾಸಕರು ಹೊಟೇಲ್ ನಲ್ಲಿ ತಂಗಿ ಸುವರ್ಣ ಸೌಧಕ್ಕೆ ಪ್ರತಿದಿನ ಪ್ರಯಾಣಿಸಿದವರಿಗೆ ಸರ್ಕಾರ ಪ್ರತಿದಿನಕ್ಕೆ 5 ಸಾವಿರ, ಬೆಳಗಾವಿ ನಗರದಲ್ಲಿ ಉಳಿದುಕೊಂಡವರಿಗೆ ಪ್ರತಿದಿನಕ್ಕೆ 2,500 ರೂಪಾಯಿಗಳಂತೆ ಪ್ರಯಾಣಭತ್ಯೆ ವ್ಯಯಿಸಿದೆ. ಪತ್ರಕರ್ತರ ವಸತಿ ಮತ್ತು ಊಟದ ವ್ಯವಸ್ಥೆಗೆ ಸರ್ಕಾರ 34.42 ಲಕ್ಷ ರೂಪಾಯಿ ಖರ್ಚು ಮಾಡಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com