ಡ್ರೆಸ್ ಕೋಡ್ ನಿಂದ ಲೈಂಗಿಕ ಅಲ್ಪಸಂಖ್ಯಾತರಿಗೆ ಸಿಗುತ್ತಿಲ್ಲ ಸರ್ಕಾರದ ಸವಲತ್ತುಗಳು

ಮೈತ್ರಿ ಯೋಜನೆಯಡಿ ಲೈಂಗಿಕ ಅಲ್ಪಸಂಖ್ಯಾತರಿಗೆ ಸರ್ಕಾರ ಪಿಂಚಣೆಯನ್ನು ಘೋಷಿಸಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇದರ ಪ್ರಯೋಜನವೂ ಸಿಗುತ್ತಿಲ್ಲ.
ಸಾಂದರ್ಭಿಕ ಚಿತ್ರಗಳು
ಸಾಂದರ್ಭಿಕ ಚಿತ್ರಗಳು

ಚಿತ್ರದುರ್ಗ: ಲೈಂಗಿಕ ಅಲ್ಪಸಂಖ್ಯಾತರು ಧರಿಸುವ ಬಟ್ಟೆಯಿಂದಲೇ ಸರ್ಕಾರದಿಂದ ಸಿಗುತ್ತಿರುವ ಸವಲತ್ತುಗಳನ್ನು ಪಡೆಯಲು ಆಗುತ್ತಿಲ್ಲ, ಮೈತ್ರಿ ಯೋಜನೆಯಡಿ ಲೈಂಗಿಕ ಅಲ್ಪಸಂಖ್ಯಾತರಿಗೆ ಸರ್ಕಾರ ಪಿಂಚಣೆಯನ್ನು ಘೋಷಿಸಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇದರ ಪ್ರಯೋಜನವೂ ಸಿಗುತ್ತಿಲ್ಲ.

ಸೀರೆ ಹಾಗೂ ಸಲ್ವಾರ್ ಧರಿಸುವವರಿಗೆ ಮಾತ್ರ ಪಿಂಚನೆಗೆ ಪರಿಗಣಿಸಲಾಗಿದೆ. ಆದರೆ, ಶರ್ಟ್, ಧೋತಿ, ಪ್ಯಾಂಟ್ ಧರಿಸುತ್ತಿರುವವರನ್ನು ಪಿಂಚಣಿಗೆ ಪರಿಗಣಿಸುತ್ತಿಲ್ಲ. ಈ ಸಂಬಂಧ ಮಹಿಳಾ ಮತ್ತು ಮಕ್ಕಳ  ಕಲ್ಯಾಣ ಇಲಾಖೆ  ಅಧಿಕಾರಿಗಳನ್ನು ಭೇಟಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಆರೋಪಿಸಿದ್ದಾರೆ.

ಸರ್ಕಾರಿ ಅಧಿಕಾರಿಗಳ ವರ್ತನೆ ಬಗ್ಗೆ ಅಲ್ಪಸಂಖ್ಯಾತ ಸಮುದಾಯ ತೀವ್ರ ಅಸಮಾಧಾನ ಹೊಂದಿದೆ. ಸಂವಿಧಾನದ ಪ್ರಕಾರ ಯಾವುದೇ ಡ್ರೆಸ್ ಕೋಡ್  ನಿಗದಿಪಡಿಸಿಲ್ಲ. ತಮ್ಮ ಹಿತಾಸಕ್ತಿಗೆ ವಿರುದ್ದದಂತೆ ಅಧಿಕಾರಿಗಳು ನಡೆದುಕೊಳ್ಳುತ್ತಾರೆ.  ಸರ್ಕಾರ ನೀಡಿರುವ ಎಲ್ಲಾ ಸವಲತ್ತುಗಳು ದೊರೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಜೋಗಪ್ಪ, ಹಿಜಿರಾ, ತೃತೀಯ ಲಿಂಗಿಗಳು ಎಂದು  ಕರೆಯಲಾಗುವ ಸುಮಾರು 800 ಜನರು ವಾಸಿಸುತ್ತಿದ್ದಾರೆ. ಆದಾಗ್ಯೂ, ಶೇ. 50 ರಷ್ಟು ಮಂದಿ ಮಾತ್ರ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.

ಬಾಲ್ಯದಿಂದಲೂ ಪುರುಷರ ರೀತಿಯಲ್ಲಿ ಬಟ್ಟೆ ಹಾಕುತ್ತಿದ್ದೇನೆ. ಆದ್ದರಿಂದಾಗಿ ಪಿಂಚಣಿ ದೊರೆಯುತ್ತಿಲ್ಲ. ಈ ಸಮುದಾಯದ ಬಗ್ಗೆ ಸರ್ಕಾರ ಸೂಕ್ತ ಸಮೀಕ್ಷೆ ನಡೆಸಬೇಕು, ಎಲ್ಲರಿಗೂ ಪಿಂಚಣಿ ಒದಗಿಸಬೇಕೆಂದು  ಈ ಸಮುದಾಯದ ಸದಸ್ಯ ಈರಣ್ಣ  ಒತ್ತಾಯಿಸಿದ್ದಾರೆ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಸಹಾಯಕ ಕಮೀಷನರ್ ವಿಜಯ್ ಕುಮಾರ್,  ತೃತೀಯ ಲಿಂಗಿಗಳಿಗೆ ಪಿಂಚಣಿ ನೀಡಲು ಸಿದ್ಧರಿದ್ದೀವಿ. ಆದಾಗ್ಯೂ, ಅವರು ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಅವರಿಗೆ ಅಗತ್ಯವಾದ ಎಲ್ಲಾ ಸವಲತ್ತುಗಳನ್ನು  ಒದಗಿಸಲು ಕಂದಾಯ ಇಲಾಖೆ ಸಿದ್ಧವಿರುವುದಾಗಿ ಹೇಳಿದರು.

 ಸ್ವಯಂ ಸೇವಾ ಸಂಸ್ಥೆಯೊಂದಿಗೆ ಜಿಲ್ಲೆಯಲ್ಲಿನ ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಸರ್ವೆ ನಡೆಸಲಾಗುವುದು. ಇದರ ಆಧಾರದ ಮೇಲೆ ಪಿಂಚಣಿ ನೀಡುವುದಾಗಿ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com