ಬೆಳಗಾವಿ ಅಧಿವೇಶನಕ್ಕೆ ತೆರೆ, ಈ ಅಧಿವೇಶನ ತೃಪ್ತಿ ತಂದಿದೆ ಎಂದ ಸ್ಪೀಕರ್

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕ್ಷಮೆಯಾಚಿಸಬೇಕು ಎಂದು ಪ್ರತಿಪಕ್ಷ ಬಿಜೆಪಿ ಪಟ್ಟು ಹಿಡಿದು ಪ್ರತಿಭಟನೆ....
ರಮೇಶ್ ಕುಮಾರ್
ರಮೇಶ್ ಕುಮಾರ್
ಬೆಳಗಾವಿ: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕ್ಷಮೆಯಾಚಿಸಬೇಕು ಎಂದು ಪ್ರತಿಪಕ್ಷ ಬಿಜೆಪಿ ಪಟ್ಟು ಹಿಡಿದು ಪ್ರತಿಭಟನೆ ಮುಂದುವರೆಸಿದ ಹಿನ್ನೆಲೆಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರು ವಿಧಾನಸಭೆ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದರು. ಇದರೊಂದಿಗೆ 10 ದಿನಗಳ ಚಳಿಗಾಲದ ಅಧಿವೇಶನಕ್ಕೆ ಶುಕ್ರವಾರ ತೆರೆ ಬಿದ್ದಿದೆ.
ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳ ಕ್ಷಮೆ ಯಾಚನೆಗೆ ಒತ್ತಾಯಿಸಿ ಪ್ರತಿಭಟನೆ ಹಾಗೂ ವಿಧಾನ ಪರಿಷತ್ ನಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಆಗ್ರಹ, ಗದ್ದಲ-ಕೋಲಾಹಲದ ನಡುವೆಯೇ ಹಲವು ಮಹತ್ವದ ವಿಧೇಯಕಗಳಿಗೆ ಅಂಗೀಕಾರ ಪಡೆದ ನಂತರ ಉಭಯ ಸದನಗಳ ಕಲಾಪವನ್ನು ಮುಂದೂಡಲಾಯಿತು. 
ರೈತರ ಸಾಲಮನ್ನಾದ ಬಗ್ಗೆ ಸ್ಪಷ್ಟನೆಗೆ ಆಗ್ರಹಿಸಿ ಹಾಗೂ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಯಡಿಯೂರಪ್ಪನವರನ್ನು ಕ್ಷಮೆ ಕೇಳಬೇಕೆಂದು ಒತ್ತಾಯಿಸಿ ವಿಧಾನಸಭೆಯಲ್ಲಿ ಪ್ರತಿಪಕ್ಷ ಬಿಜೆಪಿ ನಡೆಸುತ್ತಿದ್ದ ಪ್ರತಿಭಟನೆ ಇಂದು ಕೂಡ ಮುಂದುವರಿದಿತ್ತು.ಸದನದ ಬಾವಿಗಿಳಿದ ಬಿಜೆಪಿ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು.
ಬಿಜೆಪಿಯವರ ಈ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತಾರೂಢ ಜೆಡಿಎಸ್-ಕಾಂಗ್ರೆಸ್ ಸದಸ್ಯರು ಪ್ರತಿರೋಧ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸದನದಲ್ಲಿ ಗದ್ದಲ-ಕೋಲಾಹಲ ಉಂಟಾಯಿತು. ಹೀಗಾಗಿ ಸ್ಪೀಕರ್ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿದರು.
ಬಳಿಕ ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್ ಅವರು, ಈ ಅಧಿವೇಶನ ತೃಪ್ತಿ ತಂದಿದೆ. ಪ್ರಮುಖ ವಿಚಾರಗಳ ಬಗ್ಗೆ ಚರ್ಚೆಯಾಗಿದೆ. ಆಡಳಿತ ಪಕ್ಷ- ವಿರೋಧ ಪಕ್ಷದ ಶಾಸಕರಿಗೆ ಧನ್ಯವಾದಗಳು ಎಂದರು.
ಈ ಬಾರಿ ಯಾವುದೇ ಸಮಸ್ಯೆ ಇಲ್ಲದಂತೆ ಅಧಿವೇಶನ ಮುಕ್ತಾಯವಾಗಿದೆ. ಹೆಚ್ಚಿನ ಹಣ ಅಧಿವೇಶನಕ್ಕೆ ಖರ್ಚು ಆಗುತ್ತಿತ್ತು. ಈ ಬಾರಿ ಹೆಚ್ಚಿನ ಹಣ ಪೋಲು ಮಾಡದಂತೆ  ಸೂಚಿಸಲಾಗಿತ್ತು. ಎಂಟರಿಂದ ಹತ್ತು ಕೋಟಿ ಉಳಿದಿದೆ. 10 ರಿಂದ 12 ಕೋಟಿ ಖರ್ಚು ಮಾಡಲಾಗಿದೆ. ಕಳೆದ ಬಾರಿ 22 ಕೋಟಿ ಹಣ ಖರ್ಚು ಆಗಿತ್ತು. ಎಲ್ಲ ವರ್ಗದ ಸಿಬ್ಬಂದಿಗೆ ನಾನು ಧನ್ಯವಾದಗಳು ಹೇಳುತ್ತೇನೆ ಎಂದು ಸ್ಪೀಕರ್​ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com