ಗದಗ: ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ದಾರುಣ ಸಾವಿಗೀಡಾದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಶನಿವಾರ ತಡರಾತ್ರಿ ಗದಗದ ಮುಂಡರಗಿ ರಸ್ತೆ ರಿಂಗ್ ರೋಡ್ ಬಳಿ ನಡೆದ ಘಟನೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ವಿಭಜಕ (ಡಿವೈಡರ್)ಗೆ ಡಿಕ್ಕಿಯಾಗಿ ಬಳಿಕ ಇನ್ನೊಂದು ಕಾರಿಗೆ ಗುದ್ದಿದೆ.
ಅಪಘಾತದಲ್ಲಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.4 ಜನರು ತೀವ್ರ ಗಾಯಗೊಂಡಿದ್ದಾರೆ.
ಆನಂದ ಬೆಟಗೇರಿ, ಸಿದ್ದು ಕೋರಿಶೆಟ್ಟಿ, ಮನೋಜಕುಮಾರ ಕರಡಿಗುಡ್ಡ, ಅಮೃತ ಹಾಗೂ ಚನ್ನುವಾಡದ್ ಎನ್ನುವವರು ಸಾವನ್ನಪ್ಪಿದ ದುರ್ದೈವಿಗಳು. ಇವರೆಲ್ಲರೂ ಧಾರವಾಡದ ಹೆಬ್ಬಳ್ಳಿ ಅಗಸಿ ನಿವಾಸಿಗಳಾಗಿದ್ದರು.
ಇನ್ನೊಂದು ಕಾರಿನಲ್ಲಿದ್ದ ಗದಗ ಮೂಲದ ಮಂಜುನಾಥ ಹಳ್ಳೀಕೇರಿ, ವಿರುಪಾಕ್ಷಪ್ಪ ಅಬ್ಬೀಗೇರಿ, ವಿಜಯಕುಮಾರ ಬನವಾಸಿ, ವಿಶ್ವನಾಥ ಕೆರೂರ ಎಂಬುವವರಿಗೆ ತೀವ್ರ ಗಾಯಗಳಾಗಿದ್ದು ಇವರುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತಂತೆ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.