ಅಗಲಿದ ನಾಯಕನಿಗೆ ಕಣ್ಣೀರಿನ ವಿದಾಯ ಹೇಳಿದ ಗುಪ್ತ ಶೆಟ್ಟಿ ಹಳ್ಳಿ

ಸಾಮಾನ್ಯದಂತಿದ್ದ ಒಂದು ಗ್ರಾಮವನ್ನು ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡಿದ್ದ ದಕ್ಷ, ಪ್ರಾಮಾಣಿಕ ಅಧಿಕಾರಿ ಮಧುಕರ ಶೆಟ್ಟಿ. ಗ್ರಾಮವನ್ನು ಎಲ್ಲರೂ ಗುರ್ತಿಸುವಂತೆ ಮಾಡಲು ಕಾರಣವಾಗಿದ್ದ ಅಧಿಕಾರಿಗಳನ್ನು ಕಳೆದುಕೊಂಡಿರುವ...
ಗುಪ್ತಶೆಟ್ಟಿ ಹಳ್ಳಿ
ಗುಪ್ತಶೆಟ್ಟಿ ಹಳ್ಳಿ
Updated on
ಚಿಕ್ಕಮಗಳೂರು: ಸಾಮಾನ್ಯದಂತಿದ್ದ ಒಂದು ಗ್ರಾಮವನ್ನು ಇಡೀ ರಾಜ್ಯವೇ ತಿರುಗಿ ನೋಡುವಂತೆ ಮಾಡಿದ್ದ ದಕ್ಷ, ಪ್ರಾಮಾಣಿಕ ಅಧಿಕಾರಿ ಮಧುಕರ ಶೆಟ್ಟಿ. ಗ್ರಾಮವನ್ನು ಎಲ್ಲರೂ ಗುರ್ತಿಸುವಂತೆ ಮಾಡಲು ಕಾರಣವಾಗಿದ್ದ ಅಧಿಕಾರಿಗಳನ್ನು ಕಳೆದುಕೊಂಡಿರುವ ಗುಪ್ತಶೆಟ್ಟಿ ಹಳ್ಳಿ ಇದೀಗ ಅಗಲಿದ ನಾಯಕನಿಗೆ ಕಣ್ಣೀರಿನ ವಿದಾಯ ಹೇಳಿದೆ. 
ಈ ಗ್ರಾಮದ ಹೆಸರೇ ಒಂದು ಕಥೆಯನ್ನು ಹೇಳುತ್ತದೆ. 2006ರಲ್ಲಿ ಮೂಡಿಗೆರೆಯ ಸಾರಾಗೋಡು ಮೀಸಲು ಅರಣ್ಯದಿಂದ 32 ಕುಟುಂಬಗಳನ್ನು ಒಕ್ಕಲೆಬ್ಬಿಸಲಾಗಿತ್ತು. ಇದರ ಪರಿಣಾಮ ಅನೇಕರು ಭೂಮಿ, ಮನೆಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದರು. 
ಈ ವೇಳೆ ನಿರಂತರ ಹೋರಾಟ ಮಾಡಿದ್ದ ಜನರು ಮಧುಕರ ಶೆಟ್ಟಿಯವರ ಸಹಾಯದಿಂದ ಭೂಮಿಯನ್ನು ವಾಪಸ್ಸು ಪಡೆದುಕೊಂಡಿದ್ದರು. ಒತ್ತುವರಿ ಮಾಡಿದ್ದ ಪ್ರಭಾವಿ ವ್ಯಕ್ತಿಯಿಂದ ಭೂಮಿಯನ್ನು ಹಿಂಪಡೆದ ಮಧುಕರ ಶೆಟ್ಟಿಯವರು ಜನರಿಗೆ ಮರಳಿಸಿದ್ದರು. ಮಧುಕರ ಶೆಟ್ಟಿಯವರು ಮಾಡಿದ್ದ ಸಹಾಯಕ್ಕೆ ಗ್ರಾಮಸ್ಥರು ಆ ಗ್ರಾಮಕ್ಕೆ ಗುಪ್ತ ಶೆಟ್ಟಿಹಳ್ಳಿ ಎಂದೇ ನಾಮಕರಣ ಮಾಡಿದ್ದರು. ಇದೀಗ ತಮ್ಮ ನಾಯಕನನ್ನು ಕಳೆದುಕೊಂಡಿರುವ ಈ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. 
ಗ್ರಾಮದ ನಿವಾಸಿ ಉಮೇಶ್ ಅವರು ಮಾತನಾಡಿ, ಕೆಲ ಅರಣ್ಯ ಅಧಿಕಾರಿಗಳು ತಟ್ಕೋಲಾ ಅರಣ್ಯದಿಂದ ನಮ್ಮನ್ನು ಹೊರ ಹಾಕಿದ್ದರು. ಅರಣ್ಯ ಪ್ರದೇಶದಲ್ಲಿ ಬಹುತೇಕರು ದಲಿತರೇ ಇದ್ದರು. ಅರಣ್ಯ ಪ್ರದೇಶದಿಂದ ಹೊರ ಹಾಕಿದ ಬಳಿಕ ಮುಂದೇನೂ ಮಾಡಬೇಕೆಂಬ ಯಾವುದೇ ದಾರಿಗಳೂ ನಮಗೆ ತೋಚಿರಲಿಲ್ಲ. ಬಳಿ ಇಬ್ಬರು ಅಧಿಕಾರಿಗಳ ಮೊರೆ ಹೋಗಿದ್ದೆವೆ. ಈ ವೇಳೆ ಮಧುಕರ ಶೆಟ್ಟಿಯವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನಮಗೆ ನಮ್ಮ ಭೂಮಿಯನ್ನು ವಾಪಸ್ ನೀಡಿದ್ದರು. ಮಧುಕರ ಶೆಟ್ಟಿಯವರು ನಿಧನ ಹೊಂದಿರುವುದು ನಮ್ಮಂತಹ ಬಡವರಿಗಾಗಿರುವ ದೊಡ್ಡ ನಷ್ಟ ಎಂದು ಹೇಳಿದ್ದಾರೆ. 
ನಾಡಿನ ಖ್ಯಾತ ಪತ್ರಕರ್ತ ದಿ.ವಡ್ಡರ್ಸೆ ರಘುರಾಮ ಶೆಟ್ಟಿಯವರ ಪುತ್ರರಾಗಿದ್ದ ಮಧುಕರ ಶೆಟ್ಟಿ ಅವರು, 1999ರಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಆರಂಭಿಸಿದ್ದರು. 2009ರಲ್ಲಿ ಲೋಕಾಯುಕ್ತ ಸಂಸ್ಥೆಯ ಎಸ್ಪಿಗೆ ಹುದ್ದೆಗೆ ಅವರನ್ನು ಸರ್ಕಾರ ನಿಯೋಜಿಸಿತು. ಅಲ್ಲಿ ಭ್ರಷ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಪಾಲಿಗೆ ದುಃಸ್ವಪ್ನವಾಗಿದ್ದ ಅವರು, ಅಂದಿನ ಕೆಜಿಎಫ್'ನ ಶಾಸಕ ವೈ.ಸಂಪಂಗಿ ಹಾಗೂ ಕೋಲಾರ ಜಿ.ಪಂ.ಅಧ್ಯಕ್ಷ ಸೇರಿ ಹಲವು ಗಣ್ಯರ ವಿರುದ್ಧ ಅಕ್ರಮಗಳನ್ನು ಬಯಲಿಗೆಳೆದು ಖಡಕ್ ಅಧಿಕಾರಿ ಎನ್ನಿಸಿಕೊಂಡಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com