ಭ್ರೂಣದ ನಾಡಿಮಿಡಿತವನ್ನು ಅರಿಯುವ ಸೂಲಗಿತ್ತಿ ಡಾ.ನರಸಮ್ಮ

10 ವರ್ಷಗಳ ಹಿಂದೆ ಕರ್ನಾಟಕದ ಕೆಲವರಿಗೆ ಅದರಲ್ಲೂ ಗ್ರಾಮೀಣ ಭಾಗದ ಜನತೆಗೆ ಮಾತ್ರ ಸೂಲಗಿತ್ತಿ ನರಸಮ್ಮ
ಸೂಲಗಿತ್ತಿ ಡಾ.ನರಸಮ್ಮ
ಸೂಲಗಿತ್ತಿ ಡಾ.ನರಸಮ್ಮ
ತುಮಕೂರು: 10 ವರ್ಷಗಳ ಹಿಂದೆ ಕರ್ನಾಟಕದ ಕೆಲವರಿಗೆ ಅದರಲ್ಲೂ ಗ್ರಾಮೀಣ ಭಾಗದ ಜನತೆಗೆ ಮಾತ್ರ ಸೂಲಗಿತ್ತಿ ನರಸಮ್ಮ ಎಂಬ ಹೆಸರು ಗೊತ್ತಿತ್ತು. ಆದರೆ ಇಂದು ಇಡೀ ದೇಶದಲ್ಲಿ ಸೂಲಗಿತ್ತಿ ನರಸಮ್ಮ ಹೆಸರು ಜನಪ್ರಿಯವಾಗಿದೆ. ಅದಕ್ಕೆ ಕಾರಣ ಈ ವರ್ಷ ಅವರಿಗೆ ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಸಿಕ್ಕಿರುವುದು. 
97 ವರ್ಷದ ಈ ವಯೋವೃದ್ಧೆ 12 ಮಕ್ಕಳ ತಾಯಿ ಮತ್ತು 22 ಮೊಮ್ಮಕ್ಕಳಿಗೆ ಅಜ್ಜಿ. ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಕೃಷ್ಣಾಪುರದ ನರಸಮ್ಮ ಈವರೆಗೆ 15 ಸಾವಿರಕ್ಕೂ ಹೆಚ್ಚು ಶಿಶುಗಳನ್ನು ಹೆರಿಸಿದ ಹಿರಿಯಜ್ಜಿ.
ಇಷ್ಟೊಂದು ಜನೋಪಕಾರಿ ಕೆಲಸ ಮಾಡಿದ್ದರೂ ನರಸಮ್ಮ ಹೆಸರು ಮಾತ್ರ ಇಲ್ಲಿಯವರೆಗೆ ಅವರ ಗ್ರಾಮ ಬಿಟ್ಟು ಆಚೆ ಹೋಗಿರಲಿಲ್ಲ. ಬೆಂಗಳೂರು-ಹಿಂದೂಪುರ-ಪಾವಗಡ ಹೆದ್ದಾರಿಯಲ್ಲಿ ನರಸಿಮ್ಮ ಅವರ ಮನೆ ಇದ್ದರೂ ಕೂಡ ಅವರ ಗ್ರಾಮಕ್ಕೆ ಕೇಬಲ್ ಟಿವಿ ಬಂದಿರಲಿಲ್ಲ. ಈ ಗ್ರಾಮದಲ್ಲಿ ಡಿಶ್ ಆಂಟೆನಾ ಇದ್ದುದು ಎರಡು ಮನೆಗಳಲ್ಲಿ ಮಾತ್ರ. ಇಲ್ಲಿನ ಶಾಲೆಗಳ ಶಿಕ್ಷಕರು ಮಾತ್ರ ಪತ್ರಿಕೆಗಳನ್ನು ಓದುವ ಅಭ್ಯಾಸ ಇಟ್ಟುಕೊಂಡಿದ್ದರು. 
ಇಂತಹ ಗ್ರಾಮದ ಇಡೀ ಚಿತ್ರಣ ಬದಲಾಗಿದ್ದು 2007ರಲ್ಲಿ. ಪ್ರಮುಖ ಬರಹಗಾರ್ತಿಯರಾದ ಅನ್ನಪೂರ್ಣ ವೆಂಕಟನಂಜಪ್ಪ ಮತ್ತು ಬ.ಹ.ರಾಮಕುಮಾರಿ ಅವರು ನರಸಮ್ಮ ಅವರನ್ನು ಗುರುತಿಸಿದಾಗ. ಅದು ಕೂಡ ಆಕಸ್ಮಿಕವಾಗಿ. 
ಅದೊಂದು ದಿನ ನರಸಮ್ಮನವರು ತಮ್ಮ ಮಗ ಪಾವಗಡ ಶ್ರೀರಾಮ ತನ್ನ ಗರ್ಭಿಣಿ ಪತ್ನಿಯನ್ನು ಖಾಸಗಿ ಆಸ್ಪತ್ರೆಗೆ ಮಗುವಿನ ಹೆರಿಗೆಗಾಗಿ ದಾಖಲಿಸಿದ್ದಾಗ ಬೈಯುತ್ತಿದ್ದರು.ಲೇಖಕಿಯರು ಏಕೆ ಎಂದು ನರಸಮ್ಮ ಅವರನ್ನು ಕೇಳಿ ವಿಚಾರಿಸಿದಾಗ ಅವರ ಸಾಧನೆ ತಿಳಿಯಿತು.
ಲೇಖಕಿಯರು ನರಸಮ್ಮ ಅವರನ್ನು ಜಿಲ್ಲಾ ಮಟ್ಟದಲ್ಲಿ ಮಹಿಳಾ ಸಾಧಕಿಯರು ಪ್ರಶಸ್ತಿಗೆ ನಾಮಾಂಕಿತಗೊಳಿಸಿದರು. ಇದು ನರಸಮ್ಮ ಅವರನ್ನು ಸಾರ್ವಜನಿಕವಾಗಿ ಗುರುತಿಸಲು ಬಾಗಿಲು ತೆರೆದುಕೊಟ್ಟಿತು. 2012ರಲ್ಲಿ ಅವರನ್ನು ಕರ್ನಾಟಕ ಸರ್ಕಾರ ಡಿ.ದೇವರಾಜ ಅರಸು ಪ್ರಶಸ್ತಿ ನೀಡಿ ಗೌರವಿಸಿತು. ನಂತರ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮತ್ತು ಭಾರತ ಸರ್ಕಾರದ ವಯೋಶ್ರೇಷ್ಟ ಸಮ್ಮಾನಗಳು ಹುಡುಕಿಕೊಂಡು ಬಂದವು. 2014ರಲ್ಲಿ ತುಮಕೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಿತು. ಈ ವರ್ಷ ದೇಶದ ಮೂರನೇ ಅತ್ಯಂತ ಶ್ರೇಷ್ಟ ನಾಗರಿಕ ಸನ್ಮಾನವಾದ ಪದ್ಮಶ್ರೀ ಪ್ರಶಸ್ತಿ ನೀಡಿದ್ದು, ಮಾರ್ಚ್ 20ರಂದು ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಸನ್ಮಾನ ನಡೆಯಲಿದೆ.
ಸೂಲಗಿತ್ತಿ ಎಂದರೆ ಗರ್ಭಿಣಿಯರನ್ನು ಹೆರಿಸುವ ಕಾಯಕ. ಈ ಬಗ್ಗೆ ನರಸಮ್ಮ ಹೀಗೆ ಹೇಳುತ್ತಾರೆ: ತುಂಬು ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಅವರಿಗೆ ಹೆರಿಗೆ ಮಾಡಿಸುವ ವಿದ್ಯೆಯನ್ನು ನಾನು ನನ್ನ ಅಜ್ಜಿ ಮರಿಗೆಮ್ಮ ಅವರಿಂದ ಕಲಿತೆ.ನನ್ನ 5 ಮಕ್ಕಳನ್ನು ಹೆರಿಸಿದ್ದು ನನ್ನ ಅಜ್ಜಿಯವರು ಎನ್ನುತ್ತಾರೆ ನರಸಮ್ಮ.
ಆಂಧ್ರಪ್ರದೇಶದ ಮಡಕಶಿರಾ ಗ್ರಾಮದ ನರಸಿಮ್ಮ ಅವರ ಅಜ್ಜಿ ಕೂಡ ಸೂಲಗಿತ್ತಿಯಾಗಿದ್ದರು. ತಾವು ಗರ್ಭಿಣಿಯಾಗಿದ್ದಾಗ ತಮ್ಮ ಅಜ್ಜಿ ಕೃಷ್ಣಾಪುರದಿಂದ 9 ಕಿಲೋ ಮೀಟರ್ ನಡೆದುಕೊಂಡು ಬಂದು ಪೌಷ್ಟಿಕಾಂಶ ಆಹಾರ ನೀಡುತ್ತಿದ್ದುದನ್ನು ನರಸಮ್ಮ ನೆನಪಿಸಿಕೊಳ್ಳುತ್ತಾರೆ.
ನರಸಮ್ಮ ಅವರು ಅಲೆಮಾರಿ ಜನಾಂಗಕ್ಕೆ ಸೇರಿದವರು. ಆ ಜನಾಂಗದ ಅದೆಷ್ಟೋ ಮಹಿಳೆಯರು ಕೃಷ್ಣಾಪುರಕ್ಕೆ ಬಂದು ನರಸಮ್ಮ ಅವರಲ್ಲಿ ಆಶ್ರಯ ಪಡೆದು ಹೆರಿಗೆ ಮಾಡಿಸಿಕೊಂಡಿದ್ದಾರೆ. ಗರ್ಭಿಣಿಯರಿಗೆ ನೈಸರ್ಗಿಕ ಆಯುರ್ವೇದ ಔಷಧಗಳನ್ನು ಕೂಡ ತಯಾರಿಸಿ ಕೊಡುತ್ತಾರೆ. ಗರ್ಭಿಣಿಯರ ಭ್ರೂಣದ ನಾಡಿಮಿಡಿತ ಅರ್ಥ ಮಾಡಿಕೊಂಡು, ಅದರ ಆರೋಗ್ಯ, ಮಗುವಿನ ತಲೆ ಯಾವ ಕಡೆಗಿದೆ, 8-9 ತಿಂಗಳಲ್ಲಿ ಮಗು ಗಂಡೊ-ಹೆಣ್ಣೊ ಎಂದು ಕೂಡ ಹೇಳುವಷ್ಟು ನಿಪುಣರು.
ನರಸಮ್ಮ ಅವರಿಗೆ 12 ವರ್ಷದಲ್ಲಿ ಮದುವೆಯಾಗಿತ್ತು. 20ನೇ ವಯಸ್ಸಿನಲ್ಲಿ ಅಂದರೆ 1940ರಲ್ಲಿ ತನ್ನ ಚಿಕ್ಕಮ್ಮನ ಹೆರಿಗೆಗೆ ನರಸಮ್ಮ ಸಹಾಯ ಮಾಡಿದ್ದರು. ನರಸಮ್ಮ ಮತ್ತು ಅವರ ಪತಿ ಆಂಜಿನಪ್ಪ ಅವರಿಗೆ 12 ಮಕ್ಕಳಿದ್ದರು. ಅವರಲ್ಲಿ ನಾಲ್ವರು ಗಂಡು ಮಕ್ಕಳು ಚಿಕ್ಕವರಿರುವಾಗಲೇ ತೀರಿಕೊಂಡಿದ್ದಾರೆ. 22 ಮೊಮ್ಮಕ್ಕಳಿದ್ದಾರೆ. 
ಇದೀಗ ಅವರ ಒಂದಿಬ್ಬರು ಹೆಣ್ಣು ಮಕ್ಕಳು ಮತ್ತು ಸೊಸೆಯಂದಿರು ಸೂಲಗಿತ್ತಿ ನರಸಮ್ಮನವರ ಪವಿತ್ರ ವಿದ್ಯೆಯನ್ನು ಮುಂದುವರಿಸುತ್ತಿದ್ದಾರೆ. ತಮ್ಮ ತಾಯಿಯ ಕಾಯಕದ ಬಗ್ಗೆ ಬಹಳ ಹೆಮ್ಮೆಯಿದೆ ಎಂದು ಅವರ ಮಗ ಶ್ರೀರಾಮ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com