
ಬೆಂಗಳೂರು: ಫೆಬ್ರುವರಿ ತಿಂಗಳು ಆರಂಭವಾಗಿ ಐದು ದಿನವಾದರೂ ಬೆಂಗಳೂರಿನಲ್ಲಿ ಚಳಿಯ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ. ಉಷ್ಣಾಂಶದಲ್ಲಿ ಇಳಿಕೆ ಮುಂದುವರೆದಿದ್ದು, ಕೊರೆಯುವ ಚಳಿಯಿಂದ ಜನರು ನಡುಗುವಂತಾಗಿದೆ.
ಕಳೆದ ರಾತ್ರಿ 10 ವರ್ಷದಲ್ಲೇ ದಾಖಲೆ ಎಂಬಂತೆ 13. 4 ಡಿಗ್ರಿ ಸೆಲ್ಸಿಯಸ್ ಕಡಿಮೆ ಉಷ್ಣಾಂಶ ದಾಖಲಾಗಿದೆ.
ಜನವರಿ ತಿಂಗಳ ಮಧ್ಯಭಾಗದಿಂದಲೇ ಚಳಿಗಾಲ ಅಂತ್ಯವಾಗಿ ಬೇಸಿಗೆ ಸಮೀಪಿಸುವುದು ಸಾಮಾನ್ಯ. ಆದರೆ, ಈ ವರ್ಷ ಅಂತಹ ಬದಲಾವಣೆ ಆಗಿಲ್ಲ. ನಿನ್ನೆ ರಾತ್ರಿ ದಶಕದಲ್ಲೇ ಇದೇ ಮೊದಲ ಬಾರಿಗೆ ಎಂಬಂತೆ ಅತಿ ಹೆಚ್ಚಿನ ಉಷ್ಣಾಂಶ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ 11. 2 ಡಿಗ್ರಿ ಸೆಲ್ಸಿಯಸ್ , ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 11.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಮುಂದಿನ ದಿನಗಳಲ್ಲಿ 14-17 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ.
ಶೀತಗಾಳಿ ಅಂತಾ ಕರೆಯಲು ಸಾಧ್ಯವಿಲ್ಲ
ಹವಾಮಾನ ವೈಫರೀತ್ಯದಿಂದಾಗಿ ಚಳಿಯ ವಾತವಾರಣ ಮುಂದುವರೆದಿದೆ. ಬೆಂಗಳೂರು ಮಾತ್ರವಲ್ಲ ರಾಜ್ಯದೆಲ್ಲೆಡೆ ಇದು ಸಾಮಾನ್ಯವಾದ ಸಂಗತಿಯಾಗಿದೆ ಇದನ್ನು ಶೀತಗಾಳಿ ಅಂತಾ ಕರೆಯಲು ಸಾಧ್ಯವಿಲ್ಲ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ಜಿ. ಎಂ. ಶ್ರೀನಿವಾಸ್ ರೆಡ್ಡಿ ಹೇಳಿದ್ದಾರೆ.
ದಕ್ಷಿಣ ಒಳನಾಡಿನಲ್ಲಿ 5-3ಡಿಗ್ರಿ ಸೆಲ್ಸಿಯಸ್ , ಉತ್ತರ ಒಳನಾಡಿನಲ್ಲಿ 3ರಿಂದ 5 ಡಿಗ್ರಿ ಸೆಲ್ಸಿಯಸ್ ನಿರೀಕ್ಷೆಗಿಂತಲೂ ಕಡಿಮೆ ಉಷ್ಣಾಂಶ ದಾಖಲಾಗಿದೆ. ಕೊಡಗಿನಲ್ಲಿ 10.4 ಡಿಗ್ರಿ ಸೆಲ್ಸಿಯಸ್ ಕಡಿಮೆ ಉಷ್ಠಾಂಶ ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.
Advertisement