ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಮಹೇಶ್ವರಿ ನೇಮಕ ಸಾಧ್ಯತೆ

ನ್ಯಾ.ದಿನೇಶ್ ಮಹೇಶ್ವರಿ ಅವರನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಆದೇಶ ಹೊರಡಿಸಿದ್ದಾರೆ...
ಕರ್ನಾಟಕ ಹೈಕೋರ್ಟ್
ಕರ್ನಾಟಕ ಹೈಕೋರ್ಟ್
ಬೆಂಗಳೂರು: ನ್ಯಾ.ದಿನೇಶ್ ಮಹೇಶ್ವರಿ ಅವರನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಆದೇಶ ಹೊರಡಿಸಿದ್ದಾರೆ. 
ಸುಪ್ರೀಂಕೋರ್ಟ್'ನ ಮೊದಲ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಕೊಲಿಜಿಯಂ ಇತ್ತೀಚೆಗಷ್ಟೇ ನ್ಯಾ.ದಿನೇಶ್ ಮಹೇಶ್ವರಿ ಅವರನ್ನು ಕರ್ನಾಟಕ ಹೈಕೋರ್ಟ್'ಗೆ ವರ್ಗಾಯಿಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿತ್ತು. 
ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಸಮಾಲೋಚನೆ ನಡೆಸಿ ಈ ತೀರ್ಮಾನ ಪ್ರಕಟಿಸಲಾಗಿದೆ ಎಂದು ಕಾನೂನು ಸಚಿವಾಲಯದ ಅಧಿಸೂಚನೆ ತಿಳಿಸಿದೆ. 
ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಪ್ರಸಕ್ತ ಮೇಘಾಲಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು. ಫೆ.20ರೊಳಗೆ ಕರ್ನಾಟಕದ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿ ಹುದ್ದೆ ಸ್ವೀಕರಿಸಬೇಕೆಂದು ರಾಷ್ಟ್ರಪತಿಗಳು ಸೂಚಿಸಿದ್ದಾರೆಂದು ತಿಳಿದುಬಂದಿದೆ. 
ಜ.10ರಂದು ಸಭೆ ಸೇರಿದ್ದ ಸುಪ್ರೀಂಕೋರ್ಟ್'ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಕೊಲಿಜಿಯಂ ನ್ಯಾ.ದಿನೇಶ್ ಮಹೇಶ್ವರಿ ಅವರನ್ನು ಕರ್ನಾಟಕ ಹೈಕೋರ್ಟ್'ಗೆ ವರ್ಗಾಯಿಸುವ ತೀರ್ಮಾನ ಕೈಗೊಂಡಿತ್ತು. 
ರಾಜ್ಯ ಹೈಕೋರ್ಟ್'ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹೆಚ್.ಜಿ. ರಮೇಶ್ ಅವರು, ನ್ಯಾ.ದಿನೇಶ್ ಮಹೇಶ್ವರಿ ಅವರಿಗಿಂತ ಹೆಚ್ಚಿನ ಹಿರಿತನ ಹೊಂದಿದ್ದರೂ ನ್ಯಾ.ರಮೇಶ್ ಈ ಹಿಂದೆ ಮುಖ್ಯ ನ್ಯಾಯಮೂರ್ತಿ ಸ್ಥಾನ ನಿರಾಕರಿಸಿದ್ದ ಹಿನ್ನಲೆಯಲ್ಲಿ ಈ ನೇಮಕ ಶಿಫಾರಸು ಮಾಡಲಾಗಿದೆ ಎಂದು ಕೊಲಿಜಿಯಂ ಹೇಳಿತ್ತು. 
ದಿನೇಶ್ ಮಹೇಶ್ವರ್ ಅವರು ಮೇ.15 1958ರಲ್ಲಿ ಜನಿಸಿದ್ದರು. ಅವರ ತಂದೆ ದಿ.ರಮೇಶ್ ಚಂದ್ರ ಮಹೇಶ್ವರಿ ಅವರು ರಾಜಸ್ತಾನ ರಾಜ್ಯದ ಹೈಕೋರ್ಟ್ ಪ್ರಮುಖ ವಕೀಲರಾಗಿದ್ದರು. ಜೈಪುರದ ಮಹಾರಾಜ ಕಾಲೇಜಿನಲ್ಲಿ ಬಿ.ಎಸ್.ಸಿಯಲ್ಲಿ ಪದವಿ ಪಡೆದ ದಿನೇಶ್ ಅವರು, ನಂತರ 1980ರಲ್ಲಿ ಜೋಧ್ಪುರ ವಿಶ್ವವಿದ್ಯಾಲಯದಿಂದ ಕಾನೂನು ಪದವಿಯನ್ನು ಪಡೆದು ಮಾರ್ಚ್.8 1981ರಂದು ತಮ್ಮ ವಕೀಲ ವೃತ್ತಿಯನ್ನು ಪ್ರಾರಂಭಿಸಿದ್ದರು.  ಮಹೇಶ್ವರಿಯವರು ಪ್ರಮುಖವಾಗಿ ಸಿವಿಲ್ ಮತ್ತು ಸಾಂವಿಧಾನಿಕ ವಿಷಯಗಳಲ್ಲಿ ಅಧ್ಯಯನ ಮಾಡಿದವರಾಗಿದ್ದಾರೆ. 2004ರಲ್ಲಿ ರಾಜಸ್ತಾನ ಹೈಕೋರ್ಟ್'ನಲ್ಲಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ನ್ಯಾ.ದಿನೇಶ್, ಬಳಿಕ 2016ಕ್ಕೆ ಮೇಘಾಲಯದ ಮುಖ್ಯ ನ್ಯಾಯಮೂರ್ತಿಯಾದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com