ಗ್ಯಾಸ್ ಟ್ಯಾಂಕರ್ ಹರಿದು ತುಮಕೂರು ರಸ್ತೆ ಫ್ಲೈಓವರ್ ನಲ್ಲಿ ಬೈಕ್ ಸವಾರ ಸಾವು, ಇಬ್ಬರಿಗೆ ಗಾಯ

ವೇಗವಾಗಿ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 28 ವರ್ಷದ ಗಾರ್ಮೆಂಟ್ಸ್ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ವೇಗವಾಗಿ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 28 ವರ್ಷದ ಗಾರ್ಮೆಂಟ್ಸ್ ಫ್ಯಾಕ್ಟರಿ ನೌಕರ ಮೃತಪಟ್ಟು, ಆತನ ಇಬ್ಬರು ಸ್ನೇಹಿತರು ಗಾಯಗೊಂಡಿರುವ ಘಟನೆ ಪೀಣ್ಯ ಸಮೀಪ ತುಮಕೂರು ಮೇಲ್ಸೇತುವೆಯಲ್ಲಿ ಮೊನ್ನೆ ಶುಕ್ರವಾರ ರಾತ್ರಿ ನಡೆದಿದೆ. ಬೈಕಿನಲ್ಲಿ ಮೂವರು ಇದ್ದು ಯಾರು ಕೂಡ ಹೆಲ್ಮೆಟ್ ಧರಿಸಿರಲಿಲ್ಲ.
ಮೃತ ಯುವಕನನ್ನು ನೆಲಮಂಗಲ ಸಮೀಪ ಅರಸಿನಕುಂಟೆಯ ನಿವಾಸಿ ವೀರೇಶ್ ಎಂದು ಗುರುತಿಸಲಾಗಿದೆ. ಗಾಯಗೊಂಡವರು ಗೊರಗುಂಟೆಪಾಳ್ಯದ ಎನ್.ಗೌಡ ಮತ್ತು ವೀರಣ್ಣ ಆಗಿದ್ದಾರೆ. ಮೂವರು ಕೂಡ ಪೀಣ್ಯದ ಗಾರ್ಮೆಂಟ್ಸ್ ಫ್ಯಾಕ್ಟರಿಯ ನೌಕರರು.
ಮೊನ್ನೆ ಶುಕ್ರವಾರ ರಾತ್ರಿ 11.30ರ ಸುಮಾರಿಗೆ ಗೌಡ ವೀರೇಶ್ ಮತ್ತು ವೀರಣ್ಣ ಅವರನ್ನು ಕರೆದುಕೊಂಡು ವೀರೇಶ್ ಮನೆಗೆ ಹೋಗುತ್ತಿದ್ದರು. ತುಮಕೂರು ರಸ್ತೆಯ ಫ್ಲೈ ಓವರ್ ನಲ್ಲಿ ಹೋಗುತ್ತಿರುವಾಗ ವೇಗವಾಗಿ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ಅವರ ಮೇಲೆ ಹರಿಯಿತು.
ಡಿಕ್ಕಿ ಹೊಡೆದಿದ್ದು ಎಷ್ಟು ರಭಸವಾಗಿತ್ತೆಂದರೆ ಬೈಕ್ 100 ಮೀಟರ್ ಮುಂದೆ ಹೋಗಿ ಬಿದ್ದಿತು. ಟ್ಯಾಂಕರ್ ನ ಚಕ್ರದಡಿಗೆ ಸಿಲುಕಿದ ವೀರೇಶ್ ಸ್ಥಳದಲ್ಲಿಯೇ ಮೃತಪಟ್ಟರು. ಗೌಡ ಮತ್ತು ವೀರಣ್ಣ ಮೇಲ್ಸೇತುವೆಯ ಗೋಡೆಗೆ ಬಿದ್ದರು. ಸ್ಥಳೀಯರು ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರು.
ಈ ಘಟನೆ ನಂತರ ಕೆಲ ಹೊತ್ತು ಫ್ಲೈ ಓವರ್ ನಲ್ಲಿ ಸಂಚಾರದಟ್ಟಣೆಯುಂಟಾಯಿತು. ಪೀಣ್ಯ ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. 
ಅಜಾಗರೂಕತೆ ಚಾಲನೆ ಕಾರಣದಲ್ಲಿ ಟ್ಯಾಂಕರ್ ಚಾಲಕ ಗಣೇಶ್ ನನ್ನು ಪೊಲೀಸರು ಬಂಧಿಸಿದರು. ಬೈಕ್ ಚಾಲಕರು ಮದ್ಯಪಾನ ಮಾಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com