ಮಡಿಕೇರಿ: ಭಾಗಮಂಡಲ ವಲಯದ ಕಾಕಬೇ ಅರಣ್ಯ ಪ್ರದೇಶದಲ್ಲಿ ಜಿಲ್ಲಾ ಪೊಲೀಸ್ ಮತ್ತು ಎಎನ್ ಎಫ್ ತಂಡ ನಕ್ಸಲರಿಗಾಗಿ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿಸಿದೆ, ನಾಪೋಕ್ಲುವಿನ ನಳದಿಯ ಮನೆಯೊಂದಕ್ಕೆ ನಕ್ಸಲರು ಸೋಮವಾರ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಕೂಂಬಿಂಗ್ ಆರಂಭವಾಗಿದೆ.
ಕೊಡಗಿನ ಕೊಯನಾಡುಗೆ ಕಳೆದ 15 ದಿನಗಳ ಹಿಂದೆ ನಕ್ಸಲ್ ತಂಡ ಭೇಟಿ ನೀಡಿತ್ತು, ಹಾಗೂ ದಕ್ಷಿಣ ಕನ್ನಡ ಗಡಿಯ ನಾಪೋಕ್ಲುಗೆ ಕೂಡ ನಕ್ಸಲ್ ತಂಡ ಭೇಟಿ ನೀಡಿತ್ತು. ನಕ್ಸಲ್ ತಂಡ ಕಾಫಿ ಬೆಳೆಗಾರ ಮುತ್ತನ್ನ ಎಸ್ಟೇಟ್ ಮತ್ತು ಬರಹಗಾರ ಪೆಮ್ಮಯ್ಯ ಮನೆಗೆ ಸಂಜೆ 5.30ರ ವೇಳೆಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ.
ತಮ್ಮನ್ನು ನಕ್ಸಲರೆಂದು ಹೇಳಿಕೊಂಡ ತಂಡ ಕುಟುಂಬದ ಸದಸ್ಯರಿಗೆ ಹಂದಿ ಮಾಂಸದ ಅಡುಗೆ ಮಾಡುವಂತೆ ಕೇಳಿದೆ, ಊಟ ಮುಗಿಸಿ ರಾತ್ರಿ 10.30ರ ವೇಳೆಗೆ ಅಲ್ಲಿಂದ ತೆರಳಿದ್ದಾರೆ ಎಂದು ತಿಳಿದು ಬಂದಿದೆ.