ದೀಪಕ್ ರಾವ್ ಕೊಲೆ ಪ್ರಕರಣ: ಕೋಮು ಸಾಮರಸ್ಯ ಕದಡದಂತೆ ಸಿಎಂ ಸಿದ್ದರಾಮಯ್ಯ ಕರೆ

ಮಂಗಳೂರಿನ ಹೊರವಲಯದಲ್ಲಿ ಬುಧವಾರ ನಡೆದಿದ್ದ ಬಜರಂಗ ದಳದ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರಕರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಮಂಗಳೂರಿನ ಹೊರವಲಯದಲ್ಲಿ ಬುಧವಾರ ನಡೆದಿದ್ದ ಬಜರಂಗ ದಳದ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರಕರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ. 
ಪ್ರಕರಣ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ದೀಪಕ್ ರಾವ್ ಹತ್ಯೆ ಪ್ರಕರಣವನ್ನು ತೀವ್ರವಾಗಿ ಖಂಡಿಸುತ್ತೇನೆ. ಕೆಲವರು ಸಮಾಜದಲ್ಲಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದು, ಇಂತಹ ಶಕ್ತಿಗಳಿಂದು ಜನರು ದೂರುವಿರಬೇಕೆಂದು ನಾನು ಈ ಮೂಲಕ ಜನತೆ ಬಳಿ ಮನವಿ ಮಾಡಿಕೊಳ್ಳುತ್ತೇನೆಂದು ಹೇಳಿದ್ದಾರೆ. 
ದೀಪಕ್ ಹತ್ಯೆ ಪ್ರಕರಣವನ್ನು ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ಕೋಮು ಪಕ್ಷವಾಗಿದ್ದು, ದೀಪಕ್ ಹತ್ಯೆ ಪ್ರಕರಣದಿಂದ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ದೀಪಕ್ ರಾವ್ ಕುಟುಂಬಸ್ಥರಿಗೆ ರೂ.10 ಲಕ್ಷ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. 
ದೀಪಕ್ ಹತ್ಯೆಯನ್ನು ಖಂಡಿಸುತ್ತೇನೆ. ತಮ್ಮ ಕುಟುಂಬ ಸದಸ್ಯನನ್ನು ಕಳೆದುಕೊಂಡ ದುಃಖದಲ್ಲಿರುವ ದೀಪಕ್ ಕುಟುಂಸ್ಥರ ಕುರಿತಂತೆ ಸಂತಾಪವನ್ನು ಸೂಚಿಸುತ್ತೇನೆ. ಈ ರೀತಿಯ ಘಟನೆ ನಡೆಯಬಾರದಿದ್ದು. ಎಲ್ಲಾ ಜೀವವೂ ಅಮೂಲ್ಯವಾದದ್ದು. ದೀಪಕ್ ಕುಟುಂಬಸ್ಥರಿಗೆ ರೂ. 10 ಲಕ್ಷ ಪರಿಹಾರವನ್ನು ಘೋಷಣೆ ಮಾಡಿದ್ದೇವೆಂದು ತಿಳಿಸಿದ್ದಾರೆ. 
ಅಲ್ಲದೆ, ಆರೋಪಿಗಳನ್ನು ಶೀಘ್ರಗತಿಯಲ್ಲಿ ಬಂಧಿಸಿರುವ ಮಂಗಳೂರು ನಗರ ಪೊಲೀಸರ ಕಾರ್ಯವನ್ನು ಇದೇ ವೇಳೆ ಸಿದ್ದರಾಮಯ್ಯ ಅವರು ಶ್ಲಾಘಿಸಿದ್ದಾರೆ. 
ಪ್ರಕರಣ ಕುರಿತು ಈಗಾಗಲೇ ಮಂಗಳೂರು ಪೊಲೀಸ್ ಆಯುಕ್ತ ಬಳಿ ಮಾತನಾಡಿದ್ದು, ಪ್ರಕರಣ ಕುರಿತು ನ್ಯಾಯಯುತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡುವಂತೆ ಸೂಚಿಸಿದ್ದೇನೆಂದು ತಿಳಿಸಿದ್ದಾರೆ. 
ಸಿದ್ದು ಸರ್ಕಾರವನ್ನು ತಾಲಿಬಾನ್'ಗೆ ಹೋಲಿಸಿದ ಬಿಜೆಪಿ
ದೀಪಕ್ ಹತ್ಯೆ ಪ್ರಕಱಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತೀವ್ರವಾಗಿ ಕಿಡಿಕಾಡಿರುವ ಬಿಜೆಪಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ತಾಲಿಬಾನ್ ಆಡಳಿತಕ್ಕೆ ಹೋಲಿಕೆ ಮಾಡಿದೆ. 
ಈ ಕುರಿತಂತೆ ಮಾತನಾಡಿರುವ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು, ರಾಜ್ಯದಲ್ಲಿಂದು ಯಾವ ಸರ್ಕಾರ ನಡೆಯುತ್ತಿದೆ? ನಾಗರೀಕ ಸರ್ಕಾರವೇ ಅಥವಾ ತಾಲಿಬಾನ್ ಅಡಳಿತವೇ? ಎಂದು ಪ್ರಶ್ನಿಸಿದ್ದಾರೆ. 
ಹಿಂದೂ ಕಾರ್ಯಕರ್ತರ ಜೀವವನ್ನು ರಕ್ಷಣೆ ಮಾಡಲಾಗದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಮಂತ್ರಿ ರಾಮಲಿಂಗಾ ರೆಡ್ಡಿಯವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕು. ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ. 
ದೀಪಕ್ ರಾವ್ ಸೇರಿ ಈವರೆಗೂ ಒಟ್ಟು 24 ಹಿಂದೂ ಕಾರ್ಯಕರ್ತರು ಹತ್ಯೆಗೀಡಾಗಿದ್ದಾರೆ. ಹಿಂದೂಗಳ ಹತ್ಯೆಯಾಗುತ್ತಿದ್ದರೂ ರಾಜ್ಯ ಸರ್ಕಾರ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಸಮಾಜಘಾತುಕ ಶಕ್ತಿಗಳ ವಿರುದ್ಧ ಸಿದ್ದರಾಮಯ್ಯ ಸರ್ಕಾರ ತಮ್ಮ ರಾಜಕೀಯ ಶಕ್ತಿಯನ್ನು ಪ್ರಯೋಗಿಸಿಲ್ಲ ಎಂದು ತಿಳಿಸಿದ್ದಾರೆ. 
ಹತ್ಯೆ ಹಿಂದೆ ರೈ ಕೈವಾಡ: ಬಿಎಸ್'ವೈ
ದೀಪಕ್ ರಾವ್ ಹತ್ಯೆ ಹಿಂದೆ ಅರಣ್ಯ ಸಚಿವ ರಾಮನಾಥ ರೈ ಕವಾಡವಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಆರೋಪಿಸಿದ್ದಾರೆ. 
ಹತ್ಯೆ ಹಿಂದೆ ರಾಮನಾಥ ರೈ ಅವರ ಕೈವಾಡವಿದ್ದು, ಮಂಗಳೂರು ನಗರದಲ್ಲಿಯೇ ಇಂತಹ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com