ಮೂವರು ನಕ್ಸಲರಿಗಾಗಿ ದಕ್ಷಿಣ ಕನ್ನಡದಲ್ಲಿ ವ್ಯಾಪಕ ಶೋಧ!

ಮೂವರು ನಕ್ಸಲರ ಆಗಮನದ ಮಾಹಿತಿ ಪಡೆದಿರುವ ನಕ್ಸಲ್ ನಿಗ್ರಹ ಪಡೆ ಸಿಬ್ಬಂದಿ ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಕೂಂಬಿಂಗ್ ಕಾರ್ಯಾಚರಣೆ (ಸಂಗ್ರಹ ಚಿತ್ರ)
ಕೂಂಬಿಂಗ್ ಕಾರ್ಯಾಚರಣೆ (ಸಂಗ್ರಹ ಚಿತ್ರ)
ದಕ್ಷಿಣ ಕನ್ನಡ: ಮೂವರು ನಕ್ಸಲರ ಆಗಮನದ ಮಾಹಿತಿ ಪಡೆದಿರುವ ನಕ್ಸಲ್ ನಿಗ್ರಹ ಪಡೆ ಸಿಬ್ಬಂದಿ ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. 
ದಕ್ಷಿಣ ಕನ್ನಡ ಜಿಲ್ಲೆಯ ಶಿರಾಡಿ, ಅಡ್ಡ ಹೊಳೆ, ಬೆಳ್ತಂಗಡಿ, ಸುಳ್ಯ ಮುಂತಾದ ಅರಣ್ಯ ಪ್ರದೇಶಗಳಲ್ಲಿ ನಕ್ಸಲ್ ನಿಗ್ರಹ ಪಡೆ 8 ತಂಡಗಳಾಗಿ ವಿಭಜನೆಗೊಂಡು ಕಾರ್ಯಾಚರಣೆ ನಡೆಸುತ್ತಿದೆ. ಈ ನಕ್ಸಲ್ ತಂಡಕ್ಕೆ ಲತಾ ಎಂಬಾಕೆ  ಕಮಾಂಡರ್ ಆಗಿದ್ದು, ಇನ್ನಿಬ್ಬರು ಪುರುಷರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೂಂಬಿಂಗ್ ಕಾರ್ಯಾಚರಣೆ ಹಿನ್ನಲೆಯಲ್ಲಿ ಈ ಮೂವರು ನಕ್ಸಲರ ತಂಡ ಕೇರಳಕ್ಕೆ ಪಲಾಯನ ಮಾಡಿರಬಹುದು ಎಂದು ನಕ್ಸಲ್ ನಿಗ್ರಹ ಪಡೆ  ಶಂಕಿಸಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಇಂದೂ ಕೂಡಾ ಕೂಂಬಿಂಗ್ ನಡೆಸಲಾಗುತ್ತಿದೆ.
ಸ್ಥಳೀಯರು ನೀಡಿರುವ ಮಾಹಿತಿಯಂತೆ ಮಿತ್ತಮಜಲಿಗೆ ಬಂದಿದ್ದವರು ನಕ್ಸಲ್‌ ರಾಜೇಶ್‌, ಲತಾ ಮತ್ತು ಪುರುಷೋತ್ತಮ ಎಂಬುದನ್ನು ನಕ್ಸಲ್ ನಿಗ್ರಹ ಪಡೆ ಖಚಿತಪಡಿಸಿ ಕೊಂಡಿದೆ. ಅಂತೆಯೇ ಎಎನ್‌ಎಫ್‌ನ 2 ತಂಡಗಳು  ಕಾಡಿನಲ್ಲಿ ಕೂಂಬಿಂಗ್ ಆರಂಭಿಸಿವೆ.
ನಿನ್ನೆಯಷ್ಟೇ ಹೆಬ್ರಿ ಎಎನ್‌ಎಫ್‌ ಇನ್‌ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ ಹಾಗೂ ಎಸ್‌ಐ ಅಮರೇಶ್ ನೇತೃತ್ವದಲ್ಲಿ 24 ಸಿಬ್ಬಂದಿಯನ್ನು ಒಳಗೊಂಡ ಎರಡು ಪ್ರತ್ಯೇಕ ತಂಡಗಳು ಮಧ್ಯಾಹ್ನ 2.30ರಿಂದ ಮಿತ್ತಮಜಲಿನಿಂದ ಕೂಂಬಿಂಗ್‌  ಆರಂಭಿಸಿದ್ದವು. ಪುತ್ತೂರು ಡಿವೈಎಸ್‌ಪಿ ಶ್ರೀನಿವಾಸ್ ಅವರಿಂದ ಮಾಹಿತಿ ಪಡೆದ ತಿಮ್ಮಪ್ಪ ನಾಯ್ಕ ನೇತೃತ್ವದ ತಂಡ ಶಿಶಿಲ ರಕ್ಷಿತ ಅರಣ್ಯ ಪ್ರದೇಶದೊಳಗೆ ಪ್ರವೇಶ ಮಾಡಿತು. ಅಮರೇಶ್ ನೇತೃತ್ವದ ತಂಡ ಶಿರಾಡಿ  ರಕ್ಷಿತಾರಣ್ಯದ ಮೂಲಕ ಕಬ್ಬಿನಾಲೆ ಕಡೆಗೆ ನಕ್ಸಲರ ಬೇಟೆಗೆ ಕಾರ್ಯಾಚರಣೆ ಆರಂಭಿಸಿತು.
ಈ ವೇಳೆ ನಕ್ಸಲ್ ನಿಗ್ರಹ ಪಡೆ ಸಿಬ್ಬಂದಿ ಇಬ್ಬರು ನಕ್ಸಲರ ಭಾವಚಿತ್ರಗಳನ್ನು ಮನೆಯವರಿಗೆ ತೋರಿಸಿದದ್ದು, ಈ ವೇಳೆ ಇದನ್ನು ನೋಡಿದ ಅವರು, ರಾಜೇಶ್ ಹಾಗೂ ಲತಾ ಎಂದು ಹೆಸರು ಹೇಳಿಕೊಂಡವರು ಇವರೇ ಎಂಬುದನ್ನು  ಖಚಿತಪಡಿಸಿದರು. ಮಿತ್ತಮಜಲಿಗೆ 3 ಮಂದಿ ನಕ್ಸಲರು ಬಂದಿದ್ದುದನ್ನು ದೃಢಪಡಿಸಲಾಗಿದೆ. ಮಿತ್ತಮಜಲು ಪರಿಸರದಲ್ಲಿ ಒಟ್ಟು 40 ಮನೆಗಳಿವೆ. ಆದರೆ ಈ 3 ಮನೆಗಳು ಅರಣ್ಯದ ಅಂಚಿನಲ್ಲಿದೆ. ಸೋಮವಾರ ರಾತ್ರಿ 3 ಮನೆಗಳಿಗೆ  ನಕ್ಸಲ್ ತಂಡ ಭೇಟಿ ನೀಡಿತ್ತು. ಆದರೆ ಈ ವಿಷಯ ಸೋಮವಾರ ಸಂಜೆಯ ತನಕವೂ ಗೌಪ್ಯವಾಗಿತ್ತು. ಸೋಮವಾರ ಸಂಜೆಯ ಹೊತ್ತಿಗೆ ಶಾಲಾ ಮಕ್ಕಳ ಮೂಲಕ ಊರಿನಲ್ಲಿ ಸುದ್ದಿ ಹರಡಿ ಪೊಲೀಸರಿಗೆ ಮಾಹಿತಿ ರವಾನೆ ಆಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com