ವೇಣುಗೋಪಾಲ್ ಎದುರೇ ಮಂತ್ರಿಗಳ ಬಗ್ಗೆ ಪರಮೇಶ್ವರ್ ಗರಂ

ರಾಜ್ಯ ಸರ್ಕಾರ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಪಕ್ಷಕ್ಕೆ ಮಾಹಿತಿ ನೀಡದೆಯೇ ಉಪೇಕ್ಷೆ ಮಾಡುತ್ತಿರುವ ರಾಜ್ಯ ಸಚಿವರ ಧೋರಣೆ ವಿರುದ್ಧ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ಸಮ್ಮುಖದಲ್ಲಿಯೇ ಕೆಪಿಸಿಸಿ...
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್
ಬೆಂಗಳೂರು: ರಾಜ್ಯ ಸರ್ಕಾರ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಪಕ್ಷಕ್ಕೆ ಮಾಹಿತಿ ನೀಡದೆಯೇ ಉಪೇಕ್ಷೆ ಮಾಡುತ್ತಿರುವ ರಾಜ್ಯ ಸಚಿವರ ಧೋರಣೆ ವಿರುದ್ಧ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರ ಸಮ್ಮುಖದಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು ಅಸಮಾಧಾನವನ್ನು ಹೊರಹಾಕಿದ್ದಾರೆಂದು ಮಂಗಳವಾರ ಮೂಲಗಳು ತಿಳಿಸಿವೆ. 
ಕೆಪಿಸಿಸಿ ಕಚೇರಿಯಲ್ಲಿ ನಿನ್ನೆ ನಡೆದ ನೂತನ ಪದಾಧಿಕಾರಿಗಳ ಸಭೆ ಹಾಗೂ ಸಂಜೆ ಕುಮಾರಕೃಪಾದಲ್ಲಿ ನಡೆದ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಸಿದ್ಧತಾ ಸಭೆಯಲ್ಲಿ ಪರಮೇಶ್ವರ್ ಅವರು ಪರೋಕ್ಷವಾಗಿ ಸರ್ಕಾರದ ಸಚಿವರ ಕಾರ್ಯ ವೈಖರಿ ಹಾಗೂ ಪಕ್ಷವನ್ನು ನಿರ್ಲಕ್ಷಿಸುತ್ತಿರುವ ಧೋರಣೆ ಬಗ್ಗೆ ಬೇಸರ ಹೊರಹಾಕಿದ್ದಾರೆಂದು ಹೇಳಲಾಗುತ್ತಿದೆ. 
ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಂಬಂಧ ನಿನ್ನೆ ಸಭೆಯನ್ನು ಆಯೋಜಿಸಲಾಗಿತ್ತು. ಸಭೆಯಲ್ಲಿ ಭಾಗವಹಿಸುವಂತೆ 30 ಸಚಿವರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ರೋಷನ್ ಬೇಗ್, ಆರ್.ವಿ.ದೇಶಪಾಂಡೆ, ಹೆಚ್ ಆಂಜನೇಯ, ಹೆಚ್.ಎಂ. ರೇವಣ್ಣ, ಹೆಚ್.ಕೆ. ಪಾಟೀಲ್ ಈ ಐವರು ಮಾತ್ರ ಸಭೆಯಲ್ಲಿ ಹಾಜರಿದ್ದರು. ಸಚಿವರ ಅನುಸ್ಥಿತಿಗೆ ಪರಮೇಶ್ವರ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ. 
ರಾಜ್ಯ ಸರ್ಕಾರ ಯಾವುದೇ ಕಾರ್ಯಕ್ರಮ ರೂಪಿಸಿದರೂ ಅದನ್ನು ಅಂತಿಮವಾಗಿ ಮತದಾರನಿಗೆ ತಲುಪಿಸುವುದು ಪಕ್ಷ. ಆದರೆ, ಸರ್ಕಾರದ ಬಹುತೇಕ ಸಚಿವರು ಪಕ್ಷವನ್ನು ನಿರ್ಲಕ್ಷ್ಯದಿಂದ ನೋಡುತ್ತಿದ್ದಾರೆ. ಜಿಲ್ಲಾ ಮಟ್ಟದಲ್ಲಂತೂ ಈ ನಿರ್ಲಕ್ಷ್ಯ ತೀವ್ರವಾಗಿದೆ. ಜಿಲ್ಲಾ ಮಟ್ಟದ ಪದಾಧಿಕಾರಿಗಳು ಮತ್ತು ಜಿಲ್ಲಾ ಘಟಕ ಉಸ್ತುವಾರಿ ಸಚಿವರು ಹಾಗೂ ಶಾಸಕರು ಕ್ಯಾರೆ ಎನ್ನುತ್ತಿಲ್ಲ. ಬಹುತೇಕ ಸಚಿವರನ್ನು ಸಂಪರ್ಕಿಸುವುದೇ ಕಷ್ಟವಾಗಿ ಹೋಗಿದೆ. ದೂರವಾಣಿ ಕರೆ ಮಾಡಿದರೆ, ಕೇವಲ ಅವರ ಪಿಎಗಳು ಉತ್ತರಿಸುತ್ತಾರೆ. ಹೀಗದರೆ ಪಕ್ಷ ಕಟ್ಟುವ ಕೆಲಸ ಹೇಗೆ ಮಾಡುವುದು ಎಂದು ಪ್ರಶ್ನಿಸಿದ್ದಾರೆನ್ನಲಾಗಿದೆ. 
ಇದಕ್ಕೆ ಪ್ರತಿಕ್ರಿಯೆ ನೀಡುರುವ ಉಸ್ತುವಾರಿ ವೇಣಿಗೋಪಾಲ್ ಅವರು, ಸಚಿವರು ಹಾಗೂ ಶಾಸಕರು ಪಕ್ಷದ ಕಾರ್ಯಗಳಿಗೆ ಸ್ಪಂದಿಸುವುದಿಲ್ಲ ಎಂಬುದು ಸಹಿಸಲು ಸಾಧ್ಯವಿಲ್ಲ. ಸಮಯದ ಕೊರತೆ ಇದ್ದರೆ ಸಚಿವರು ಹಾಗೂ ಶಾಸಕರು ಪಕ್ಷದ ಕಾರ್ಯಗಳ ಉಸ್ತುವಾರಿ ನೋಡಿಕೊಳ್ಳಲು ಪ್ರತ್ಯೇಕ ಆಪ್ತ ಸಹಾಯಕರನ್ನು ನೇಮ ಮಾಡಿಕೊಳ್ಳಲಿ ಎಂದು ತಿಳಿಸಿದರು, ಪಕ್ಷದ ಕಾರ್ಯಕ್ರಮಗಳಿಗೆ ಸತತವಾಗಿ ಗೈರು ಹಾಜರಾಗುವ ಸಚಿವರ ಧೋರಣೆಯನ್ನು ಇದೇ ವೇಳೆ ಖಂಡಿಸಿದ್ದಾರೆ. 
ಬಿಜೆಪಿ ವಿರುದ್ದ ಕಿಡಿಕಾರಿದ ಸಿದ್ದರಾಮಯ್ಯ
ಕೆಪಿಸಿಸಿ ಕಚೇರಿಯಲ್ಲಿ ನಿನ್ನೆ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ತೀವ್ರವಾಗಿ ಕಿಡಿಕಾರಿದರು. 
ಬಿಜೆಪಿ ಬೋಧನೆ ಮಾಡುತ್ತಿರುವುದು ಹಿಂದುತ್ವವಲ್ಲ. ಹಿಂದುತ್ವದ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದೆ. ಸರ್ಕಾರ ಜಾರಿಗೆ ತಂದಿರುವ ನೀತಿಗಳ ಬಗ್ಗೆ ಪಕ್ಷದ ನಾಯಕರು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ಹೇಳಿದ್ದಾರೆ. 
ರಾಜ್ಯದ 224 ಕ್ಷೇತ್ರಗಳಲ್ಲೂ ಬೂತ್ ಕಮಿಟಿ ರಚಿಸುವ ಅಗತ್ಯವಿದ್ದು, ಇದಕ್ಕೆ ಹೆಚ್ಚುವರಿಯಾಗಿ 50 ಬೂತ್ ಗಳನ್ನು ರಚಿಸುವಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಬೂತ್ ಕಮಿತಿಗಳು ಇನ್ನೂ ನೇಮಕವಾಗಿಬೇಕಿದೆ. ಈ ದಿಸೆಯಲ್ಲಿ ಹೆಚ್ಚಿನ ಗಮನ ನೀಡಬೇಕು. ಬೂತ್ ಸಮಿತಿ ಬಳಿ ಮತದಾರರ ಪಟ್ಟಿ ಇರಬೇಕು. ಮತದಾರರ ಪಟ್ಟಿಯಿಂದ ನಮ್ಮವರು ಬಿಟ್ಟುಹೋಗಿದ್ದರೆ ಸೇರ್ಪಡೆಗೊಳಿಸಬೇಕು ಎಂದಿದ್ದಾರೆ. 
ಪಕ್ಷದ ಕೆಲ ಮುಖಂಡರು ಚುನಾವಣೆಗೂ ಮುನ್ನವೆ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ.ದೇವೇಗೌಡ ಅವರ ಸಖ್ಯಕ್ಕೆ ಪ್ರಯತ್ನಿಸುತ್ತಿರುವುದು ಗಮನಕ್ಕೆ ಬಂದಿದೆ. ಇಂತಹ ಬೆಳವಳಿಗೆಗಳು ಮತದಾರರಿಗೆ ಕೆಟ್ಟ ಸಂದೇಶವನ್ನು ರವಾನಿಸಲಿದ್ದು, ಪಕ್ಷದ ವರ್ಚಸ್ಸಿಗೆ ಧಕ್ಕೆಯುಂಟಾಗುತ್ತದೆ. ಏಕಾಂಗಿಯಾಗಿಯೇ ಚುನಾವಣೆ ಎದುರಿಸಲು ಪಕ್ಷ ತಯಾರಿದೆ. ಹೀಗಿರುವಾಗ ಕಾರ್ಯಕರ್ತರು ಮುಖಂಡರು ಪಕ್ಷದ ಬಲವರ್ಧನೆಗೆ ಶ್ರಮಿಸಬೇಕೇ ಹೊರತು, ಇತರ ವಿಷಯಗಳಿಗೆ ಗಮನ ಕೊಡಬಾರದು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com