ಹಣ ಕಳೆದುಕೊಂಡಿರುವ ಬಗ್ಗೆ ಈಗ ಸಿಐಡಿಗೆ ದೂರು ನೀಡಿದ್ದು, ಸಿಐಡಿ ಅಧಿಕಾರಿಗಳು ಇನ್ನಷ್ಟೇ ತನಿಖೆ ನಡೆಸಬೇಕಿದೆ. ತನ್ನದೇ ಸ್ವಂತ ಉದ್ಯಮ ನಡೆಸುತ್ತಿರುವ ಉಡುಪಿ ಮೂಲದ ಉದ್ಯಮಿಗೆ 2017 ರ ಆಗಸ್ಟ್ ನಲ್ಲಿ ಫೇಸ್ ಬುಕ್ ಮೂಲಕ ಸೋಫಿಯಾ ಎಂಬ ಮಹಿಳೆ ಪರಿಚಯವಾಗಿ ತನ್ನನ್ನು ಬ್ರಿಟನ್ ನ ಉದ್ಯಮಿ ಎಂದು ಪರಿಚಯಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಇಬ್ಬರೂ ಸಹ ಉದ್ಯಮದ ವಿಷಯವಾಗಿ ಚರ್ಚಿಸುತ್ತಿದ್ದರು, ಕೆಲ ದಿನಗಳ ನಂತರ ತನ್ನ ಉದ್ಯಮದಿಂದ ಬಂದ ಲಾಭವನ್ನು ಭಾರತದ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಬೇಕೆಂದು ಸೋಫಿಯಾ ಉಡುಪಿ ಉದ್ಯಮಿಗೆ ಹೇಳಿದ್ದರು. ಅಷ್ಟೇ ಅಲ್ಲದೇ ಆ ಉದ್ಯಮವನ್ನು ನೋಡಿಕೊಳ್ಳುವಂತೆ ಆಹ್ವಾನ ನೀಡಿ, ಹೂಡಿಕೆ ಮಾಡಲು ತನ್ನ ಪ್ರತಿನಿಧಿಯನ್ನು 100 ಮಿಲಿಯನ್ ಪೌಂಡ್ ಗಳೊಂದಿಗೆ ಭಾರತಕ್ಕೆ ಕಳಿಸಿದ್ದಾಗಿ ತಿಳಿಸಿದ್ದಾರೆ. ಮೂಲತಃ ಸಿವಿಲ್ ಇಂಜಿನಿಯರ್ ಆಗಿದ್ದ ಉದ್ಯಮಿ ಬ್ರಿಟನ್ ಮಹಿಳೆಯ ಆಫರ್ ಬಲೆಗೆ ಬಿದ್ದಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ಬ್ರಿಟನ್ ಮಹಿಳೆಯ ಪ್ರತಿನಿಧಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ಉಡುಪಿ ಉದ್ಯಮಿಗೆ ಕರೆ ಮಾಡಿ ತನ್ನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ಅವರಿಗೆ ವಿವಿಧ ಕಾರಣಗಳಿಂದಾಗಿ ಹಣಾ ಪಾವತಿ ಮಾಡಬೇಕು ಎಂದು ಉದ್ಯಮಿಯಿಂದ 11 ಕಂತುಗಳಲ್ಲಿ ಒಟ್ಟು 81.44 ಲಕ್ಷ ರೂಪಾಯಿ ಪಡೆದಿದ್ದಾರೆ. ನಂತರ ಉಡುಪಿ ಉದ್ಯಮಿಗೆ ಇದು ವಂಚನೆ ಎಂದು ತಿಳಿದಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ.