ಮಹದಾಯಿ ನೀರಿಗಾಗಿ ಕರ್ನಾಟಕ ಬಂದ್: ರಾಜ್ಯಾದ್ಯಂತ ಜನಜೀವನ ಅಸ್ತವ್ಯಸ್ತ

ಮಹದಾಯಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕೆಂದು ....
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬಿಕೋ ಎನ್ನುತ್ತಿರುವ ರಸ್ತೆಗಳು(ಪಿಟಿಐ ಫೋಟೋ)
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬಿಕೋ ಎನ್ನುತ್ತಿರುವ ರಸ್ತೆಗಳು(ಪಿಟಿಐ ಫೋಟೋ)
Updated on
ಬೆಂಗಳೂರು: ಮಹದಾಯಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿ ವಿವಿಧ ಒಕ್ಕೂಟಗಳು ಗುರುವಾರ ಕರೆ ನೀಡಿರುವ ಕರ್ನಾಟಕ ಬಂದ್​ಬಹುತೇಕ ಯಶಸ್ವಿಯಾಗುವ ಲಕ್ಷಣಗಳು ಕಂಡುಬರುತ್ತಿದೆ. 
ದಶಕದಷ್ಟು ಹಳೆಯ ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವಣ ಉತ್ತರ ಕರ್ನಾಟಕ ಭಾಗದ ಮಹದಾಯಿ ನದಿ ವಿವಾದವನ್ನು ಶೀಘ್ರವಾಗಿ ಬಗೆಹರಿಸಬೇಕೆಂದು, ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕೆಂದು ಕನ್ನಡಪರ ಸಂಘಟನೆಗಳು ಒತ್ತಾಯಿಸುತ್ತಿವೆ.

ಇಂದು ರಾಜ್ಯದ ಬಹುತೇಕ ಸರ್ಕಾರಿ ಶಾಲೆಗಳು ಕಾರ್ಯನಿರ್ವಹಿಸುತ್ತಿಲ್ಲ. ಆದರೆ ಸರ್ಕಾರಿ ಶಾಲೆಗಳನ್ನು ನಡೆಸುವ ಬಗ್ಗೆ ಆಯಾ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಪರಿಸ್ಥಿತಿಯನ್ನು ನೋಡಿಕೊಂಡು ಜಿಲ್ಲಾಧಿಕಾರಿಗಳು ಸೂಚನೆ ನೀಡಲಿದ್ದಾರೆ. 
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನೆಯ ಬಿಸಿ ಬೆಳಗ್ಗೆಯಿಂದಲೇ ತಾರಕಕ್ಕೇರುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸುತ್ತಿವೆ. ನಗರದ ಕೇಂದ್ರಭಾಗ ಮೆಜೆಸ್ಟಿಕ್ ನಲ್ಲಿ ಬಂದ್ ಬಿಸಿ ಜೋರಾಗಿದೆ. 
ಪ್ರತಿಭಟನಾಕಾರರು ರಸ್ತೆಗಿಳಿಯುವ ವಾಹನಗಳನ್ನು ಸಂಚರಿಸಲು ಬಿಡುತ್ತಿಲ್ಲ. ರಾಜ್ಯದ ಉತ್ತರ ಕರ್ನಾಟಕ ಭಾಗದ ಜನತೆಗೆ ಮಹದಾಯಿ ನೀರಿನ ವಿಚಾರದಲ್ಲಿ ಅನ್ಯಾಯವಾಗುತ್ತಿದ್ದು, ನ್ಯಾಯ ಸಿಗಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.
ಚೆನ್ನೈ ಎಕ್ಸ್ ಪ್ರೆಸ್ ರೈಲನ್ನು ತಡೆದಿದ್ದಾರೆ. ಮೆಜೆಸ್ಟಿಕ್​ನಲ್ಲಿ ಬಸ್​ಗಳಿಲ್ಲದೆ ಪ್ರಯಾಣಿಕರು ಪರದಾಟ ನಡೆಸುತ್ತಿದ್ದಾರೆ. ಇತ್ತ ಕರೆದ ಕಡೆ ಬರಲು ಆಟೋ ಚಾಲಕರು ಕೂಡ ಹಿಂದೇಟು ಹಾಕುತ್ತಿದ್ದು, ಇದೇ ಸುಸಂದರ್ಭ ಎಂದುಕೊಂಡು ಆಟೋ ಚಾಲಕರು ದುಪ್ಪಟ್ಟು ದರ ಕೇಳುತ್ತಿದ್ದಾರೆ. ಕೆ.ಆರ್.ಮಾರ್ಕೆಟ್​ನಲ್ಲಿ ಎಂದಿನಂತೆ ವಹಿವಾಟು ನಡೆಯುತ್ತಿದೆ.
ಧಾರವಾಡದಲ್ಲಿ ಬೆಳ್ಳಂಬೆಳಗ್ಗೆಯೇ ಬೀದಿಗಿಳಿದಿರುವ ಕರ್ನಾಟಕ ನವ ನಿರ್ಮಾಣ ‌ಸೇನೆ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲಾಧ್ಯಕ್ಷ ಗಿರೀಶ್ ಪೂಜಾರ ನೇತೃತ್ವದಲ್ಲಿ ಧಾರವಾಡ- ಗೋವಾ ರಾಷ್ಟ್ರೀಯಾ ಮುಖ್ಯರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆಳ್ನಾವರ ಟೋಲ್ ಬಳಿ ರಸ್ತೆ ಬಂದ್ ಮಾಡಿ ಗೋವಾಗೆ ತೆರಳುವ ವಾಹನಗಳಿಗೆ ಕಾರ್ಯಕರ್ತರು ತಡೆ ಹಾಕುತ್ತಿದ್ದಾರೆ. 
ಹುಬ್ಬಳ್ಳಿಯಲ್ಲೂ ಪ್ರತಿಭಟನೆ ಶುರುವಾಗಿದ್ದು, ನಾರಾಯಣ ಗೌಡ ಬಣದ ಕರವೇ ಕಾರ್ಯಕರ್ತರು ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಕಾರ್ಯಕರ್ತರನ್ನು ಪೊಲೀಸರು ತಡೆದರು. ರೈಲು ನಿಲ್ದಾಣದ ಎದುರು ಮಲಗಿ ನೀರಿಗಾಗಿ ಆಗ್ರಹಿಸಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.  ಕಳಸಾ-ಬಂಡೂರಿ ಹೋರಾಟದ ಕೇಂದ್ರ ಸ್ಥಾನವಾಗಿರುವ ಗದಗಿನ ನರಗುಂದದಲ್ಲೂ ಪ್ರತಿಭಟನೆ ಬಿಸಿ ಹೆಚ್ಚಾಗಿದೆ. ಮುಂಜಾನೆಯೇ ಪ್ರತಿಭಟನಾಕಾರರು ವಿಜಯಪುರ-ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com