ಗೌರಿ ಲಂಕೇಶ್ ಹತ್ಯೆ: ಸಿಬಿಐ ತನಿಖೆ ಕೋರಿ ಹೈಕೋರ್ಟ್ ಮೊರೆ ಹೋಗಲು ಇಂದ್ರಜಿತ್ ಲಂಕೇಶ್ ನಿರ್ಧಾರ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಶೇಷ ತನಿಖಾ ತಂಡದ(ಎಸ್ಐಟಿ) ತನಿಖೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವ ಅವರ ಸೋದರ...
ಇಂದ್ರಜಿತ್ ಲಂಕೇಶ್ ಮತ್ತು ತಾಯಿ ಇಂದಿರಾ ಲಂಕೇಶ್
ಇಂದ್ರಜಿತ್ ಲಂಕೇಶ್ ಮತ್ತು ತಾಯಿ ಇಂದಿರಾ ಲಂಕೇಶ್
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ವಿಶೇಷ ತನಿಖಾ ತಂಡದ(ಎಸ್ಐಟಿ) ತನಿಖೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವ ಅವರ ಸೋದರ ಇಂದ್ರಜಿತ್ ಲಂಕೇಶ್, ಸಿಬಿಐ ತನಿಖೆಗೆ ಒತ್ತಾಯಿಸಿ ಹೈಕೋರ್ಟ್ ಗೆ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
ಇಂದು ಗೌರಿ ಲಂಕೇಶ್ ಹುಟ್ಟುಹಬ್ಬದ ಸಂದರ್ಭದಲ್ಲಿ ಬೆಂಗಳೂರಿನ ಚಾಮರಾಜಪೇಟೆಯ ರುದ್ರಭೂಮಿ ಸಮೀಪ ಮೋಂಬತ್ತಿ ಹಚ್ಚಿ ಮಾತನಾಡಿದ ಇಂದ್ರಜಿತ್ ಲಂಕೇಶ್, ವಿಶೇಷ ತನಿಖಾ ತಂಡದ ಮೇಲಿನ ರಾಜಕೀಯ ಒತ್ತಡದಿಂದಾಗಿ ತನಿಖೆ ಕುಂಠಿತವಾಗುತ್ತಿದೆ.
ಗೌರಿಯವರ ಹತ್ಯೆಯಾಗಿ 5 ತಿಂಗಳುಗಳು ಕಳೆದಿವೆ. ತನಿಖಾ ತಂಡಕ್ಕೆ ನಾವು ಸಂಪೂರ್ಣ ಸಹಕಾರ ನೀಡುತ್ತಿದ್ದೇವೆ. ಆದರೆ ರಾಜ್ಯ ಸರ್ಕಾರದ ಒತ್ತಡದಿಂದಾಗಿ ವಿಶೇಷ ತನಿಖಾ ತಂಡ ಏಕಮುಖವಾಗಿ ತನಿಖೆ ನಡೆಸುತ್ತಿದೆ ಎಂದು ಅನಿಸುತ್ತಿದೆ. ಇಂದು ನಮ್ಮ ವಕೀಲರ ಜೊತೆ ಮಾತುಕತೆ ನಡೆಸಿ ಹೈಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
ಎಸ್ಐಟಿ ಬಿಡುಗಡೆ ಮಾಡಿರುವ ಗೌರಿ ಹಂತಕರ ರೇಖಾಚಿತ್ರದ ಬಗ್ಗೆ ಮಾತನಾಡಿದ ಇಂದ್ರಜಿತ್ ಲಂಕೇಶ್, ಸಿಸಿಟಿವಿ ಕ್ಯಾಮರಾದಲ್ಲಿ ಹಂತಕರು ಹೆಲ್ಮೆಟ್ ಧರಿಸಿ ಬಂದು ಹತ್ಯೆ ಮಾಡಿದ್ದರು ಎಂದು ದಾಖಲಾಗಿರುವಾಗ ಎಸ್ ಐಟಿ ತಂಡ ಬಿಡುಗಡೆ ಮಾಡಿರುವ ರೇಖಾಚಿತ್ರದಲ್ಲಿ ಹಂತಕ ಹಣೆಯಲ್ಲಿ ಕುಂಕುಮ ಧರಿಸಿರುತ್ತಾರೆ. ಆಗಲೇ ನಾನು ಎಸ್ ಐಟಿ ತನಿಖೆ ಮೇಲೆ ನಂಬಿಕೆ ಕಳೆದುಕೊಂಡೆ ಎಂದು ಹೇಳಿದರು.
ಗೌರಿ ಹತ್ಯೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರಿಟನ್ ಮತ್ತು ಅಮೆರಿಕಾ ಸಂಸತ್ತುಗಳಲ್ಲಿ ಕೂಡ ಚರ್ಚಿಸಲಾಯಿತು. ಸಿಬಿಐ ತನಿಖೆ ಕೈಗೆತ್ತಿಕೊಳ್ಳುವ ಅಗತ್ಯವಿದೆ ಎಂದು ಇಂದ್ರಜಿತ್ ಲಂಕೇಶ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com