ಬೆಂಗಳೂರು: ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗಿದ್ದು ಹಲವು ಜಲಾಶಯಗಳು ತುಂಬಿ ಹರಿಯುತ್ತಿದ್ದು, ಜಲಾನಯನ ಪ್ರದೇಶಗಳ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.ಕಾವೇರಿ, ತುಂಗಭದ್ರಾ, ಮತ್ತು ಕೃಷ್ಣಾ ನದಿಗಳು ಮೈದುಂಬಿ ಹರಿಯುತ್ತಿವೆ,
ಮಾನ್ಸೂನ್ ಮಳೆ ಆರಂಭದ ಮೊದಲ ತಿಂಗಳಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಜಲಾಶಯಗಳು ತುಂಬಿರುವುದರಿಂದ ಈ ಬಾರಿ ಕುಡಿಯುವ ನೀರು ಮತ್ತು ಖಾರಿಫ್ ಬೆಳೆಗೆಳಿಗೆ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ಜಿ.ಎಸ್ ಶ್ರೀನಿವಾಸ ರೆಡ್ಡಿ ಹೇಳಿದ್ದಾರೆ.
ಕಳೆದ 10 ವರ್ಷಗಳಿಗೆ ಹೋಲಿಸಿದರೇ ಈ ವರ್ಷ ಕಾವೇರಿ ಜಲಾನಯನ ಪ್ರದೇಶದಲ್ಲಿ ಜಲಾಶಯಗಳ ಮಟ್ಟ ಉತ್ತಮವಾಗಿದೆ ಎಂದು ಹೇಳಿದ್ದಾರೆ.
ಕಬಿನಿ ಜಲಾಶಯ 17 ಟಿಎಂಸಿ ಸಂಗ್ರಹ ಸಾಮರ್ಥ್ಯವಿದ್ದು, ಈ ಬಾರಿ ಹೆಚ್ಚಿನ ಮಳೆಯಿಂದಾಗಿ ಜಲಾಶಯ ಗರಿಷ್ಟ ಮಟ್ಟ ತಲುಪಿದೆ, ಕಳೆದ ವರ್ಷ ಜೂನ್ ತಿಂಗಳಲ್ಲಿ ಕಬಿನಿ ಜಲಾಶಯದಲ್ಲಿ ಕೇವಲ 4 ಟಿಎಂಸಿ ನೀರಿತ್ತು.
ಇನ್ನೂ ಕೆಆರ್ ಎಸ್ ಜಲಾಶಯ ನೀರಿನ ಸಂಗ್ರಹ ಮಟ್ಟ 45 ಟಿಎಂಸಿ ಇದ್ದುಈಗಾಗಲೇ 25 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಜಲಾಶಯದಲ್ಲಿ ಆರು ಟಿಎಂಸಿ ನೀರಿತ್ತು.
ಬಳ್ಳಾರಿ ಜಿಲ್ಲೆಯಲ್ಲಿರುವ ತುಂಗಭದ್ರಾ ಜಲಾಶಯ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 101 ಟಿಎಂಸಿ ಇದ್ದು 25 ಟಿಎಂಸಿ ನೀರು ಸಂಗ್ರಹವಾಗಿದೆ, 2017 ರಲ್ಲಿ 0.96 ಟಿಎಂ ನೀರಿತ್ತು.
ಕಳೆದ ಜೂನ್ 4ನೇ ತಾರೀಖಿನಿಂದ ಕರಾವಳಿ ಮತ್ತು ಮಲೆನಾಡು ಪ್ರದೇಶಗಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ, ಸರಾಸರಿಗಿಂತ ಶೇ.60 ರಷ್ಟು ಪ್ರಮಾಣದಲ್ಲಿ ಹೆಚ್ಚಿನ ಮಳೆಯಾಗಿದೆ ಎಂದು ಹೇಳಿದ್ದಾರೆ.