ರಸ್ತೆ ಅಪಘಾತಕ್ಕೀಡಾದವರಿಗೆ ನೆರವಾಗಲು ಭಯ ಬೇಡ; ಕಾನೂನು ಇದೆ ನಿಮ್ಮ ರಕ್ಷಣೆಗೆ

ಸಾಮಾನ್ಯವಾಗಿ ರಸ್ತೆ ಅಪಘಾತಕ್ಕೀಡಾದವರಿಗೆ ಸಹಾಯ ಮಾಡಲು ಜನರು ಹಿಂದೆ ಮುಂದೆ ನೋಡುತ್ತಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾಮಾನ್ಯವಾಗಿ ರಸ್ತೆ ಅಪಘಾತಕ್ಕೀಡಾದವರಿಗೆ ಸಹಾಯ ಮಾಡಲು ಜನರು ಹಿಂದೆ ಮುಂದೆ ನೋಡುತ್ತಾರೆ, ನಂತರ ಪೊಲೀಸ್ ಠಾಣೆ, ಕೋರ್ಟ್, ಕಚೇರಿ ಎಂದು ಅಲೆಯಬೇಕಾಗುತ್ತದೆ ಎಂದು ಅಂದುಕೊಳ್ಳುವವರೇ ಹೆಚ್ಚು. ಆದರೆ ರಸ್ತೆ ಅಪಘಾತಕ್ಕೀಡಾದವರನ್ನು ಕಾಪಾಡುವ ಜನರನ್ನು ರಕ್ಷಿಸುವ ಕಾನೂನುಗಳು ಕೂಡ ನಮ್ಮಲ್ಲಿವೆ. ಆದರೆ ಅವುಗಳ ಬಗ್ಗೆ ಬಹುತೇಕ ಮಂದಿಗೆ ಅರಿವು ಇರುವುದಿಲ್ಲ.

ಕಳೆದ ಭಾನುವಾರ ಕೆಎಸ್ಆರ್ ಟಿಸಿ ಭದ್ರತಾ ಸಿಬ್ಬಂದಿ ಸಿದ್ದು ಹೂಗಾರ್ ಬೆಂಗಳೂರಿನ ಮೈಸೂರು ರಸ್ತೆಯ ಮೇಲ್ಸೇತುವೆಯಲ್ಲಿ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದಾಗ ದಾರಿಹೋಕರು ಯಾರೊಬ್ಬರೂ ಅವರನ್ನು ಆಸ್ಪತ್ರೆಗೆ ದಾಖಲಿಸುವ ಕಾಳಜಿ, ಔದಾರ್ಯ ತೋರಿಸಲಿಲ್ಲ. ಬದಲಿಗೆ ಅವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಫೋಟೋ, ವಿಡಿಯೊವನ್ನು ತೆಗೆದುಕೊಳ್ಳುವುದರಲ್ಲಿಯೇ ನಿರತರಾಗಿದ್ದರು.

ಸಿದ್ದು ಹೂಗಾರ್ ಪ್ರಾಣ ಕಳೆದುಕೊಂಡರು. ಕೇವಲ 10 ನಿಮಿಷಕ್ಕೆ ಮೊದಲು ವೈದ್ಯರ ಬಳಿಗೆ ಕರೆತರುತ್ತಿದ್ದರೆ ಅವರ ಪ್ರಾಣ ಕಾಪಾಡಬಹುದಿತ್ತು ಎಂದು ವೈದ್ಯರು ಹೇಳಿದ್ದಾರೆ.2016ರ ಫೆಬ್ರವರಿಯಲ್ಲಿ ಹರೀಶ್ ನಂಜಪ್ಪ ಎಂಬುವವರಿಗೆ ಕೂಡ ಇದೇ ರೀತಿಯ ಪರಿಸ್ಥಿತಿ ಎದುರಾಗಿತ್ತು.

ಕರ್ನಾಟಕ ಸರ್ಕಾರ ಕರ್ನಾಟಕ ಪರೋಪಕಾರ ಮತ್ತು ವೈದ್ಯಕೀಯ ವೃತ್ತಿಪರ ಕಾಯ್ದೆ 2016ನ್ನು ಜಾರಿಗೆ ತಂದಿತ್ತು. ಅದರಡಿ ಅಪಘಾತಕ್ಕೀಡಾದ ವ್ಯಕ್ತಿಗಳಿಗೆ ಸಹಾಯ ಮಾಡಿದವರಿಗೆ ಯಾವುದೇ ಕಾನೂನಾತ್ಮಕ ಅಥವಾ ಕಾರ್ಯವಿಧಾನದ ಕಿರುಕುಳ ನೀಡಬಾರದೆಂದು ಹೇಳಲಾಗಿದೆ. ಆದರೆ ಇದರ ಬಗ್ಗೆ ಜನರಿಗೆ ಅರಿವು ಇಲ್ಲ ಎನ್ನುತ್ತಾರೆ ತಜ್ಞರು.

ವ್ಯಕ್ತಿ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರು ಚಿಕಿತ್ಸೆ ಆರಂಭಿಸುವವರೆಗಿನ ಅವಧಿಯು ಅತ್ಯಮೂಲ್ಯವಾಗಿರುತ್ತದೆ. ಅಪಘಾತಕ್ಕೀಡಾದ ಮೊದಲ ಗಂಟೆಯನ್ನು ಗೋಲ್ಡನ್ ಅವರ್ ಎಂದು ಕರೆಯುತ್ತಾರೆ. ಆದರೆ ಅವರ ಸಹಾಯಕ್ಕೆ ಜನರು ಬರಬೇಕಷ್ಟೆ. ಈ ನಿಟ್ಟಿನಲ್ಲಿ ಸರ್ಕಾರಗಳು ಮತ್ತು ಸರ್ಕಾರೇತರ ಸಂಘಟನೆಗಳು ಜನತೆಯಲ್ಲಿ ಅರಿವು ಮೂಡಿಸಬೇಕಿದೆ ಎನ್ನುತ್ತಾರೆ ಸೇವ್ ಲೈಫ್ ಫೌಂಡೇಶನ್ ನ ಸ್ಥಾಪಕ ಪಿಯೂಷ್ ತೆವಾರಿ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ ಶ್ರೀನಿವಾಸ್ ಗೌಡ, ಕೆಲವು ಪರೋಪಕಾರಿಗಳು ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿರುವವರನ್ನು ತಮ್ಮ ವಾಹನದಲ್ಲಿಯೇ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ ಉದಾಹರಣೆಗಳು ಕೂಡ ಇವೆ. ಅಂತವರಿಗೆ ಇಲಾಖೆ ಪ್ರೋತ್ಸಾಹ ನೀಡುತ್ತದೆ ಎಂದರು.

ಇನ್ನು ಅಪಘಾತಕ್ಕೀಡಾದವರ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಿಂದ ಹಾಕುವುದು ಅಮಾನವೀಯ ಕೆಲಸವಾಗಿದ್ದು ಈ ಬಗ್ಗೆ ಜನರಿಗೆ ತಿಳಿಹೇಳಬೇಕಿದೆ ಎನ್ನುತ್ತಾರೆ ಅವರು.

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆಯಡಿ ರಸ್ತೆ ಅಪಘಾತಕ್ಕೀಡಾದವರಿಗೆ 48 ಗಂಟೆಗಳವರೆಗೆ ಉಚಿತ ವೈದ್ಯಕೀಯ ಸೇವೆ ನೀಡಲಾಗುತ್ತದೆ. ಇದು ರಸ್ತೆ ಅಪಘಾತಕ್ಕೀಡಾದ ಎಲ್ಲಾ ರೋಗಿಗಳಿಗೆ ಅನ್ವಯವಾಗುತ್ತದೆ. ಇಲ್ಲಿ ಹಣಕಾಸು ಸ್ಥಿತಿಗತಿ, ಜಾತಿ, ಧರ್ಮ ಯಾವುದೇ ಲೆಕ್ಕಾಚಾರ ಹಾಕದೆ ಎಲ್ಲರಿಗೂ ಮೊದಲ 48 ಗಂಟೆಗಳ ಚಿಕಿತ್ಸೆಯನ್ನು ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com