ಹಣ ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳು; ತೀವ್ರ ಸಂಕಷ್ಟದಲ್ಲಿ ಕಬ್ಬು ಬೆಳೆಗಾರರು

ಇತ್ತೀಚಿನ ವರ್ಷಗಳಲ್ಲಿ ಕೃಷಿ ವಲಯದಲ್ಲಿ ಸಂಕಷ್ಟ ಎದುರಿಸುವ ಅನೇಕ ರೈತರು ಮನನೊಂದು ಅನೇಕ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಳಗಾವಿ: ಇತ್ತೀಚಿನ ವರ್ಷಗಳಲ್ಲಿ ಕೃಷಿ ವಲಯದಲ್ಲಿ ಸಂಕಷ್ಟ ಎದುರಿಸುತ್ತಿರುವ ಅನೇಕ ರೈತರು ಮನನೊಂದು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ಇದು ಕಬ್ಬು ಬೆಳೆಗಾರರನ್ನೂ  ಹೊರತುಪಡಿಸಿಲ್ಲ.

ಕಬ್ಬು ಹೆಚ್ಚು ಬೆಳೆಯುವ ಬಾಗಲಕೋಟೆ, ವಿಜಯಪುರ, ಬೆಳಗಾವಿ, ಮಂಡ್ಯ, ಮೈಸೂರು ಜಿಲ್ಲೆಗಳ ರೈತರಿಗೆ ಸಕ್ಕರೆ ಕಾರ್ಖಾನೆ ಮಾಲೀಕರು 2017-18ನೇ ಸಾಲಿನಲ್ಲಿ ಸುಮಾರು 500 ಕೋಟಿ ರೂಪಾಯಿ ಹಣ ನೀಡಲು ಬಾಕಿ ಉಳಿಸಿಕೊಂಡಿದ್ದಾರೆ. ಇಡೀ ಕರ್ನಾಟಕದಲ್ಲಿ ಕಳೆದ ವರ್ಷ 1500 ಕೋಟಿ ರೂಪಾಯಿಗಳು ರೈತರಿಗೆ ಸಕ್ಕರೆ ಕಾರ್ಖಾನೆ ಮಾಲೀಕರಿಂದ ಬರಬೇಕಾಗಿದೆ. ಕೇವಲ ವಿಜಯಪುರವೊಂದರಲ್ಲಿ 229 ಕೋಟಿ ರೂಪಾಯಿ, ಬೆಳಗಾವಿಯಲ್ಲಿ 129 ಕೋಟಿ ರೂಪಾಯಿ ಮತ್ತು ಬಾಗಲಕೋಟೆಯಲ್ಲಿ 143 ಕೋಟಿ ರೂಪಾಯಿಗಳು ಬಾಕಿ ಉಳಿದುಕೊಂಡಿವೆ.

ಇನ್ನೊಂದೆಡೆ, ವಿದೇಶಗಳಿಂದ ಸಕ್ಕರೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಕಳೆದ ವರ್ಷ 5 ಲಕ್ಷ ಮೆಟ್ರಿಕ್ ಟನ್ ಸಕ್ಕರೆಯನ್ನು ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳಲಾಗಿದೆ. ಇದು ನಮ್ಮ ರಾಜ್ಯದ ಕಬ್ಬು ಬೆಳೆಗಾರರ ಮೇಲೆ ತೀವ್ರ ಪರಿಣಾಮ ಬೀರಿದೆ. ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ಪ್ರತಿ ಕೆಜಿ ಸಕ್ಕರೆಗೆ 29 ರೂಪಾಯಿ ಬೆಂಬಲ ಬೆಲೆಯನ್ನು ಘೋಷಿಸಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಮಾರಾಟವಾಗದಿರುವ ಸಕ್ಕರೆ ಕಾರ್ಖಾನೆಗಳಲ್ಲಿ ಸಂಗ್ರಹವಾಗಿರುತ್ತದೆ. ಹೀಗಾಗಿ ಕಾರ್ಖಾನೆ ಮಾಲೀಕರಿಗೆ ರೈತರಿಗೆ ಹಣ ನೀಡಲು ಸಾಧ್ಯವಾಗುವುದಿಲ್ಲ. ಇತ್ತೀಚೆಗಷ್ಟೇ ಸರ್ಕಾರ ಸಕ್ಕರೆ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿದೆ ಮತ್ತು ಕಬ್ಬು ಬೆಳೆಗಾರರ ರಕ್ಷಣೆಗೆ ಬೇರೆ ಕ್ರಮಗಳನ್ನು ಅನುಸರಿಸಿದೆ ಎನ್ನುತ್ತಾರೆ.

ಕಳೆದ ಕೆಲ ವರ್ಷಗಳಲ್ಲಿ ನಮ್ಮ ರಾಜ್ಯದಲ್ಲಿ ಅನೇಕ ಕಬ್ಬು ಬೆಳೆಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಲ್ಲಿ ಕೆಲವರು ತಮ್ಮ ಅನಾರೋಗ್ಯಕ್ಕೆ ವೈದ್ಯಕೀಯ ಸೇವೆ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣ ನೀಡಿ ಜೀವ ಕಳೆದುಕೊಂಡಿದ್ದಾರೆ. ತಮ್ಮ ಬಾಕಿ ಹಣವನ್ನು ಹಿಂತಿರುಗಿಸುವಂತೆ ಅನೇಕ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಸರ್ಕಾರ ಮಾತ್ರ ರೈತರ ಸಾಲಮನ್ನಾ ವಿಚಾರದಲ್ಲಿಯೇ ಮಗ್ನವಾಗಿದ್ದು ಸಕ್ಕರೆ ಕಾರ್ಖಾನೆಗಳಲ್ಲಿ ಬೆಳೆಗಾರರ ಬಾಕಿ ಹಣವನ್ನು ಹಿಂತಿರುಗಿಸುವುದರತ್ತ ಗಮನ ಹರಿಸುತ್ತಿಲ್ಲ.

ಸರ್ಕಾರದ ಮಾರ್ಗಸೂಚಿ ಪ್ರಕಾರ, ಸಕ್ಕರೆ ಕಾರ್ಖಾನೆಗಳು ಸಕ್ಕರೆ ಕಾರ್ಖಾನೆಗಳು ರೈತರಿಂದ ಕಬ್ಬು ಖರೀದಿಸಿ 15 ದಿನಗಳೊಳಗೆ ಹಣ ನೀಡಬೇಕು. ಇಲ್ಲದಿದ್ದರೆ ಬಡ್ಡಿಸಹಿತ ರೈತರಿಗೆ ಅವರ ಹಣ ನೀಡಬೇಕಾಗುತ್ತದೆ.

ಸಚಿವ ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆ ಕೂಡ ರೈತರ ಕೋಟ್ಯಂತರ ರೂಪಾಯಿ ಹಣವನ್ನು ಬಾಕಿ ಉಳಿಸಿಕೊಂಡಿದೆ. ಬೆಳಗಾವಿಯ ರೈತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com