1865ರ ನಂತರದ ಆಸ್ತಿಗಳ ದಾಖಲಾತಿ ದಾಖಲೆಗಳ ಡಿಜಿಟಲೀಕರಣ; ಅಧಿಕಾರಿಗಳಿಗೆ ಭಾಷೆ ಸಮಸ್ಯೆ

1865ನೇ ಇಸವಿಯಷ್ಟು ಹಳೆಯ ಆಸ್ತಿಗಳ ಮುದ್ರಾಂಕ ಮತ್ತು ನೋಂದಣಿ ಕಾರ್ಯವನ್ನು ಇಲಾಖೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: 1865ನೇ ಇಸವಿಯಷ್ಟು ಹಳೆಯ ಆಸ್ತಿಗಳ ಮುದ್ರಾಂಕ ಮತ್ತು ನೋಂದಣಿ ಕಾರ್ಯವನ್ನು ರಾಜ್ಯ ಸರ್ಕಾರದ ಇಲಾಖೆ ಡಿಜಿಟಲೀಕರಣಗೊಳಿಸಲು ಹೊರಟಿದ್ದು ಪ್ರಾಪರ್ಟಿ ಡೀಡ್ಸ್ ನಲ್ಲಿ ಹಲವು ಭಾಷೆಗಳ ಬಳಕೆ ಅಧಿಕಾರಿಗಳಿಗೆ ಮುಖ್ಯ ಸಮಸ್ಯೆಯಾಗಿದೆ. ಹಳೆಗನ್ನಡ, ಮರಾಠಿ, ಉರ್ದು ಮತ್ತು ತೆಲುಗು ಭಾಷೆಗಳನ್ನು ಡಿಜಿಟಲ್ ಭಾಷೆಗೆ ಬದಲಾಯಿಸುವುದು ಅಧಿಕಾರಿಗಳಿಗೆ ಸವಾಲಾಗಿದೆ.

ಪ್ರಸ್ತುತ 2004ರಿಂದ ನಂತರದ ಆಸ್ತಿಗಳ ದಾಖಲಾತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತದೆ. ಇನ್ನು ಮುಂದೆ ಸರ್ಕಾರ 1865ರಿಂದ 2004ರವರೆಗೆ 140 ವರ್ಷಗಳ ಹಳೆಯ ಆಸ್ತಿಗಳ ದಾಖಲೆಗಳನ್ನು ಸಹ ಡಿಜಿಟಲೀಕರಣಗೊಳಿಸಲು ಮುಂದಾಗಿರುವುದು ಅಧಿಕಾರಿಗಳಿಗೆ ತಲೆನೋವಾಗಿದೆ.

ಆಸ್ತಿಗಳ ಮುದ್ರಣ ಮತ್ತು ನೋಂದಣಿಯನ್ನು ಡಿಜಿಟಲೀಕರಣಗೊಳಿಸಲಾಗುವುದು ಎಂದು ಕಳೆದ ಫೆಬ್ರವರಿ ಬಜೆಟ್ ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಆಸ್ತಿಗಳ ದಾಖಲೆಗಳನ್ನು ಹಂತ ಹಂತವಾಗಿ ಡಿಜಿಟಲೀಕರಣಗೊಳಿಸಲು ಸೂಕ್ಷ್ಮ ರಕ್ಷಣ ಅಭಿಲೇಖಗಳು(ಸುರಭಿ) ಎಂಬ ಯೋಜನೆಯನ್ನು ಆರಂಭಿಸಿದ್ದರು ಮತ್ತು ಅದಕ್ಕಾಗಿ 25 ಕೋಟಿ ರೂಪಾಯಿಗಳ ಅನುದಾನ ಕೂಡ ಬಿಡುಗಡೆ ಮಾಡಿದ್ದರು. ಯೋಜನೆಯನ್ನು ಇದೀಗ ಪುಣೆ ಮೂಲದ ಅಡ್ವಾನ್ಸ್ ಡ್ ಕಂಪ್ಯೂಟಿಂಗ್ ಅಭಿವೃದ್ಧಿ ಕೇಂದ್ರಕ್ಕೆ(ಸಿ-ಡ್ಯಾಕ್) ನೀಡಲಾಗಿದೆ.

ಕರ್ನಾಟಕದಲ್ಲಿ ಆಸ್ತಿಗಳ ದಾಖಲೆಗಳ ಡಿಜಿಟಲೀಕರಣ 2005ರಲ್ಲಿ ಆರಂಭವಾಯಿತು. ಅಲ್ಲಿಂದ ಪ್ರತಿವರ್ಷ ಸರಾಸರಿ 15 ಲಕ್ಷ ಆಸ್ತಿಗಳ ದಾಖಲಾತಿ ಡಿಜಿಟಲೀಕರಣವಾಗುತ್ತದೆ. ಆಪ್ಟಿಕಲ್ ಕ್ಯಾರೆಕ್ಟರ್ ರಿಕೊಗ್ನಿಶನ್(ಒಸಿಆರ್) ಬಳಸಿಕೊಂಡು 100 ವರ್ಷಗಳಷ್ಟು ಹಳೆಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಬಹುದು. ಆದರೆ ನಮಗೆ ಸವಾಲು ಇರುವುದು, ಕರ್ನಾಟಕದಲ್ಲಿ ಆಸ್ತಿಗಳ ದಾಖಲಾತಿ ವಿವಿಧ ಭಾಷೆಗಳಲ್ಲಿರುತ್ತವೆ. ಉದಾಹರಣೆಗೆ ಹಳೆ ಮೈಸೂರು ಪ್ರಾಂತ್ಯದಲ್ಲಿ ಕನ್ನಡದಲ್ಲಿ ಮತ್ತು ಹಳೆಗನ್ನಡದಲ್ಲಿ ಇದ್ದರೆ, ಹೈದರಾಬಾದ್-ಕರ್ನಾಟಕ ಭಾಗಗಳಲ್ಲಿ ಉರ್ದು ಭಾಷೆಯಲ್ಲಿರುತ್ತದೆ. ಬೆಳಗಾವಿ ಸುತ್ತಮುತ್ತ ಮರಾಠಿಯಲ್ಲಿ, ಆಂಧ್ರ ಗಡಿಭಾಗದಲ್ಲಿ ತೆಲುಗಿನಲ್ಲಿ ಮತ್ತು ಇನ್ನು ಕೆಲವು ಕಡೆಗಳಲ್ಲಿ ತಮಿಳು ಭಾಷೆಗಳಲ್ಲಿ ಕೂಡ ಇರುತ್ತವೆ ಎನ್ನುತ್ತಾರೆ ನೋಂದಣಿ ಇಲಾಖೆ  ಇನ್ಸ್ ಪೆಕ್ಟರ್ ಜನರಲ್, ಮುದ್ರಾಂಕ ಇಲಾಖೆ ಆಯುಕ್ತ ಡಾ ಕೆ ವಿ ತ್ರಿಲೋಕ್ ಚಂದ್ರ.

ಐತಿಹಾಸಿಕ ಅಧ್ಯಯನಕ್ಕೆ ಸಹಕಾರಿ: 100ರಿಂದ 150 ವರ್ಷಗಳ ಹಳೆಯ ಆಸ್ತಿಗಳ ದಾಖಲಾತಿಯ ಡಿಜಿಟಲೀಕರಣದಿಂದ ಐತಿಹಾಸಿಕ ಅಧ್ಯಯನಕ್ಕೆ ಸಹಕಾರಿಯಾಗಬಹುದು. ಸಂಶೋಧನೆಗೆ ಬಳಕೆಯಾಗಬಹುದು.ಮೈಸೂರು ರಾಜ್ಯದಲ್ಲಿ 1831ರಿಂದ 1881ರವರೆಗೆ ಬ್ರಿಟಿಷ್ ಲೀವಿನ್ ಬೆಂತಮ್ ಬೌರಿಂಗ್ ಕಮಿಷನರ್ ಆಗಿದ್ದರು. ಅವರು ಎಲ್ಲಾ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತಂದರು. ಅದರ ಹೆಸರು ಅಟಾರ ಕಚೇರಿ ಎಂದಾಗಿದ್ದು ಇಂದು ಬೆಂಗಳೂರಿನ ಹೈಕೋರ್ಟ್ ಇರುವಲ್ಲಿ ಆ ಕಚೇರಿಯಿದ್ದಿತು. ಸರ್ಕಾರದ ವಿವಿಧ 18 ಇಲಾಖೆಗಳು ಈ ಕಚೇರಿಯಲ್ಲಿದ್ದವು. ಇದರ ಪ್ರಕಾರ ರಾಜ್ಯ ಸರ್ಕಾರದ ಬಳಿ 1865ರ ಹೊತ್ತಿನ ದಾಖಲೆಗಳು ಸಿಗುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com