ಬೀದರ್ ಮಕ್ಕಳ ಕಳ್ಳ ಶಂಕೆ: ಪ್ರಾಣಿಗಳೂ ಕೂಡ ಇಷ್ಟೊಂದು ಕ್ರೂರಿಯಾಗಿರೊಲ್ಲ; ಹತ್ಯೆಯಾದ ಟೆಕ್ಕಿ ಕುಟುಂಬ

ಪ್ರಾಣಿಗಳೂ ಕೂಡ ಇಷ್ಟೊಂದು ಕ್ರೂರಿಗಳಾಗಿರುವುದಿಲ್ಲ. ಹಸಿವಾದಾಗ ಮಾತ್ರ ದಾಳಿ ಇತರೆ ಪ್ರಾಣಿಗಳ ಮೇಲೆ ದಾಳಿ ಮಾಡುತ್ತವೆ ಎಂದು ಪುತ್ರನನ್ನು ಕಳೆದುಕೊಂಡ ದುಃಖದಲ್ಲಿರುವ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ...
ಟೆಕ್ಕಿ ಆಝಾಮ್ ತಂದೆ
ಟೆಕ್ಕಿ ಆಝಾಮ್ ತಂದೆ
ಹೈದರಾಬಾದ್: ಪ್ರಾಣಿಗಳೂ ಕೂಡ ಇಷ್ಟೊಂದು ಕ್ರೂರಿಗಳಾಗಿರುವುದಿಲ್ಲ. ಹಸಿವಾದಾಗ ಮಾತ್ರ ದಾಳಿ ಇತರೆ ಪ್ರಾಣಿಗಳ ಮೇಲೆ ದಾಳಿ ಮಾಡುತ್ತವೆ ಎಂದು ಪುತ್ರನನ್ನು ಕಳೆದುಕೊಂಡ ದುಃಖದಲ್ಲಿರುವ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಹೈದರಾಬಾದ್ ಮೂಲದ ಮೂವರು ಯುವಕರಾದ ತಲಹಾಂ, ಸಲ್ಮಾನ್, ಆಝಾಮ್ ತಾಲೂಕಿನ ಹಂದಿಕೇರಾ ಗ್ರಾಮದ ಗೆಳೆಯನಾದ ಬಶೀರ್ ಎಂಬ ಗೆಳೆಯನ ಮನೆಗೆ ಬಂದಿದ್ದರು. ಇವರಲ್ಲಿ ಕತಾರ್ ದೇಶದಲ್ಲಿ ಓದು ಮುಗಿಸಿ ಹಿಂದುರಿಗಿದ್ದ ತಲಹಾಂ ಎಂಬುವವರು ಸ್ವದೇಶದಿಂದ ಮರಳಿದ್ದರಿಂದ ಬಶೀರ್ ಅವರೇ ಮೂವರನ್ನೂ ಮನೆಗೆ ಊಟಕ್ಕೆ ಆಹ್ವಾನಿಸಿದ್ದರು. 
ಹೀಗೆ ಬಂದವರು ಕಮಲನಗರ ತಾಲೂಕಿನ ಮುರ್ಕಿ ಶಾಲೆಯ ಹೈಸ್ಕೂಲ್ ಹೆಣ್ಣುಮಕ್ಕಳನ್ನು ಕಂಡು ಖುಷಿಯಿಂದ ತಾವು ತಂದಿದ್ದ ವಿದೇಶಿ ಚಾಕೋಲೇಟ್ ನೀಡಿದ್ದಾರೆ. 
ಇದನ್ನು ತಪ್ಪಾಗಿ ತಿಳಿದ ಗ್ರಾಮಸ್ಥರು ಇವರನ್ನು ಮಕ್ಕಳ ಕಳ್ಳರೆಂದು ಆರೋಪಿಸಿ ಹಲ್ಲೆಗೆ ಮುಂದಾಗಿದ್ದಾರೆ. ಗ್ರಾಮಸ್ಥರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಈ ಮೂವರು ಕಾರನ್ನೇರಿ ವೇಗವಾಗಿ ಹೊರಟಿದ್ದಾರೆ. 
ಅಪರಿಮಿತ ವೇಗದಿಂದ ಚಲಿಸುತ್ತಿದ್ದ ಅವರ ಕಾರು ನಿಯಂತ್ರಣ ತಪ್ಪಿ ಹಾದಿ ಬದಿಯಲ್ಲಿ ಬೈಕ್ ನೊಂದಿಗೆ ನಿಂತಿದ್ದ ಉಮೇಶ್ ಬಿರಾದಾರ ಅವರಿಗೆ ಡಿಕ್ಕಿ ಹೊಡೆದು ಬಳಿಕ ಪಕ್ಕದಲ್ಲಿಯೇ ಇದ್ದ 25 ಅಡಿ ಆಳದ ಕಂದಕ್ಕೆ ಬಿದ್ದಿದೆ. 
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂವರನ್ನೂ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಗ್ರಾಮಸ್ಥರಿಗೂ ಪೊಲೀಸರಿಗೂ ಚಕಮಕಿ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದು, ಪೊಲೀಸರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಈ ಸಂಘರ್ಷದ ನಡುವೆಯೇ ಪೊಲೀಸರು ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಈ ಮೂವರಲ್ಲಿ ಆಝಾಮ್ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದು, ಉಳಿದಿಬ್ಬರನ್ನು ಔರಾದ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. 
ಆಝಾಮ್ ಕುಟುಂಬ ಇದೀಗ ದುಃಖ ಮನೆ ಮಾಡಿದೆ. ಆಝಾಮ್'ಗೆ 2 ವರ್ಷದ ಮಗುವಿದೆ. ತಂದೆಯನ್ನೂ ಕಳೆದುಕೊಂಡಿರುವ ವಿಚಾರವನ್ನು ಅರಿಯಲಾಗದ ಮಗು ತಂದೆ ಎಲ್ಲಿ... ಎಲ್ಲಿ... ಎಂದು ಪದೇ ಪದೇ ಅಜ್ಜನ ಬಳಿ ಕೇಳುತ್ತಿದೆ. 
ತಂದೆ ಶೀಘ್ರದಲ್ಲಿಯೇ ಬರುತ್ತಾರೆಂದು ಮೊಮ್ಮಗನನ್ನು ಆಝಾಮ್ ತಂದೆ ಮೊಹಮ್ಮದ್ ಒಸ್ಮಾನ್ ಸಮಾಧಾನ ಪಡಿಸಿ ಊಟ ಮಾಡಿಸುತ್ತಿರುವ ದೃಶ್ಯಾವಳಿಗಳು ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡುತ್ತಿದೆ. 
ಘಟನೆಗೂ ಕೆಲವೇ ಗಂಟೆಗಳ ಮುನ್ನ ಆಝಾಮ್ ತಂದೆ ಒಸ್ಮಾನ್ ಅವರು ಗುಂಪೊಂದು, ಕಲ್ಲು, ದೊಣ್ಣೆಗಳನ್ನು ಹಿಡಿದು ಕಾರಿನ ಮೇಲೆ ದಾಳಿ ಮಾಡಲು ಬರುತ್ತಿದ್ದ ದೃಶ್ಯವನ್ನು ನೋಡಿದ್ದರು. 
ಘಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಆಝಾಮ್ ತಂದೆ, ಇದು ಜಂಗಲ್ ರಾಜ್. ಮನುಷ್ಯರಿಗಿಂತ ಪ್ರಾಣಿಗಳೇ ಎಷ್ಟೋ ಉತ್ತಮ. ಹಸಿವಾದಾಗ ಮಾತ್ರ ಇತರೆ ಪ್ರಾಣಿಗಳ ಮೇಲೆ ದಾಳಿ ಮಾಡುತ್ತವೆ ಎಂದು ಹೇಳಿದ್ದಾರೆ. 
ಇತರೆ ಮನುಷ್ಯರನ್ನು ಕೊಲ್ಲುವಂತಹದ್ದೇನಾಗಿದೆ ಎಂಬುದನ್ನು ಎಲ್ಲರೂ ಚಿಂತಿಸಬೇಕು. ಜನರು ಏನನ್ನು ಓದುತ್ತಿದ್ದಾರೆ? ರಾಜ್ಯ ಜಂಗಲ್ ರಾಜ್ ಆಗಿ ಹೋಗಿದೆ. ಹೊರಗೆ ಹೋಗಿ ಕೆಲಸ ಮಾಡುವುದಕ್ಕೆ ಜನರು ಹೆದರುತ್ತಿದ್ದಾರೆ ಎಂದು ಅಝಾಮ್ ಸಂಬಂಧಿ ಮಿರ್ ಅನ್ಸಾರ್ ಅಲಿ ಅವರು ತಿಳಿಸಿದ್ದಾರೆ. 
ಬ್ರಿಟನ್'ನಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದ ಅಝಾಮ್ ಸೌರಿ ಅರೇಬಿಯಾ ಹಾಗೂ ಖತಾರ್ ನಲ್ಲಿ ಹಲವು ಉದ್ಯೋಗಗಳನ್ನು ಮಾಡಿದ್ದರು. ಹೈಟೆಕ್ ಸಿಟಿಯಲ್ಲಿ ಆ್ಯಕ್ಸೆಂಚರ್ ನಲ್ಲಿ ಆಝಾಮ್ ಸಾಫ್ಟೆವೇರ್ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ. ಯೂಟ್ಯೂಬ್ ನ ಪ್ರಾಜೆಕ್ಟ್ ವೊಂದರಲ್ಲಿ ಕೆಲಸ ಕೂಡ ಮಾಡುತ್ತಿದ್ದರು. 
ಅಝಾಮ್'ಗೆ ಮೊಮಹ್ಮದ್ ಅಕ್ರಮ್ ಮತ್ತು ಮೊಹಮ್ಮದ್ ಅಸ್ಲಾಂ ಎಂಬ ಅವಳಿ ಸಹೋದರರಿದ್ದು, ಇಬ್ಬರೂ ಸಹೋದರರೂ ಕೂಡ ಟೆಕ್ಕಿಗಳಾಗಿದ್ದಾರೆ. 
ಗುರುವಾರ ಮತ್ತು ಶುಕ್ರವಾರ ರಜೆ ಇದ್ದ ಕಾರಣ ಆಝಾಮ್ ಶುಕ್ರವಾರ ಮಧ್ಯಾಹ್ನ ಮನೆಯಿಂದ ಹೊರಗೆ ಬಂದಿದ್ದರು. ಕೆಲವೇ ಗಂಟೆಗಳಲ್ಲಿ ಮನೆಗೆ ಹಿಂದಿರುಗುವುದಾಗಿ ಹೇಳಿದ್ದ ಆಝಾಮ್ ಬಾರದ ಲೋಕಕ್ಕೆ ತೆರಳಿದ್ದಾರೆ. 
ಶನಿವಾರ ಬೆಳಿಗ್ಗೆ 3.30ರ ಸುಮಾರಿಗೆ ಆಝಾಮ್ ಕೆಲಸಕ್ಕೆ ಮರಳಬೇಕಿತ್ತು. ರಾತ್ರಿಯಾದರೂ ಮನೆಗೆ ಬಾರದ ಹಿನ್ನಲೆಯಲ್ಲಿ ಸಂಬಂಧಿ ಅನ್ಸಾರ್ ಅಲಿ ಅಝಾಮ್'ಗೆ ಕರೆ ಮಾಡಿದ್ದಾರೆ. ಈ ವೇಳೆ ಕರೆಯನ್ನು ಸ್ವೀಕರಿಸಿದ ಪೊಲೀಸರು ಎಲ್ಲವೂ ಸರಿಯಾಗಿದೆ ಎಂದು ಹೇಳಿದರು. ಆಝಾಮ್ ಜೊತೆಗೆ ಮಾತನಾಡಬೇಕೆಂದು ತಿಳಿಸಿದಾಗ ಗ್ಲೂಕೋಸ್ ಕೊಟ್ಟಿರುವುದಾಗಿ ಹೇಳಿದರು. ಆಝಾಮ್'ನನ್ನು ಎಲ್ಲಿ ಭೇಟಿಯಾಗಬೇಕು ಎಂದು ಕೇಳಿದಾಗ ಪೊಲೀಸರಿಂದ ಯಾವುದೇ ಉತ್ತರಗಳು ಬರಲಿಲ್ಲ. ನಂತರ ಅಝಾಮ್ ಬೀದರ್ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ತಿಳಿಸಿದರು. ಬಳಿಕ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಹೇಳಿದ್ದಾರೆ. 
ಇಂತಹ ಘಟನೆಗಳು ಮರುಕಳುಹಿಸಬಾರದು. ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸಲು ಪೋಷಕರು ಶ್ರಮಪಟ್ಟು ಕೆಲಸ ಮಾಡಬೇಕು. ವಾಟ್ಸ್'ಅಪ್ ಗಳಲ್ಲಿ ಹರಡುತ್ತಿರುವ ಈ ವದಂತಿಗಳನ್ನು ದೂರಾಗಿಸುವಂತೆ ತೆಲಂಗಾಣ ಮತ್ತು ಕರ್ನಾಟಕ ಸರ್ಕಾರದ ಬಳಿ ಮನವಿ ಮಾಡಿಕೊಳ್ಳುತ್ತಿದ್ದೇವೆಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com