
ಬೆಂಗಳೂರು: ಕರ್ನಾಟಕ ಸರ್ಕಾರದ ಚಿಹ್ನೆ ಮತ್ತು ಸಚಿವ ಡಿ ಕೆ ಶಿವಕುಮಾರ್ ಅವರ ಫೋಟೋ ಅದರ ಕೆಳಗೆ ಮುದ್ರಣವಾಗಿರುವ ಚರ್ಮದ ಚೀಲವನ್ನು ನಿನ್ನೆ ಕರ್ನಾಟಕದ ಎಲ್ಲಾ ಸಂಸದರಿಗೆ ಕಳುಹಿಸಿಕೊಡಲಾಗಿತ್ತು. ದೆಹಲಿಯಲ್ಲಿ ಕಾವೇರಿ ನದಿ ನೀರಿನ ವಿವಾದ ಮತ್ತು ಇತರ ಕೆಲ ವಿಷಯಗಳ ಕುರಿತು ಚರ್ಚೆ ನಡೆಸಲು ಸಂಸದರಿಗೆ ಈ ರೀತಿಯಲ್ಲಿ ಆಹ್ವಾನ ನೀಡಲಾಗಿತ್ತು. ಆದರೆ ಅದೀಗ ವಿವಾದಕ್ಕೆ ಕಾರಣವಾಗಿದೆ.
ಕಾರಣ ಆ ಚರ್ಮದ ಬ್ಯಾಗಿನ ಒಳಗೆ ಐಫೋನ್-ಎಕ್ಸ್ ಇದ್ದಿದ್ದು. ದುಬಾರಿ ಬೆಲೆಯ ಐಫೋನ್ -ಎಕ್ಸ್ ನೀಡಿ ಎಲ್ಲಾ ಸಂಸದರನ್ನು ಆಹ್ವಾನಿಸಲಾಗಿತ್ತು. ಈ ಗಿಫ್ಟ್ ನ್ನು ಬಿಜೆಪಿ ಸಂಸದರು ಸಾರಾಸಗಟಾಗಿ ತಿರಸ್ಕರಿಸಿದ್ದಲ್ಲದೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ವಿರುದ್ಧ ಅದನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳಲು ನೋಡುತ್ತಿದ್ದಾರೆ. ರಾಜ್ಯದಲ್ಲಿ ಇಷ್ಟು ಸಮಸ್ಯೆಯಿರುವಾಗ, ರೈತರ ಸಾಲ ಮನ್ನಾ ಮಾಡಲು ಎಲ್ಲಿಂದ ಹಣ ತರುವುದು ಎಂದು ಮುಖ್ಯಮಂತ್ರಿಗಳು ಯೋಚಿಸುತ್ತಿರುವ ಸಂದರ್ಭದಲ್ಲಿ ಸರ್ಕಾರ ಈ ರೀತಿಯ ದುಬಾರಿ ಗಿಫ್ಟ್ ನೀಡುವ ಅಗತ್ಯವೇನಿದೆ ಎಂದು ಬಿಜೆಪಿ ಸಂಸದರು ತಿರಸ್ಕರಿಸಿರುವುದು ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರಕ್ಕೆ ತೀವ್ರ ಮುಜುಗರ ತಂದೊಡ್ಡಿದೆ.
ಈ ಸುದ್ದಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ ಜಲಸಂಪನ್ಮೂಲ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದು, ಸಂಸದರಿಗೆ ಗಿಫ್ಟ್ ಕೊಟ್ಟಿದ್ದು ನಾನು. ಒಳ್ಳೆಯ ಹೃದಯ ಶ್ರೀಮಂತಿಕೆಯಿಂದ ವೈಯಕ್ತಿಕವಾಗಿ ಗಿಫ್ಟ್ ನೀಡಿದ್ದೇನೆ, ಆದರೆ ಕಾಮಾಲೆ ಕಣ್ಣಿಗೆ ಎಲ್ಲವೂ ಕೆಟ್ಟದಾಗಿಯೇ ಕಾಣುತ್ತದೆ ಎಂದು ಹೇಳಿದ್ದಾರೆ.
ಆದರೆ ಬಿಜೆಪಿಯವರು ಮಾತ್ರ ಇದನ್ನು ಸ್ವಾಗತಿಸಿಲ್ಲ. ದೆಹಲಿಯಲ್ಲಿ ಕರೆದಿರುವ ಸಭೆಯನ್ನು ಬಿಜೆಪಿ ಸಂಸದರು ಸ್ವಾಗತಿಸಿದರೆ ಗಿಫ್ಟ್ ನೀಡುವ ಅಗತ್ಯವಿರಲಿಲ್ಲ ಎಂದಿದ್ದಾರೆ. ಬಿಜೆಪಿ ಸಂಸದರಾದ ಶೋಭಾ ಕರಂದ್ಲಾಜೆ ಮತ್ತು ಪಿ ಸಿ ಮೋಹನ್, ಸಂಯಮವನ್ನು ಭೋದಿಸುವ ಸರ್ಕಾರ ದುಂದು ವೆಚ್ಚ ಮಾಡುತ್ತಿದೆ ಎಂದಿದ್ದಾರೆ. ನೈತಿಕ ನೆಲೆಯಲ್ಲಿ, ಸಾರ್ವಜನಿಕ ಹಣವನ್ನು ಪೌರ ಕಾರ್ಮಿಕರಿಗೆ ವೇತನ ನೀಡಲು ಬಳಸಿ ಮತ್ತು ರೈತರ ಸಮಸ್ಯೆಗಳನ್ನು ಬಗೆಹರಿಸಿ ಎಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ.
ಬಿಜೆಪಿ ಸಂಸದರು ಸಲಹೆಯೊಂದಿಗೆ ಗಿಫ್ಟ್ ನ್ನು ಹಿಂತಿರುಗಿಸಿದ ನಂತರ ದೆಹಲಿಯಲ್ಲಿರುವ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿ, ಐಫೋನ್ ನ್ನು ಸಂಸದರಿಗೆ ನೀಡಲು ನಮ್ಮ ಸರ್ಕಾರ ಯಾವುದೇ ಪ್ರಸ್ತಾವನೆ ಪಡೆದಿಲ್ಲ. ನಾನು ಕೂಡ ಯಾವ ಸಂಸದರಿಗೂ ಐಫೋನ್ ಉಡುಗೊರೆ ನೀಡಲು ಆದೇಶ ನೀಡಿರಲಿಲ್ಲ. ಅನಧಿಕೃತವಾಗಿ ಕೊಟ್ಟಿದ್ದರೆ ಅದು ನನಗೆ ತಿಳಿದಿಲ್ಲ, ಯಾರು ಗಿಫ್ಟ್ ಕಳುಹಿಸಿದ್ದರು ಎಂಬುದು ಕೂಡ ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ, ಅಷ್ಟೊಂದು ದುಬಾರಿ ಗಿಫ್ಟ್ ನೀಡುವ ಅಗತ್ಯವಿರಲಿಲ್ಲ. ಸರ್ಕಾರದಲ್ಲಿರುವ ಜನಪ್ರತಿನಿಧಿಗಳು ಜನರಿಗೆ ಸಹಾಯ ಮಾಡಬೇಕು, ಆ ಕೆಲಸವನ್ನು ಅವರು ಮೊದಲು ಮಾಡಲಿ ಎಂದರು. ಬಿಜೆಪಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸರ್ಕಾರ ನೀಡಿದ್ದ ಗಿಫ್ಟ್ ನ ಫೋಟೋ ಹಂಚಿಕೊಂಡಿದೆ.
Advertisement