
ಉಡುಪಿ: ಅಷ್ಟಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ವಿಧಿವಶರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.
ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ನಿನ್ನೆ ತೀವ್ರ ಅನಾರೋಗ್ಯದಿಂದ ಶ್ರೀಗಳು ದಾಖಲಾಗಿದ್ದರು. ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಹೊಟ್ಟೆಯಲ್ಲಿ ತೀವ್ರ ರಕ್ತ ಸ್ರಾವವಾಗಿ ನಿನ್ನೆ ದಾಖಲಾಗಿದ್ದ ಶ್ರೀಗಳನ್ನು ವೈದ್ಯರು ಕಾಲಕಾಲಕ್ಕೆ ನಿಗಾವಹಿಸುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶ್ರೀಗಳು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಉಸಿರಾಟದ ತೊಂದರೆಯಿಂದ ಶ್ರೀಗಳು ಬಳಲುತ್ತಿದ್ದರು.
ಶಿರೂರು ಮಠದ 30ನೇ ಯತಿಗಳಾಗಿದ್ದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಗಳು ಮೂರು ಪರ್ಯಾಯಗಳನ್ನು ಪೂರೈಸಿದ್ದರು. ಶ್ರೀಗಳ ನಿಧನ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ. ಅಲ್ಲದೆ ಸ್ವಾಮೀಜಿ ಗೌರವಾರ್ಥ ಉಡುಪಿಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಇಡೀ ಪಟ್ಟಣ ಶೋಕಸಾಗರದಲ್ಲಿ ಮುಳುಗಿದೆ.
Advertisement