ಮೂರು ವಾರ ಕಳೆಯಿತು; ಇನ್ನೂ ಪ್ರಗತಿ ಕಾಣದ ರೈತರ ಸಾಲಮನ್ನಾ ಪ್ರಕ್ರಿಯೆ

ಕಳೆದ ಜುಲೈ 5ರಂದು ರಾಜ್ಯದ ರೈತರ ಒಂದು ಭಾಗ ಬೆಳೆ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕಳೆದ ಜುಲೈ 5ರಂದು ರಾಜ್ಯದ ರೈತರ ಒಂದು ಭಾಗದ ಬೆಳೆ ಸಾಲವನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದರು.ಅದಾಗಿ ಮೂರು ವಾರಗಳು ಕಳೆದಿದೆ. ಸಾಲಮನ್ನಾ ಪ್ರಕ್ರಿಯೆ ಮಾತ್ರ ಒಂದು ಇಂಚು ಕೂಡ ಮುಂದೆ ಹೋಗಿಲ್ಲ. ವಾಸ್ತವವಾಗಿ ಹೇಳುವುದಾದರೆ ಹಿಂದಿನ ಸಿದ್ದರಾಮಯ್ಯ ಸರ್ಕಾರ ಮಾಡಿದ್ದ ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸಾಲಮನ್ನಾ ಹಣವನ್ನು ಸರ್ಕಾರ ಇನ್ನೂ ಬ್ಯಾಂಕುಗಳಿಗೆ ಸಂಪೂರ್ಣವಾಗಿ ಪಾವತಿಸಿಲ್ಲ.

ಬ್ಯಾಂಕ್ ಅಧಿಕಾರಿಗಳೊಂದಿಗೆ ಎರಡು-ಮೂರು ಸುತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆದಿರುವುದು ಬಿಟ್ಟರೆ ರೈತರ ಸಾಲಮನ್ನಾವನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಮಾರ್ಗಸೂಚಿ ನಿಗದಿಪಡಿಸಿಲ್ಲ. ಇಂದು ಕುಮಾರಸ್ವಾಮಿಯವರು ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿ ಸಭೆಯನ್ನು ನಡೆಸುವ ಸಾಧ್ಯತೆಯಿದೆ. ಅದರಲ್ಲಿ ರಾಜ್ಯದ ಎಲ್ಲಾ ಬ್ಯಾಂಕುಗಳ ಪ್ರತಿನಿಧಿಗಳು ಭಾಗವಹಿಸಿ ರೈತರ ಸಾಲಮನ್ನಾ ವಿಚಾರದಲ್ಲಿ ತಮ್ಮ ನಿಲುವನ್ನು ತಿಳಿಸುವ ಸಾಧ್ಯತೆಯಿದೆ. ಆದರೆ ರೈತರು ಮಾತ್ರ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಬರೀ ಬಾಯಿಮಾತಿನ ಸೇವೆ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ.

ಇದುವರೆಗೆ ಸಹಕಾರಿ ಬ್ಯಾಂಕುಗಳಿಗೆ 1500 ಕೋಟಿ ರೂಪಾಯಿ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. ಇದು ಹಿಂದಿನ ಸಿದ್ದರಾಮಯ್ಯ ಸರ್ಕಾರ ಬಾಕಿ ಉಳಿಸಿಕೊಂಡಿರುವ ಸಾಲದ ಮೊದಲ ಕಂತು ಆಗಿದೆ. ಸರ್ಕಾರ ಇನ್ನೊಂದು ಕಂತಿನ ಹಣವನ್ನು ಪಾವತಿಸಿದರೆ ಮಾತ್ರ ಹಿಂದಿನ ಸರ್ಕಾರ ಘೋಷಿಸಿದ್ದ  ರೈತರ ಸಾಲಮನ್ನಾ ಮುಕ್ತವಾಗುತ್ತದೆಯಷ್ಟೇ. ನಂತರವಷ್ಟೇ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ  ಸರ್ಕಾರದ ಸಾಲಮನ್ನಾ ಪ್ರಕ್ರಿಯೆ ಆರಂಭವಾಗಬೇಕು.

 ಇಂದಿನ ಸಭೆಯಲ್ಲಿ ಬ್ಯಾಂಕಿನ ಪ್ರತಿನಿಧಿಗಳು ಸಾಲಮನ್ನಾ ಮಾಡಬೇಕಾದ ರೈತರ ಖಾತೆಗಳು ಮತ್ತು ಹಣದ ಮೊತ್ತದ ಪಟ್ಟಿಯನ್ನು ಸರ್ಕಾರದ ಮುಂದೆ ಮಂಡಿಸಲಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಎಷ್ಟು ಹಣ ಹೊರೆಯಾಗುತ್ತದೆ ಎಂದು ಗೊತ್ತಾಗಲಿದೆ ಎಂದು ಮೂಲಗಳು ತಿಳಿಸಿವೆ.

ಇಲ್ಲಿಯವರೆಗೆ ಸಾಲಮನ್ನಾ ಪ್ರಕ್ರಿಯೆ ಯಾವುದೂ ಕೂಡ ಅಂತಿಮವಾಗಿಲ್ಲ. ನಮಗೆ ಇನ್ನೂ ಮಾರ್ಗಸೂಚಿ ಸಿಕ್ಕಿಲ್ಲ ಎನ್ನುತ್ತಾರೆ ಅಧಿಕಾರಿಗಳು. ಆದರೆ ರೈತರು ಮಾತ್ರ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಸಾಲಮನ್ನಾಗೆ ಆಗಸ್ಟ್ 15ರವರೆಗೆ ಸರ್ಕಾರಕ್ಕೆ ಕಾಲಾವಕಾಶ ನೀಡಿದ್ದಾರೆ. ಅಷ್ಟರೊಳಗೆ ಸಾಲಮನ್ನಾ ಆಗದಿದ್ದರೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತರ ಒಕ್ಕೂಟ ಎಚ್ಚರಿಕೆ ನೀಡಿದೆ.

ಮೊದಲು ರೈತರ ಎಲ್ಲಾ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದ್ದರು. ನಂತರ ಬೆಳೆ ಸಾಲ ಮಾತ್ರ ಮನ್ನಾ ಮಾಡುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿ ಬರೀ ಸುಳ್ಳು ಹೇಳುತ್ತಿದ್ದಾರೆ ಎನ್ನುತ್ತಾರೆ ಕೋಡಿಹಳ್ಳಿ ಚಂದ್ರಶೇಖರ್. ಸರ್ಕಾರದ ಮೂಲಗಳಿಂದ ತಿಳಿದುಬಂದಿರುವ ಮಾಹಿತಿ ಪ್ರಕಾರ ಸಾಲಮನ್ನಾ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ 3 ತಿಂಗಳು ಆಗಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com