ಗೌರಿ ಹತ್ಯೆ ಪ್ರಕರಣ; ಎಂಎಲ್ಸಿ ಆಪ್ತ ಸಹಾಯಕ ಶಸ್ತ್ರಾಸ್ತ್ರ ಟ್ರೇನರ್

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಆಪ್ತ ಸಹಾಯಕನೇ ಡು ಪೂರೈಕೆ ಹಾಗೂ ಸೈದ್ಧಾಂತಿಕ ವಿರೋಧಿಗಳ ಹತ್ಯೆ ಜಾಲದಲ್ಲಿ ಶಸ್ತ್ರಾಸ್ತ್ರ...
ಗೌರಿ ಲಂಕೇಶ್
ಗೌರಿ ಲಂಕೇಶ್
ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಆಪ್ತ ಸಹಾಯಕನೇ ಡು ಪೂರೈಕೆ ಹಾಗೂ ಸೈದ್ಧಾಂತಿಕ ವಿರೋಧಿಗಳ ಹತ್ಯೆ ಜಾಲದಲ್ಲಿ ಶಸ್ತ್ರಾಸ್ತ್ರ ತರಬೇತುದಾರನಾಗಿ ಕೆಲಸ ಮಾಡಿದ್ದ ಎಂಬ ಸ್ಫೋಟ ಮಾಹಿತಿಯೊಂದು ಇದೀಗ ಬೆಳಕಿಗೆ ಬಂದಿದೆ. 
ಗೌರಿ ಲಂಕೇಶ್ ಹತ್ಯೆಗೆ ಸಂಚು ರೂಪಿಸಿದ್ದ ಮಹಾರಾಷ್ಟ್ರ ಮೂಲದ ಅಮೋಲ್ ಕಾಳೆಗೆ 20 ಸಜೀವ ಗುಂಡುಗಳನ್ನು ಎಂಎಲ್ಸಿ ಆಪ್ತ ಸಹಾಯಕ ರಾಜೇಶ್ ಬಂಗೇರಾ ನೀಡಿದ್ದ. ಆದರೆ, ಆ ಗುಂಡುಗಳೇ ಗೌರಿ ಅವರ ಹತ್ಯೆಗೆ ಬಳಕೆ ಮಾಡಲಾಗಿತ್ತೇ ಎಂಬುದು ಖಚಿತವಾಗಬೇಕಿದೆ. ಈ ನಿಟ್ಟಿನಲ್ಲಿ ಆರೋಪಿಗಳನ್ನು ಎಸ್ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೊಳಪಡಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ. 
ಬಂಧಿತ ರಾಜೇಶ್ ಬಂಗೇರಾ ಮಂಗಳೂರು ಮೂಲಕ ಸಾರ್ವಜನಿಕ ಶಿಕ್ಷಣ ಇಲಾಖೆ ದ್ವಿತೀಯ ದರ್ಜೆಯ ಸಹಾಯಕ ಕಾರ್ಯನಿರ್ವಹಿಸುತ್ತಿದ್ದು, ಮಡಿಕೇರಿ ಮೂಲದವನಾಗಿದ್ದಾನೆ. ಹಲವು ವರ್ಷಗಳಿಂದ ಈತ 2 ಪರವಾನಗಿ ಪಡೆದ ಬಂದೂಕುಗಳನ್ನು ಹೊಂದಿದ್ದು, ಈ ಪರವಾನಗಿಗಳನ್ನು ಬಳಸಿಯೇ ಗುಂಡುಗಳನ್ನು ಖರೀದಿ ಮಾಡುತ್ತಿದ್ದ. ಬಳಿಕ ಅವುಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾನೆಂದು ಹೇಳಲಾಗುತ್ತಿದೆ. 
ಮಂಗಳೂರಿನ ಹಿಂದೂ ಪರ ಸಂಘಟನೆಗಳಲ್ಲಿ ಪ್ರಬಲವಾಗಿ ಗುರುತಿಸಿಕೊಂಡಿದ್ದ ರಾಜೇಶ್, ಈ ಸಂಘಟನೆಯ ಚಟುವಟಿಕೆಗಳಿಂದಾಗಿಯೇ ಮಹಾರಾಷ್ಟ್ರದ ಅಮೋಲ್ ಕಾಳೆಯ ಪರಿಚಯಕ್ಕೆ ಬಂದಿದ್ದ. ಮೊದಲು ಸೈದ್ಧಾಂತಿಕ ವಿಚಾರಗಳ ಚರ್ಚೆಗೆ ಸೀಮಿತವಾಗಿದ್ದ ಈ ಗೆಳೆತನ. ಕ್ರಮೇಣ ತಮ್ಮ ವಿಚಾರಧಾರೆಯ ವಿರೋಧಿಗಳ ಹತ್ಯೆಗೂ ವಿಸ್ತಾರವಾಗಿತ್ತು ಎಂದು ಮೂಲಗಳು ಮಾಹಿತಿ ನೀಡಿವೆ. 
ಅಮೋಲ್ ಕಾಳೆ ಬರೆದಿದ್ದ ಡೈರಿಯಲ್ಲಿ ರಾಜೇಶ್ ಎಂಬ ಹೆಸರಿತ್ತು. ರಾಜೇಶ್ ಸರ್ ಎಂದು ಕಾಳೆ ಬರೆದಿದ್ದ. ಹೀಗಾಗಿ ರಾಜೇಶ್ ಬಗ್ಗೆ ಮಾಹಿತಿ ತಿಳಿಯಲು ಮುಂದಾದಾಗ ವಿಚಾರ ಬೆಳಕಿಗೆ ಬಂದಿತ್ತು. ರಾಜೇಶ್ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲೆ ಹಾಕಲಾಗಿತ್ತು. ವಿಚಾರಣೆ ವೇಳೆ ರಾಜೇಶ್ ತಪ್ಪೊಪ್ಪಿಕೊಂಡಿದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com